ಉಚಿತವಾಗಿ ಕೊರೋನ ಲಸಿಕೆ ನೀಡುವ ಭರವಸೆಯಲ್ಲಿ ತಪ್ಪೇನಿಲ್ಲ: ನಿರ್ಮಲಾ ಸೀತಾರಾಮನ್

Update: 2020-10-24 16:15 GMT

ಹೊಸದಿಲ್ಲಿ, ಅ.24: ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಣಾಳಿಕೆಯಲ್ಲಿರುವ ಉಚಿತ ಕೋವಿಡ್ ಲಸಿಕೆ ವಿತರಿಸುವ ಭರವಸೆಯಲ್ಲಿ ತಪ್ಪೇನೂ ಇಲ್ಲ. ತಾನು ಅಧಿಕಾರಕ್ಕೆ ಬಂದರೆ ಏನು ಮಾಡಲು ಬಯಸುತ್ತೇನೆ ಎಂದು ಪಕ್ಷವೊಂದು ಘೋಷಿಸಬಹುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಿಹಾರ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆಯನ್ನು ನಿರ್ಮಲಾ ಗುರುವಾರ ಬಿಡುಗಡೆಗೊಳಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ಉಚಿತ ಕೊರೋನ ಲಸಿಕೆ ವಿತರಣೆ ಪ್ರಣಾಳಿಕೆಯ ಮುಖ್ಯ ಅಂಶವಾಗಿದೆ.

ಅಧಿಕಾರದಲ್ಲಿರುವ ಪಕ್ಷ ಸಾಂಕ್ರಾಮಿಕ ರೋಗವನ್ನೂ ರಾಜಕೀಯ ಉದ್ದೇಶಕ್ಕೆ ಬಳಸುತ್ತಿದೆ ಎಂದು ವಿಪಕ್ಷಗಳು ಬಿಜೆಪಿಯನ್ನು ಟೀಕಿಸಿದ್ದವು ಮತ್ತು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದವು.

“ಇದು ಚುನಾವಣಾ ಪ್ರಣಾಳಿಕೆಯ ಘೋಷಣೆ. ತಾನು ಅಧಿಕಾರಕ್ಕೆ ಬಂದರೆ ಏನು ಮಾಡಲು ಬಯಸುತ್ತೇನೆ ಎಂಬುದನ್ನು ರಾಜಕೀಯ ಪಕ್ಷವೊಂದು ಘೋಷಿಸಬಹುದು. ಇದೇ ರೀತಿ ನಾವೂ ಘೋಷಿಸಿದ್ದೇವೆ. ಆರೋಗ್ಯ ಕ್ಷೇತ್ರ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಈ ಭರವಸೆ ಸಂಪೂರ್ಣ ಕ್ರಮಬದ್ಧವಾಗಿದೆ” ಎಂದು ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News