ತಮಿಳುನಾಡಿನಲ್ಲಿ ಕಸ್ಟಡಿ ಸಾವು: ತಂದೆ-ಮಗನಿಗೆ ಆರು ಗಂಟೆ ಚಿತ್ರಹಿಂಸೆ ನೀಡಲಾಗಿತ್ತು ಎಂದ ಸಿಬಿಐ

Update: 2020-10-27 07:52 GMT

ಹೊಸದಿಲ್ಲಿ: ಜೂನ್‌ನಲ್ಲಿ ತಮಿಳುನಾಡಿನಲ್ಲಿ ಓರ್ವ ವ್ಯಕ್ತಿ ಹಾಗೂ ಆತನ ಮಗನನ್ನು ಪೊಲೀಸ್ ಕಸ್ಟಡಿಯಲ್ಲಿ ಸಾಯಿಸಿರುವ ಘಟನೆಯ ತನಿಖೆ ನಡೆಸುತ್ತಿರುವ ಸಿಬಿಐ, ತಂದೆ-ಮಗನಿಗೆ ಪೊಲೀಸರು ಆರು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದರು ಎಂದು ಹೇಳಿದೆ.

ತಂದೆ-ಮಗನನ್ನು ಎಷ್ಟೊಂದು ಕ್ರೂರವಾಗಿ ಥಳಿಸಲಾಗಿದೆ ಎಂದರೆ ಪೊಲೀಸ್ ಠಾಣೆಯ ಗೋಡೆಗಳ ಮೇಲೆ ರಕ್ತ ಚೆಲ್ಲಿರುವುದು ವಿಧಿವಿಜ್ಞಾನ ಸಾಕ್ಷಗಳು ತಿಳಿಸಿವೆ.

 ಜೂ.19ರಂದು ಕರ್ಫ್ಯೂ ಮೀರಿ 15 ನಿಮಿಷಗಳ ಕಾಲ ತಮ್ಮ ಮೊಬೈಲ್ ಫೋನ್ ಅಂಗಡಿಯನ್ನು ತೆರೆದಿಟ್ಟಿದ್ದಕ್ಕಾಗಿ ಜಯರಾಜ್ ಹಾಗೂ ಅವರ ಮಗ ಬೆನ್ನಿಕ್ಸ್ ಅವರನ್ನು ಪೊಲೀಸರು ಕರೆದೊಯ್ದರು. ಪೊಲೀಸ್ ಠಾಣೆ ತಲುಪಿದ ಬಳಿಕ ಇಬ್ಬರನ್ನು ಬಂಧಿಸಲಾಗಿತ್ತು.

ತಂದೆ-ಮಗನನ್ನು ಸಂಜೆ 7:45ರಿಂದ ಮುಂಜಾನೆ 3ರ ತನಕ ಮಧ್ಯಂತರದಲ್ಲಿ ಹಲವು ಬಾರಿ ಚಿತ್ರಹಿಂಸೆಗೊಳಪಡಿಸಲಾಗಿದೆ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.

ಅಪರಾಧವನ್ನು ಮುಚ್ಚಿಹಾಕಲು ಬೆನ್ನಿಕ್ಸ್ ಹಾಗೂ ಜಯರಾಮ್ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. ಇಬ್ಬರು ಲಾಕ್‌ಡೌನ್ ನಿಯಮ ಉಲ್ಲಂಘಿಸಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.

ಪೊಲೀಸರು ಸಾಕ್ಷಗಳನ್ನು ನಾಶಪಡಿಸಿದರು. ತಂದೆ ಹಾಗೂ ಮಗನ ರಕ್ತದ ಬಟ್ಟೆಗಳನ್ನು ಸರಕಾರಿ ಆಸ್ಪತ್ರೆಯಲ್ಲಿ ಕಸದ ಬುಟ್ಟಿಗೆ ಎಸೆಯಲಾಗಿತ್ತು ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News