ಸುಶಾಂತ್ ಸಾವಿನ ಪ್ರಕರಣದ ಅತಿರಂಜಿತ ವರದಿ: ಕ್ಷಮೆ ಯಾಚಿಸಲು ನಾಲ್ಕು ಟಿವಿ ಚಾನೆಲ್‌ಗೆ ಸೂಚನೆ

Update: 2020-10-24 17:59 GMT

ಹೊಸದಿಲ್ಲಿ, ಅ.24: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಸಂವೇದನಾ ರಹಿತವಾಗಿ ಮತ್ತು ಭಾವೋದ್ರೇಕಗೊಳಿಸುವ ರೀತಿಯಲ್ಲಿ , ಅತಿರಂಜಿತವಾಗಿ ವರದಿ ಪ್ರಸಾರ ಮಾಡಿದ್ದಕ್ಕಾಗಿ ಕ್ಷವೆು ಯಾಚಿಸಬೇಕೆಂದು ನಾಲ್ಕು ಟಿವಿ ವಾಹಿನಿಗಳಿಗೆ ಸುದ್ಧಿಪ್ರಸಾರ ಮಾನದಂಡ ಪ್ರಾಧಿಕಾರ ಸೂಚಿಸಿದೆ.

  ಆಜ್‌ತಕ್, ಝೀ ನ್ಯೂಸ್, ನ್ಯೂಸ್ 24 ಮತ್ತು ಇಂಡಿಯಾ ಟಿವಿ ಸುದ್ಧಿವಾಹಿನಿಗಳಿಗೆ ಕ್ಷಮೆ ಯಾಚಿಸಲು ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ ಪ್ರಾಧಿಕಾರ ಆದೇಶ ನೀಡಿದೆ.

 ಸುಶಾಂತ್ ಸಿಂಗ್ ಹೆಸರಿನಲ್ಲಿದ್ದ ನಕಲಿ ಟ್ವೀಟ್‌ಗಳನ್ನು ಪ್ರಸಾರ ಮಾಡಿರುವುದಕ್ಕೆ ‘ಆಜ್ ತಕ್’ ಚಾನೆಲ್ ಅಕ್ಟೋಬರ್ 27ರಂದು ರಾತ್ರಿ 8 ಗಂಟೆಗೆ ಕ್ಷಮೆ ಯಾಚನೆಯನ್ನು ಪ್ರಸಾರ ಮಾಡುವ ಜೊತೆಗೆ 1 ಲಕ್ಷ ರೂ. ದಂಡ ಪಾವತಿಸಬೇಕು.

 ಸುಶಾಂತ್ ಸಿಂಗ್ ಸಾವಿನ ಸುದ್ಧಿಯನ್ನು ವೈಭವೀಕರಿಸಿರುವುದಕ್ಕೆ ಝೀ ನ್ಯೂಸ್ 27ರಂದು ಕ್ಷಮೆ ಯಾಚಿಸಬೇಕು. ಸುಶಾಂತ್‌ರ ಮೃತದೇಹದ ಬಗ್ಗೆ ಪದೇ ಪದೇ ಉಲ್ಲೇಖ, ಅವರ ತುಟಿ ಯಾವ ಬಣ್ಣಕ್ಕೆ ತಿರುಗಿತ್ತು, ಅವರ ಕುತ್ತಿಗೆಯ ಮೇಲಿರುವ ಗಾಯದ ಗುರುತು ಇತ್ಯಾದಿಗಳ ಬಗ್ಗೆ ಸುದ್ದಿ ಪ್ರಸಾರ ಮಾಡಿರುವ ಇಂಡಿಯಾ ಟಿವಿ ಮಾರ್ಗಸೂಚಿಯನ್ನು ಉಲ್ಲಂಘಿಸಿದೆ. ಅಲ್ಲದೆ ನಟನ ಅಪಾರ್ಟ್‌ಮೆಂಟ್‌ನಿಂದ ಮೃತದೇಹವನ್ನು ಬಟ್ಟೆಯಲ್ಲಿ ಮುಚ್ಚಿ ಹೊರಗೆ ತರುತ್ತಿರುವುದನ್ನು ನಿರಂತರ ಪ್ರಸಾರ ಮಾಡಿದ್ದು ಕ್ಷಮೆ ಯಾಚಿಸಬೇಕು ಎಂದು ಪ್ರಾಧಿಕಾರ ಸೂಚಿಸಿದೆ.

  ನಟನ ಸಾವಿನ ಬಗ್ಗೆ ಸಂವೇದನಾರಹಿತ ಮತ್ತು ಭಾವೋದ್ರೇಕಗೊಳಿಸುವ ರೀತಿಯಲ್ಲಿ ವರದಿ ಪ್ರಸಾರ ಮಾಡಿದ್ದಕ್ಕೆ ನ್ಯೂಸ್ 24 ಚಾನೆಲ್ ಅಕ್ಟೋಬರ್ 29ರಂದು ಕ್ಷಮೆ ಯಾಚಿಸಬೇಕು ಮತ್ತು ನಟನ ಸಾವಿಗೆ ಸಂಬಂಧಿಸಿದಂತೆ ತನ್ನಲ್ಲಿರುವ ಆಕ್ಷೇಪಾರ್ಹ ವೀಡಿಯೋಗಳನ್ನು ಅಳಿಸಿ ಬಿಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News