ರಿಪಬ್ಲಿಕ್ ಟಿವಿಯಿಂದ ಜವಾಬ್ದಾರಿಯುತ ವರದಿಗಾರಿಕೆ ಬಯಸುತ್ತಿದ್ದೇವೆ: ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ

Update: 2020-10-26 16:14 GMT

ಹೊಸದಿಲ್ಲಿ, ಅ. 26: ರಿಪಬ್ಲಿಕ್ ಟಿವಿ ಹಾಗೂ ಅದರ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯಿಂದ ಜವಾಬ್ದಾರಿಯುತ ವರದಿಗಾರಿಕೆಯ ಭರವಸೆಯನ್ನು ನ್ಯಾಯಾಲಯ ಬಯಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಸೋಮವಾರ ಮೌಖಿಕವಾಗಿ ಪ್ರತಿಪಾದಿಸಿದರು.

ಗೋಸ್ವಾಮಿ ವಿರುದ್ಧ ಜೂನ್‌ನಲ್ಲಿ ದಾಖಲಿಸಲಾದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿ ಎಸ್.ಎ. ಬೋಬ್ಡೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಸರಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ, ಸಂಪೂರ್ಣ ತನಿಖೆಗೆ ತಡೆ ನೀಡುವುದು ಹೇಗೆ ಎಂದು ಪ್ರಶ್ನಿಸಿದರು. ಅಲ್ಲದೆ, ತನಿಖೆ ಮುಂದುವರಿಯಲು ನ್ಯಾಯಾಲಯ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಆದರೆ, ಗೋಸ್ವಾಮಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದರು. ಗೋಸ್ವಾಮಿ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ಗೋಸ್ವಾಮಿ ವಿರುದ್ಧದ ಎಫ್‌ಐಆರ್ ಸಾಚಾ ಅಲ್ಲ ಎಂದರು. ರಿಪಬ್ಲಿಕ್ ಟಿವಿಯ ಸಂಪಾದಕೀಯದ ಎಲ್ಲ ಸಿಬ್ಬಂದಿ ಮೇಲೆ ಮುಂಬೈ ಪೊಲೀಸರು ಇತ್ತೀಚೆಗೆ ದಾಖಲಿಸಿದ ಎಫ್‌ಐಆರ್ ಅನ್ನು ಉಲ್ಲೇಖಿಸುವ ಮೂಲಕ ಅವರು ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಪತ್ರಿಕಾ ಸ್ವಾತಂತ್ರ್ಯ ಸಂಪೂರ್ಣವಾಗಿ ನಿರ್ಣಾಯಕವಾಗಿದ್ದರೂ ತಮ್ಮನ್ನು ಯಾರೂ ಪ್ರಶ್ನಿಸಬಾರದು ಎಂದು ಯಾರೂ ಪ್ರತಿಪಾದಿಸುವಂತಿಲ್ಲ ಎಂದು ಬೋಬ್ಡೆ ಹೇಳಿದರು.

ಸಮಾಜದ ಶಾಂತಿ ಹಾಗೂ ಸಾಮರಸ್ಯ ನ್ಯಾಯಾಲಯಕ್ಕೆ ಮುಖ್ಯವಾದ ವಿಚಾರ...ಪ್ರತಿಯೊಬ್ಬರೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾದ ಕೆಲವು ಕ್ಷೇತ್ರಗಳಿವೆ ಎಂದು ಅವರು ತಿಳಿಸಿದರು. ಗೋಸ್ವಾಮಿ ಹಾಗೂ ಅವರನ್ನು ವಿಚಾರಣೆ ನಡೆಸಿದ ಮುಂಬೈ ಪೊಲೀಸರ ಕುರಿತು ಪ್ರಶ್ನಿಸಿದಾಗ ಸಿಂಘ್ವಿ, ಗೋಸ್ವಾಮಿ ವಿರುದ್ಧ ಬಲವಂತದ ಕ್ರಮಗಳನ್ನು ತೆಗೆದುಗೊಳ್ಳುವುದಿಲ್ಲ ಎಂದು ರಾಜ್ಯ ಭರವಸೆ ನೀಡುತ್ತದೆ. ಕೆಲವು ಜನರು ಕಾನೂನಿಗೆ ಅತೀತರಲ್ಲ ಎಂಬ ಸಂದೇಶ ರವಾನೆಯಾಗಬಾರದು ಎಂದರು. ಯಾವುದೇ ವ್ಯಕ್ತಿ ಕಾನೂನಿಗೆ ಅತೀತರಲ್ಲ ಎಂಬ ಭರವಸೆಯನ್ನು ಸಿಂಘ್ವಿ ಅವರಿಗೆ ನೀಡಿದ ಮುಖ್ಯ ನ್ಯಾಯಮೂರ್ತಿ ಬೋಬ್ಡೆ, ಕೆಲವೊಮ್ಮೆ ಕೆಲವು ಜನರ ವಿರುದ್ಧ ಕಾನೂನನ್ನು ತೀವ್ರತೆಯಿಂದ ಬಳಸಲಾಗುತ್ತದೆ, ಅಂತಹ ವ್ಯಕ್ತಿಗಳಿಗೆ ಹೆಚ್ಚಿನ ರಕ್ಷಣೆ ನೀಡುವುದು ಅಗತ್ಯ ಎಂದರು. ವಿಚಾರಣೆ ಮುಕ್ತಾಯಗೊಳ್ಳುತ್ತಿದ್ದಂತೆ ನ್ಯಾಯಾಲಯ ಗೋಸ್ವಾಮಿ, ರಿಪಬ್ಲಿಕ್ ಟಿವಿ ಹಾಗೂ ಇತರ ಸಂಬಂಧಿತ ವ್ಯಕ್ತಿಗಳ ವಿರುದ್ಧ ದಾಖಲಿಸಲಾದ ಎಲ್ಲ ಪ್ರಕರಣಗಳು ಹಾಗೂ ಎಫ್‌ಐಆರ್‌ನ ವಿವರ ನೀಡುವ ಅಫಿಡವಿಟ್ ಸಲ್ಲಿಸುವಂತೆ ಗೋಸ್ವಾಮಿ ಹಾಗೂ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶಿಸಿತು ಹಾಗೂ ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News