ದುಬಾರಿ ಆಟಗಾರರು ಐಪಿಎಲ್‌ನಲ್ಲಿ ಏನು ಮಾಡುತ್ತಿದ್ದಾರೆ?

Update: 2020-10-23 18:36 GMT

 ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ದುಬಾರಿ ಬೆಲೆಗೆ ವಿವಿಧ ತಂಡಗಳಿಗೆ ಸೇರ್ಪಡೆಗೊಂಡಿದ್ದ ಹಲವು ಮಂದಿ ಖ್ಯಾತ ಆಟಗಾರರು ಇದೀಗ ನಡೆಯುತ್ತಿರುವ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ.

ಪ್ಯಾಟ್ ಕಮ್ಮಿನ್ಸ್ (ಕೆಕೆಆರ್):     ಆಗಸ್ಟ್ 2019ರಿಂದ ವಿಶ್ವದ ನಂಬರ್ ಒನ್ ಟೆಸ್ಟ್ ಬೌಲರ್ ಆಗಿರುವ ಪ್ಯಾಟ್ ಕಮ್ಮಿನ್ಸ್ ಈ ಆವೃತ್ತಿಯಲ್ಲಿ ಮಿಂಚುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್ ಹರಾಜಿನಲ್ಲಿ ಸಾರ್ವಕಾಲಿಕ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದ ವೇಗಿ ಕಮ್ಮಿನ್ಸ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ 15.5 ಕೋಟಿ ರೂ.ಗಳಿಗೆ ಖರೀದಿಸಿತ್ತು. ಆದರೆ ಅವರು 10 ಪಂದ್ಯಗಳಲ್ಲಿ ಇದುವರೆಗೆ ಕೇವಲ ಮೂರು ವಿಕೆಟ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಮೂರು ಪಂದ್ಯಗಳಲ್ಲಿ ಎರಡು ವಿಕೆಟ್ ಪಡೆದರು ಮತ್ತು ನಂತರ ಅವರು ಮುಂದಿನ ಐದು ಪಂದ್ಯಗಳಲ್ಲಿ ವಿಕೆಟ್ ಪಡೆಯದೆ ಕೈ ಸುಟ್ಟುಕೊಂಡರು. ನಂತರ ಅವರು 9ನೇ ಪಂದ್ಯದಲ್ಲಿ ಮೂರನೇ ವಿಕೆಟ್ ಪಡೆದರು. ಆದರೆ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಅವರು ಅರ್ಧಶತಕ ಬಾರಿಸಿದರು:

ಗ್ಲೆನ್ ಮ್ಯಾಕ್ಸ್‌ವೆಲ್ (ಕಿಂಗ್ಸ್ ಇಲೆವೆನ್ ಪಂಜಾಬ್):      ಆಸ್ಟ್ರೇಲಿಯದ ಇನ್ನೋರ್ವ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಕಳೆದ ಹರಾಜಿನಲ್ಲಿ 10.75 ಕೋಟಿ ರೂ.ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತೆಕ್ಕೆಗೆ ಸೇರಿದ್ದರು. ಆಲ್‌ರೌಂಡರ್ ಮ್ಯಾಕ್ಸ್ ವೆಲ್ 10ಪಂದ್ಯಗಳಲ್ಲಿ 90 ರನ್ ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 32 ರನ್ ಗಳಿಸಿರುವುದು ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಆದರೆ ಅಚ್ಚರಿಯ ಸಂಗತಿ ಯೆಂದರೆ ಈ ಋುತುವಿನಲ್ಲಿ ಮ್ಯಾಕ್ಸ್‌ವೆಲ್ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ. ಅವರು ತಮ್ಮ ಆಫ್-ಸ್ಪಿನ್ ಬೌಲಿಂಗ್‌ನಲ್ಲಿ ಪ್ರಭಾವ ಬೀರಲು ವಿಫಲರಾದರು. ಇಲ್ಲಿಯವರೆಗೆ ಕೇವಲ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಕ್ರಿಸ್ ಮೋರಿಸ್ (ಆರ್‌ಸಿಬಿ):      ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮೋರಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯಿಂಗ್ ಇಲೆವೆನ್‌ಗೆ ಪ್ರವೇಶಿಸಿದಾಗಿನಿಂದಲೂ ಆ ತಂಡದ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಗಳಲ್ಲಿ ಒಂದಾಗಿದ್ದಾರೆ. ಅವರು 5 ಪಂದ್ಯಗಳಲ್ಲಿ ಒಂಭತ್ತು ವಿಕೆಟ್ ಗಳಿಸಿದ್ದಾರೆ. ಅವರು 10 ಕೋಟಿ ರೂ.ಗೆ ಆರ್‌ಸಿಬಿ ಸೇರ್ಪಡೆಗೊಂಡಿದ್ದರು. ಮೋರಿಸ್ ಅವರು ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯದಲ್ಲಿ 8 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಇರುವ ಅಜೇಯ 25 ರನ್ ಗಳಿಸಿದರು.

ಶೆಲ್ಡನ್ ಕಾಟ್ರೆಲ್ (ಪಂಜಾಬ್):     ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿರುವ ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಶೆಲ್ಡನ್ ಕಾಟ್ರೆಲ್ ಅವರನ್ನು 8.5 ಕೋಟಿ ರೂ.ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಖರೀದಿಸಿತ್ತು. ಎಡಗೈ ವೇಗಿ ಕಾಟ್ರೆಲ್ ಅವರು ಋತುವಿನ ಮೊದಲ ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಉತ್ತಮ ಸಾಧನೆ ತೋರಿದರು. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅವರ ಓವರ್‌ನಲ್ಲಿ ರಾಹುಲ್ ತೆವಾಟಿಯ 5 ಸಿಕ್ಸರ್ ಬಾರಿಸಿದರು. ಆರು ಪಂದ್ಯಗಳನ್ನು ಆಡಿದ ಬಳಿಕ ಅವರಿಗೆ ಅವಕಾಶ ಸಿಗಲಿಲ್ಲ. ಅವರು ಈ ತನಕ 6 ವಿಕೆಟ್ ಪಡೆದಿದ್ದಾರೆ.

ನಾಥನ್ ಕೌಲ್ಟರ್-ನೈಲ್(ಎಂಐ):    ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ನಾಥನ್ ಕೌಲ್ಟರ್-ನೈಲ್ ಅವರನ್ನು 8 ಕೋಟಿ ರೂ.ವಗೆ ಖರೀದಿಸಿತ್ತು. ಅವರಿಗೆ ಇದುವರೆಗೆ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿದೆ. ಮೊದಲ ಏಳು ಪಂದ್ಯಗಳಲ್ಲಿ ಆಡಲಿಲ್ಲ.ಆದರೆ ಅವರು ತನ್ನ ಬೌಲಿಂಗ್‌ನಲ್ಲಿ ಪ್ರಭಾವ ಬೀರಲು ವಿಫಲರಾಗಿದ್ದಾರೆ. ಎರಡು ಪಂದ್ಯಗಳಲ್ಲಿ ಒಂದು ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News