ಗಾಝಿಯಾಬಾದ್ ದಲಿತರ ಮತಾಂತರ ನಂತರ ‘ಮತಾಂತರ ವದಂತಿಗಳ’ ಕುರಿತು ಎಫ್‌ಐಆರ್ ದಾಖಲು

Update: 2020-10-23 08:13 GMT

 ಗಾಝಿಯಾಬಾದ್, ಅ.23: ಗಾಝಿಯಾಬಾದ್‌ನ ಕರೇರಾ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ 236 ಮಂದಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶ ಪೊಲೀಸರು ‘ಧಾರ್ಮಿಕ ಮತಾಂತರ ಕುರಿತು ಸುಳ್ಳು ವದಂತಿ’ ಹರಡಿದ್ದಕ್ಕಾಗಿ ‘ಅಪರಿಚಿತ ವ್ಯಕ್ತಿಗಳ’ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಗುರುವಾರ ಸಾಹಿಬಾಬಾದ್ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತನೆಂದು ಹೇಳಲಾದ 23 ವರ್ಷದ ಮೊಂಟು ಚಂಡೇಲ್ ಎಂಬ ವ್ಯಕ್ತಿ ದಾಖಲಿಸಿದ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 153 ಎ ಹಾಗೂ 505 ಅನ್ವಯ ಎಫ್‌ಐಆರ್ ದಾಖಲಾಗಿದೆ.

'230 ಜನರ ಧಾರ್ಮಿಕ ಮತಾಂತರದ ಕುರಿತಂತೆ ಕೆಲ ಅಪರಿಚಿತ ವ್ಯಕ್ತಿಗಳು ಹಾಗೂ ಸಂಘಟನೆಗಳು ಸುಳ್ಳು ವದಂತಿಗಳನ್ನು ಹರಡಿದ್ದಾರೆ. ಧಾರ್ಮಿಕ ಮತಾಂತರ ಕುರಿತಂತೆ ನೀಡಲಾದ ಪ್ರಮಾಣಪತ್ರಗಳಲ್ಲಿ ಹೆಸರು, ವಿಳಾಸ ಹಾಗೂ ನೀಡಿದ ದಿನಾಂಕ ಹಾಗೂ ನೋಂದಣಿ ಸಂಖ್ಯೆಯಿಲ್ಲ, ಯಾರ ಹೆಸರು ಬೇಕಾದರೂ ಅದರಲ್ಲಿ ಬರೆಯಬಹುದು. ಜಾತಿ ಆಧರಿತ ಉದ್ವಿಗ್ನತೆ ಸೃಷ್ಟಿಸಲು ಸಂಚು ಯತ್ನ ನಡೆದಿದೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮತಾಂತರಗಳು ನಡೆದಾಗ ಉಪಸ್ಥಿತರಿದ್ದ ಬಿ.ಆರ್.ಅಂಬೇಡ್ಕರ್ ಅವರ ಮರಿ ಸೋದರಳಿಯ ರಾಜರತನ್ ಅಂಬೇಡ್ಕರ್ ಈ ಕುರಿತು ಪ್ರತಿಕ್ರಿಯಿಸಿ, ‘‘ಅಕ್ಟೋಬರ್ 14ರಂದು ಧಾರ್ಮಿಕ ಮತಾಂತರ ನಡೆದಿಲ್ಲ ಎಂದು ಹೇಗೆ ಹೇಳುತ್ತಾರೆ? ನಾನು ಆಗ ಅಲ್ಲಿದ್ದೆ. ಘಟನೆಯ ಫೇಸ್ ಬುಕ್ ಲೈವ್ ವೀಡಿಯೋ ಕೂಡ ಇತ್ತು. 236 ಜನರಿಗೆ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದಿಂದ ಪ್ರಮಾಣಪತ್ರ ನೀಡಲಾಗಿದೆ’’ ಎಂದೂ ಅವರು ಹೇಳಿದರು.

ಈ ಸಂಘಟನೆಯನ್ನು ಅಂಬೇಡ್ಕರ್ 1955ರಲ್ಲಿ ಸ್ಥಾಪಿಸಿದ್ದರೆ ಈಗ ರಾಜರತನ್ ಅದರ ಟ್ರಸ್ಟಿ ಮ್ಯಾನೇಜರ್ ಆಗಿದ್ದು, ಅದರಲ್ಲಿ ಅವರ ಸಹಿ ಸಹಿತ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮಾರಕ ಸಮಿತಿ ಅಧ್ಯಕ್ಷರ ಸಹಿಯೂ ಇದೆ.

ಮತಾಂತರ ವದಂತಿ ಕುರಿತ ದೂರಿನ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News