ಮೋದಿ ಸರಕಾರದ ನೀತಿಗಳ ವಿರುದ್ಧ ಅನಿವಾಸಿ ಭಾರತೀಯರ ಪ್ರತಿಭಟನೆ

Update: 2020-10-26 17:41 GMT

ನ್ಯೂಯಾರ್ಕ್,ಅ.26: ಮೋದಿ ಸರಕಾರವು ಇತ್ತೀಚಿನ ತಿಂಗಳುಗಳಲ್ಲಿ ಕೈಗೊಂಡಿರುವ ವಿವಿಧ ಕ್ರಮಗಳು ಜನವಿರೋಧಿಯಾಗಿವೆ ಎಂದು ಆರೋಪಿಸಿ ರವಿವಾರ ಯುರೋಪ್, ಆಸ್ಟ್ರೇಲಿಯ ಹಾಗೂ ಅಮೆರಿಕದ ವಿವಿಧ ನಗರಗಳಲ್ಲಿ ಹಲವಾರು ಅನಿವಾಸಿ ಭಾರತೀಯ ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.

 ‘ಗ್ಲೋಬಲ್ ಡಯಾಸ್ಪೋರಾ ಅಲಾಯನ್ಸ್’ ಸಂಘಟನೆಯ ಬ್ಯಾನರ್‌ನಡಿ ಪ್ರದರ್ಶನಗಳನ್ನು ನಡೆಸಿದ ಪ್ರತಿಭಟನಕಾರರು ಮೋದಿ ಸರಕಾರವು ಧರ್ಮದ ಆಧಾರದಲ್ಲಿ ಪೌರತ್ವ ತಿದ್ದುಪಡಿ ಕಾನೂನುಗಳನ್ನು ಜಾರಿಗೊಳಿಸಿರುವುದು, ಸಂವಿಧಾನವು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ರದ್ದತಿ, ಕಠಿಣ ಕಾನೂನುಗಳಡಿ ಮಾನವಹಕ್ಕು ಹೋರಾಟಗಾರರ ಬಂಧನ ಹಾಗೂ ಪರಿಸರ ರಕ್ಷಣೆ, ಕಾರ್ಮಿಕ ಹಕ್ಕುಗಳು, ಕೃಷಿ ಹಾಗೂ ಶಿಕ್ಷಣ ಕ್ಷೇತ್ರದ ಹಲವಾರು ಕಾನೂನುಗಳನ್ನು ದುರ್ಬಲಗೊಳಿಸಿರುವುದನ್ನು ವಿರೋಧಿಸಿ ಅವರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.

ಉತ್ತರಪ್ರದೇಶದ ಹತ್ರಸ್‌ನಲ್ಲಿ ಠಾಕೂರ್ ಸಮುದಾಯಕ್ಕೆ ಸೇರಿದ ನಾಲ್ವರು, ದಲಿತ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಬಳಿಕ ಆಕೆ ಸಾವನ್ನಪ್ಪಿದ ಘಟನೆಯೂ ಸೇರಿದಂತೆ ಭಾರತದಲ್ಲಿ ಜಾತಿ ದೌರ್ಜನ್ಯಗಳು ಹೆಚ್ಚುತ್ತಿರುವ ಬಗ್ಗೆಯೂ ಪ್ರತಿಭಟನಕಾರರು ಆಕ್ರೋಶ ವ್ಯಪಡಿಸಿದರು.

ಮೋದಿ ಸರಕಾರಕ್ಕೆ ಜಾಗತಿಕವಾಗಿ ಅನಿವಾಸಿ ಭಾರತೀಯ ಸಮುದಾಯದಿಂದ ಗಣನೀಯವಾದ ಬೆಂಬಲ ದೊರೆತಿತ್ತು. ಆದರೆ ಹಾಲಿ ಆಡಳಿತದ ಕೃತ್ಯಗಳ ಬಗ್ಗೆ ಜಗತ್ತಿನಾದ್ಯಂತ ಅನಿವಾಸಿ ಭಾರತೀಯ ಸಮುದಾಯದವರಿಂದಲೇ ಟೀಕೆಗಳು ಹೆಚ್ಚುತ್ತಿರುವುದನ್ನು ಒಪ್ಪಿಕೊಳ್ಳುವುದು ಮುಖ್ಯವೆಂದು ನಾವು ಭಾವಿಸುತ್ತೇವೆ’’ ಎಂದು ಗ್ಲೋಬಲ್ ಡಯಾಸ್ಪ್ಜೋರಾ ಅಲಾಯನ್ಸ್ ಸಂಘಟನೆಯ ಹೇಳಿಕೆ ತಿಳಿಸಿದೆ.

ತಮಿಳುನಾಡಿನ ತೂತ್ತುಕ್ಕುಡಿ ಜಿಲ್ಲೆಯಲ್ಲಿ ಕಳೆದ ಜೂನ್‌ನಲ್ಲಿ ಅಂಗಡಿ ಮಾಲಕ ಪಿ.ಜಯರಾಜ್ ಹಾಗೂ ಅವರ ಪುತ್ರ ಜೆ.ಬೆನ್ನಿಕ್ಸ್ ಅವರು ಪೊಲೀಸ್ ದೌರ್ಜನ್ಯದಿಂದ ಲಾಕಪ್‌ನಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿದ ಹಾಡೊಂದನ್ನು ಈ ಸಂದರ್ಭದಲ್ಲಿ ಬಿಡುಗಡೆ ಗೊಳಿಸಲಾಯಿತು.ಪಿ.ಜಯರಾಜ್ ಹಾಗೂ ಅವರ ಪುತ್ರ ಜೆ. ಬೆನ್ನಿಕ್ಸ್, ಲಾಕ್‌ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News