ಚಂದ್ರನ ಮೇಲ್ಮೈಯಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ನೀರು: ಅಧ್ಯಯನ

Update: 2020-10-27 17:33 GMT
ಸಾಂದರ್ಭಿಕ ಚಿತ್ರ 

ಪ್ಯಾರಿಸ್ (ಫ್ರಾನ್ಸ್), ಅ. 27: ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನಲ್ಲಿ ಹಿಂದೆ ನಿರೀಕ್ಷೆಗಿಂತಲೂ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ನೀರು ಇರಬಹುದು ಎಂದು ಸೋಮವಾರ ‘ನೇಚರ್ ಆಸ್ಟ್ರಾನಮಿ’ಯಲ್ಲಿ ಪ್ರಕಟಗೊಂಡಿರುವ ಎರಡು ಅಧ್ಯಯನಗಳು ತಿಳಿಸಿವೆ.

ಭವಿಷ್ಯದಲ್ಲಿ ಚಂದ್ರನಲ್ಲಿಗೆ ಯಾನಗೈಯುವ ಗಗನಯಾನಿಗಳಿಗೆ ಅದರ ಮೇಲ್ಮೈಯಲ್ಲಿ ನೀರು ಸಿಗಬಹುದು ಹಾಗೂ ಇಂಧನವೂ ಸಿಗಬಹುದು ಎಂಬ ವಿಶ್ವಾಸವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.

ಸುಮಾರು ಒಂದು ದಶಕದ ಹಿಂದಿನವರೆಗೂ ಚಂದ್ರನ ಮೇಲ್ಮೈ ಒಣಗಿ ಹೋಗಿದೆ ಎಂದು ಭಾವಿಸಲಾಗಿತ್ತು. ಬಳಿಕ, ಅದರ ಮೇಲ್ಮೈಯಲ್ಲಿ ನೀರಿನ ಅಂಶವಿದೆ ಎನ್ನುವುದನ್ನು ದಶಕದ ಹಿಂದಿನ ಸಂಶೋಧನೆಗಳು ಪತ್ತೆಹಚ್ಚಿದವು.

ಆದರೆ, ಚಂದ್ರನ ಮೇಲ್ಮೈಯಲ್ಲಿ ಹಿಂದೆ ಭಾವಿಸಿರುವುದಕ್ಕಿಂತಲೂ ಹೆಚ್ಚಿನ ನೀರು ಇರಬಹುದಾಗಿದೆ ಹಾಗೂ ಚಂದ್ರನ ಧ್ರುವ ಪ್ರದೇಶಗಳಲ್ಲಿರುವ ಶೀತಲ ವಲಯಗಳಲ್ಲಿ ಮಂಜಿನ ರೂಪದಲ್ಲಿ ನೀರು ಸಂಗ್ರಹವಾಗಿರುವ ಸಾಧ್ಯತೆಯಿದೆ ಎಂದು ನೂತನ ಸಂಶೋಧನೆಗಳು ಹೇಳಿವೆ.

‘‘ನಮ್ಮ ಸೋಫಿಯಾ ಟೆಲಿಸ್ಕೋಪ್ ಮೂಲಕ ಚಂದ್ರನ ಸೂರ್ಯ ಪ್ರಕಾಶಿತ ಮೇಲ್ಮೈಯಲ್ಲಿ ನೀರು ಇರುವುದನ್ನು ನಾವು ಮೊದಲ ಬಾರಿಗೆ ಪತ್ತೆಹಚ್ಚಿದ್ದೇವೆ. ಮಣ್ಣಿನಲ್ಲಿರುವ, ಪೆನ್ಸಿಲ್‌ನ ಮೊನೆಗಿಂತಲೂ ಚಿಕ್ಕದಾಗಿರಬಹುದಾದ ಗಾಜಿನ ಮಣಿಯಂಥ ರಚನೆಗಳ ಒಳಗೆ ನೀರು ಸಂಗ್ರಹವಾಗಿರಬಹುದು’’ ಎಂಬುದಾಗಿ ‘ನಾಸಾ’ ಸೋಮವಾರ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News