ಆಕ್ಸ್‌ಫರ್ಡ್ ಕೊರೋನ ಲಸಿಕೆಯ ಪರೀಕ್ಷಾ ಸ್ವಯಂಸೇವಕ ಸಾವು: ಕ್ಲಿನಿಕಲ್ ಪರೀಕ್ಷೆ ಮುಂದುವರಿಕೆ

Update: 2020-10-22 17:54 GMT

ರಿಯೋ ಡಿ ಜನೈರೊ (ಬ್ರೆಝಿಲ್), ಅ. 22: ಔಷಧ ತಯಾರಿಕಾ ಕಂಪೆನಿ ಆ್ಯಸ್ಟ್ರಝೆನೆಕ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯಗಳು ಜೊತೆಯಾಗಿ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಯ ಕ್ಲಿನಿಕಲ್ ಪರೀಕ್ಷೆಯಲ್ಲಿ ಬ್ರೆಝಿಲ್‌ನ ಓರ್ವ ಸ್ವಯಂಸೇವಕ ಮೃತಪಟ್ಟಿದ್ದಾರೆ ಎಂದು ದೇಶದ ಆರೋಗ್ಯ ಪ್ರಾಧಿಕಾರ ಬುಧವಾರ ತಿಳಿಸಿದೆ.

ಈ ಸಾವಿನ ಹೊರತಾಗಿಯೂ ಲಸಿಕೆಯ ಪರೀಕ್ಷೆ ಮುಂದುವರಿಯಲಿದೆ ಎಂದು ಅದು ಹೇಳಿದೆ. ಈ ವಿಷಯದಲಿ ಅದು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

ಈ ಸುದ್ದಿಯ ಬೆನ್ನಿಗೇ ಆ್ಯಸ್ಟ್ರಝೆನೆಕ ಶೇರುಗಳ ಮೌಲ್ಯ 1.7 ಶೇಕಡದಷ್ಟು ಕುಸಿದಿದೆ.

ಬ್ರಿಟನ್‌ನ ಲಸಿಕೆಯನ್ನು ಖರೀದಿಸಿ ರಿಯೋ ಡಿ ಜನೈರೊದಲ್ಲಿರುವ ಫಿಯೊಕರ್ಝ್ ಸಂಶೋಧನಾ ಕೇಂದ್ರದಲ್ಲಿ ಉತ್ಪಾದಿಸಲು ಬ್ರೆಝಿಲ್ ಸರಕಾರ ಈಗಾಗಲೇ ನಿರ್ಧರಿಸಿದೆ. ಅದೇ ವೇಳೆ, ಚೀನಾದ ಕೊರೋನ ವೈರಸ್ ಲಸಿಕೆ ಸಿನೊವ್ಯಾಕ್‌ನ್ನು ಸಾವೊ ಪೌಲೊದ ಸರಕಾರಿ ಸಂಶೋಧನಾ ಕೇಂದ್ರ ಬುಟಾಂಟಾನ್ ಇನ್‌ಸ್ಟಿಟ್ಯೂಟ್‌ನಲ್ಲಿ ಪರೀಕ್ಷಿಸಲಾಗುತ್ತಿದೆ.

ಜಾಗತಿಕ ಕೊರೋನ ರೋಗಿಗಳ ಸಂಖ್ಯೆಯಲ್ಲಿ ಅಮೆರಿಕ ಮತ್ತು ಭಾರತದ ಬಳಿಕ ಬ್ರೆಝಿಲ್ ಮೂರನೇ ಸ್ಥಾನದಲ್ಲಿದೆ. ಅಲ್ಲಿ 52 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡಿದೆ. 1.54 ಲಕ್ಷಕ್ಕೂ ಮಂದಿ ಅಲ್ಲಿ ಈ ಸಾಂಕ್ರಾಮಿಕದಿಂದಾಗಿ ಸಾವಿಗೀಡಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಅದು ಅಮೆರಿಕದ ಬಳಿಕ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News