ತಮಿಳುನಾಡಿನಲ್ಲಿ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಬಂಧನ

Update: 2020-10-27 05:55 GMT

ಚೆನ್ನೈ: ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿರುವ ಖುಷ್ಬು ಸುಂದರ್ ಅವರನ್ನು ಇಂದು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಿಂದೂ ಧಾರ್ಮಿಕ ಗ್ರಂಥ ಮನುಸ್ಮತಿ ಮಹಿಳೆಯರನ್ನು ಕೀಳಾಗಿ ಕಾಣುತ್ತದೆ ಹಾಗೂ ಮನು ಧರ್ಮ ಮಹಿಳೆಯರನ್ನು ಲೈಂಗಿಕ ಕಾರ್ಯಕರ್ತೆಯರಂತೆ ಪರಿಗಣಿಸುತ್ತದೆ ಎಂದು ವಿಡುದಲೈ ಚಿರುತೈಗಳ್ ಕಚ್ಚಿ(ವಿಸಿಕೆ)ಮುಖ್ಯಸ್ಥ ತೋಳ್ ತಿರುಮಾವಳವನ್ ಅವರು ಇತ್ತೀಚೆಗೆ ಭಾಷಣದಲ್ಲಿ ಅಭಿಪ್ರಾಯಪಟ್ಟಿದ್ದರು. ರಾಜಕಾರಣಿಗಳು ಮನುಸ್ಮತಿಯನ್ನು ನಿಷೇಧಿಸಬೇಕೆಂದು ಅವರು ಆಗ್ರಹಿಸಿದ್ದರು.

ವಿಸಿಕೆ ಮುಖ್ಯಸ್ಥರ ಹೇಳಿಕೆಯನ್ನು ಖಂಡಿಸಿ ಬಿಜೆಪಿಯ ಮಹಿಳಾ ವಿಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆ ನಡೆಸಲು ಖುಷ್ಬೂ ತೆರಳುತ್ತಿದ್ದ ಹಾದಿಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಕಡಲೂರಿನ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಬಿಜೆಪಿ ತಿರುಮಾವಾಲವನ್ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತ್ತು. ಮಹಿಳಾ ವಿಭಾಗ ತಮಿಳುನಾಡಿನಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

"ನಾನು ಮನುಸ್ಮತಿಯನ್ನು ಮಾತ್ರ ಉಲ್ಲೇಖಿಸಿದ್ದೇನೆ. ಮನುಸ್ಮತಿಯನ್ನು ನಿಷೇಧಿಸಬೇಕಾಗಿದೆ. ಘರ್ಷಣೆಯನ್ನು ಪ್ರಚೋದಿಸಲು ಬಿಜೆಪಿ ನಕಲಿ ಸುದ್ದಿಗಳನ್ನು ಹರಡುತ್ತಿದೆ'' ಎಂದು ತಿರುಮಾವಾಲವನ್ ಹೇಳಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News