‘ಠಕ್ಕ’ ಕಿಮ್ ಜಾಂಗ್ ಜೊತೆ ಟ್ರಂಪ್ ಸ್ನೇಹ: ಜೋ ಬೈಡನ್

Update: 2020-10-23 18:01 GMT

ನ್ಯಾಶ್‌ವಿಲ್ (ಅಮೆರಿಕ), ಅ. 23: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡನ್, ಉತ್ತರ ಕೊರಿಯದ ‘ಠಕ್ಕ’ ನಾಯಕ ಕಿಮ್ ಜಾಂಗ್ ಉನ್ ಜೊತೆಗೆ ಸ್ನೇಹ ಮಾಡಿಕೊಂಡಿರುವುದಕ್ಕಾಗಿ ಹಾಲಿ ಅಧ್ಯಕ್ಷ ಹಾಗೂ ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರನ್ನು ಟೀಕಿಸಿದ್ದಾರೆ.

ಟ್ರಂಪ್‌ರ ರಾಜತಾಂತ್ರಿಕತೆ ಹಿಟ್ಲರ್ ಜೊತೆಗಿನ ಸಮಾಲೋಚನೆಗಳಂತೆ ಎಂದು ಗುರುವಾರ ನಡೆದ ಮೂರನೇ ಹಾಗೂ ಕೊನೆಯ ಅಧ್ಯಕ್ಷೀಯ ಅಭ್ಯರ್ಥಿಗಳ ಮುಖಾಮುಖಿ ಚರ್ಚೆಯಲ್ಲಿ ಮಾತನಾಡಿದ ಅವರು ಹೇಳಿದರು.

ಕಿಮ್ ಜಾಂಗ್ ಉನ್ ಜೊತೆಗಿನ ಶೃಂಗಸಭೆಗಳ ಮೂಲಕ ತಾನು ಯುದ್ಧವನ್ನು ತಪ್ಪಿಸಿದ್ದೇನೆ ಎಂಬ ಟ್ರಂಪ್ ಹೇಳಿಕೆಯನ್ನು ಬೈಡನ್ ಕಟುವಾಗಿ ಟೀಕಿಸಿದರು.

‘‘ಅವರು ತನ್ನ ಉತ್ತಮ ಸ್ನೇಹಿತನ ಬಗ್ಗೆ ಮಾತನಾಡಿದ್ದಾರೆ. ಆದರೆ, ಅವರ ಆ ಸ್ನೇಹಿತ ‘ಠಕ್ಕ’ನಾಗಿದ್ದಾರೆ’’ ಎಂದರು. ‘‘ಇದು ನಾವು ಹಿಟ್ಲರ್‌ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ ಎಂದು ಹೇಳಿದಂತೆ. ಹಿಟ್ಲರ್ ಬಳಿಕ ಇಡೀ ಯುರೋಪನ್ನೇ ಆಕ್ರಮಿಸಿದನು’’ ಎಂದರು.

ಈ ಕೋಣೆಯಲ್ಲಿ ನಾನು ‘ಕನಿಷ್ಠ ಜನಾಂಗೀಯ ತಾರತಮ್ಯಕಾರಿ’ ವ್ಯಕ್ತಿ: ಟ್ರಂಪ್

ನಾನು ಈ ಕೋಣೆಯಲ್ಲಿರುವ ‘ಅತ್ಯಂತ ಕನಿಷ್ಠ ಜನಾಂಗೀಯ ತಾರತಮ್ಯಕಾರಿ’ ವ್ಯಕ್ತಿಯಾಗಿದ್ದೇನೆ ಎಂದು ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗಳ ಮೂರನೇ ಹಾಗೂ ಕೊನೆಯ ಮುಖಾಮುಖಿಯ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.

‘‘ನಾನು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದೇನೆ. ನಾನು ಈ ಕೋಣೆಯಲ್ಲಿರುವ ಅತ್ಯಂತ ಕನಿಷ್ಠ ಜನಾಂಗೀಯ ತಾರತಮ್ಯಕಾರಿ ವ್ಯಕ್ತಿ ಎಂದು ನನಗನಿಸುತ್ತದೆ. ನನಗೆ ಈಗ ಪ್ರೇಕ್ಷಕರತ್ತ ನೋಡಲೂ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅಷ್ಟು ಕತ್ತಲೆ ಇದೆ. ಆದರೆ, ಪ್ರೇಕ್ಷಕರಲ್ಲಿ ಯಾರು ಇದ್ದಾರೆ ಎನ್ನುವುದು ನನಗೆ ಮುಖ್ಯವಲ್ಲ ಎಂದು ಟ್ರಂಪ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರ ಎದುರಾಳಿ ಜೋ ಬೈಡನ್, ‘ಪ್ರತಿ ಜನಾಂಗೀಯ ಹಿಂಸಾಚಾರದ ಬೆಂಕಿಗೂ ಟ್ರಂಪ್ ತುಪ್ಪ ಎರೆಯುತ್ತಾರೆ’’ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News