ಗುಪ್ಕರ್ ಘೋಷಣೆಗೆ ಜನತಾ ಮೈತ್ರಿಕೂಟ: ಫಾರೂಕ್ ಅಬ್ದುಲ್ಲಾ ಅಧ್ಯಕ್ಷ, ಮೆಹಬೂಬಾ ಮುಫ್ತಿ ಉಪಾಧ್ಯಕ್ಷೆ

Update: 2020-10-24 17:26 GMT

ಶ್ರೀನಗರ, ಅ.24: ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ‘ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್’ನ (ಗುಪ್ಕರ್ ಘೋಷಣೆಗೆ ಜನತಾ ಮೈತ್ರಿಕೂಟ)ಅಧ್ಯಕ್ಷರಾಗಿ ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಉಪಾಧ್ಯಕ್ಷರನ್ನಾಗಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಮೈತ್ರಿಕೂಟ ಹೇಳಿದೆ.

ಸಿಪಿಎಂ ನಾಯಕ ಮುಹಮ್ಮದ್ ಯೂಸುಫ್ ತಾರಿಗಾಮಿ ಮೈತ್ರಿಕೂಟದ ಸಂಯೋಜಕರಾಗಿರುತ್ತಾರೆ ಮತ್ತು ಪೀಪಲ್ಸ್ ಕಾನ್ಫರೆನ್ಸ್‌ನ ಸಜ್ಜದ್ ಲೋನ್ ವಕ್ತಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ . ಮೈತ್ರಿಕೂಟ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ಮೆಹಬೂಬಾ ಮುಫ್ತಿಯ ಮನೆಯಲ್ಲಿ ಸಭೆ ಸೇರಿದ ಮುಖಂಡರು, ಈ ಹಿಂದಿನ ಜಮ್ಮು-ಕಾಶ್ಮೀರ ರಾಜ್ಯದ ಧ್ವಜವನ್ನು ಮೈತ್ರಿಕೂಟದ ಚಿಹ್ನೆಯನ್ನಾಗಿ ಆಯ್ಕೆ ಮಾಡಿದ್ದಾರೆ.

 ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಬಳಿಕ ಕಳೆದ 1 ವರ್ಷದ ಆಡಳಿತದ ಬಗ್ಗೆ ಮೈತ್ರಿಕೂಟವು ಶೀಘ್ರವೇ ಶ್ವೇತ ಪತ್ರ ಹೊರತರಲಿದೆ ಎಂದು ಸಭೆಯ ಬಳಿಕ ಸಜ್ಜದ್ ಲೋನ್ ಸುದ್ಧಿಗಾರರಿಗೆ ತಿಳಿಸಿದರು. 15 ದಿನದ ಬಳಿಕ ಜಮ್ಮುವಿನಲ್ಲಿ ಮತ್ತೊಂದು ಸಭೆ ನಡೆಸಲು ಮತ್ತು ನವೆಂಬರ್ 17ರಂದು ಶ್ರೀನಗರದಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗುವುದು ಎಂದವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News