ಕೋವಿಡ್ ಇಳಿಮುಖ; ನಿರ್ಲಕ್ಷ್ಯ ಬೇಡ

Update: 2020-10-28 04:38 GMT

ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿವೆ. ಅಕ್ಟೋಬರ್ ತಿಂಗಳ ಆರಂಭದಲ್ಲಿ ದಿನವೂ ಹತ್ತು ಸಾವಿರ ದಾಟುತ್ತಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಶೇಕಡಾ 50ರಷ್ಟು ಕಡಿಮೆಯಾಗಿದೆ.ಈಗ ಐದು ಸಾವಿರದ ಆಸುಪಾಸಿನಲ್ಲಿದೆ. ದೇಶದಲ್ಲೂ ಕೊರೋನ ಹಾವಳಿ ತಗ್ಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬರುತ್ತದೆ. ರಾಜ್ಯದಲ್ಲಂತೂ ಸೋಂಕಿನ ಅಬ್ಬರ ಕಡಿಮೆಯಾಗಿರುವುದು ನಿಜ. ಆದರೆ ಹಾಗೆಂದು ಮೈಮರೆತರೆ ಪರಿಸ್ಥಿತಿ ಉಲ್ಬಣಿಸುವ ಅಪಾಯವೂ ಇದೆ ಎಂಬುದನ್ನು ಮರೆಯಬಾರದು.

ಕೋವಿಡ್ ಚಲನವಲನದ ಸಮಗ್ರ ಮಾಹಿತಿ ಇನ್ನೂ ವೈದ್ಯಕೀಯ ಲೋಕಕ್ಕೆ ಸಂಪೂರ್ಣವಾಗಿ ಸಿಕ್ಕಿಲ್ಲ. ಅಮೆರಿಕ ಮತ್ತು ಇತರ ದೇಶಗಳಲ್ಲೂ ಆರಂಭದಲ್ಲಿ ತೀವ್ರವಾಗಿ ಕಾಣಿಸಿಕೊಂಡಿದ್ದ ಕೋವಿಡ್ ಕ್ರಮೇಣ ಕಡಿಮೆಯಾಗಿತ್ತು. ಆದರೆ ಅಮೆರಿಕದಲ್ಲಿ ಕಳೆದ ಎರಡು ದಿನಗಳಿಂದ ಕೋವಿಡ್ ಉಲ್ಬಣಿಸಿದ ವರದಿಗಳು ಬಂದಿವೆ. ಕೇರಳದಲ್ಲೂ ಕೂಡ ಆರಂಭದಲ್ಲಿ ತೀವ್ರವಾಗಿ ಕಾಣಿಸಿಕೊಂಡಿದ್ದ ಕೊರೋನ ನಂತರ ಅಲ್ಲಿನ ಎಡರಂಗ ಸರಕಾರದ ಕ್ರಮಗಳಿಂದ ನಿಯಂತ್ರಣಕ್ಕೆ ಬಂದಿತ್ತು. ಆದರೆ ಓಣಂ ಹಬ್ಬದ ನಂತರ ಅಲ್ಲೂ ಕೋವಿಡ್ ಪ್ರಕರಣಗಳು ಹೆಚ್ಚಾದ ವರದಿಗಳು ಬಂದಿವೆ. ಆದ್ದರಿಂದಲೇ ಜನರು ನಿರ್ಲಕ್ಷ ಮಾಡಬಾರದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ನವೆಂಬರ್ ಮತ್ತು ಡಿಸೆಂಬರ್ ಈ ಎರಡು ತಿಂಗಳು ಹಬ್ಬಗಳ ಕಾಲ. ದಸರಾ ಮುಗಿದಿದೆ. ಇನ್ನು ಮುಂದೆ ದೀಪಾವಳಿ, ಮೀಲಾದುನ್ನಬಿ, ಕ್ರಿಸ್‌ಮಸ್ ಬರಲಿವೆ. ಈ ಹಬ್ಬಗಳ ಕಾಲದಲ್ಲಿ ಜನರು ಸಾಮಾನ್ಯವಾಗಿ ಸಂಭ್ರಮದಲ್ಲಿ ತೇಲಾಡುತ್ತಾರೆ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುತ್ತಾರೆ. ಜನನಿಬಿಡ ಮಾರುಕಟ್ಟೆಗಳಿಗೆ ಹೋಗುತ್ತಾರೆ. ಆಗ ಕೊಂಚ ನಿರ್ಲಕ್ಷ ತಾಳಿದರೂ ಕೋವಿಡ್ ಉಲ್ಬಣಿಸುವ ಸಾಧ್ಯತೆಗಳಿವೆ. ಆದ್ದರಿಂದಲೇ ಮುಂದಿನ ಎರಡು ತಿಂಗಳು ಅತ್ಯಂತ ನಿರ್ಣಾಯಕವಾಗಿವೆ.

ಇನ್ನೇನು ಕೊರೋನ ಕಡಿಮೆಯಾಗಿದೆ ಎಂದು ಜನರು ಮಾಸ್ಕ್ ಧರಿಸದೆ, ಸ್ಯಾನಿಟೈಸರ್ ಬಳಸದೆ, ಕೈ ತೊಳೆದುಕೊಳ್ಳದೆ ನಿರ್ಲಕ್ಷ ತಾಳಿದರೆ ಮತ್ತೆ ಅತ್ಯಂತ ತೀವ್ರವಾಗಿ ಕೋವಿಡ್ ಮರುಕಳಿಸುವ ಅಪಾಯವೂ ಇದೆ. ಆದ್ದರಿಂದ ಈ ಕುರಿತು ಮಾರ್ಗಸೂಚಿಗಳನ್ನು ಜನರು ಕಡೆಗಣಿಸಬಾರದು. ಹಬ್ಬಗಳನ್ನು ಆಚರಿಸಬಾರದೆಂದಲ್ಲ. ಆದರೆ ಜೀವಕ್ಕಿಂತ ಯಾವುದೇ ಹಬ್ಬವೂ ದೊಡ್ಡದಲ್ಲ. ಹಬ್ಬಗಳನ್ನು ಆಚರಿಸುವಾಗ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಯಾರೋ ಒಬ್ಬಿಬ್ಬರು ತಾಳುವ ನಿರ್ಲಕ್ಷದಿಂದ ಇಡೀ ಕುಟುಂಬ ಯಾತನೆ ಪಡುವಂತಾಗಬಾರದು.

ಕಳೆದ ಮಾರ್ಚ್ ತಿಂಗಳಲ್ಲಿ ಕೋವಿಡ್ ಕಾಣಿಸಿಕೊಂಡಾಗ ದೇಶದ ಮೇಲೆ ಹೇರಿದ ಲಾಕ್‌ಡೌನ್ ಈಗಿಲ್ಲ. ಆದರೆ ಅದರ ಪರಿಣಾಮವಾಗಿ ತೊಂದರೆಗೊಳಗಾದ ಜನಸಾಮಾನ್ಯರ ಬದುಕು ಇನ್ನೂ ಚೇತರಿಸಿಲ್ಲ. ಬಡವರ ಉದ್ಯೋಗಾವಕಾಶಗಳನ್ನು ಕೋವಿಡ್ ಕಸಿದುಕೊಂಡಿದೆ.

ಕೋವಿಡ್ ದೇಶದಲ್ಲಿ ಕಾಣಿಸಿಕೊಂಡಾಗ ಟಿವಿ ಪರದೆಯ ಮೇಲೆ ಕಾಣಿಸಿಕೊಂಡ ಪ್ರಧಾನ ಮಂತ್ರಿಗಳು ಜನರಿಗೆ ಚಪ್ಪಾಳೆ ತಟ್ಟುವ, ದೀಪ ಹಚ್ಚುವ ಸಂದೇಶ ನೀಡಿದರು. ಜನರು ಅದನ್ನು ಚಾಚೂ ತಪ್ಪದೆ ಪಾಲಿಸಿದರು. ಆದರೆ ಈ ಯಾವುದರಿಂದಲೂ ಕೋವಿಡ್ ಕಡಿಮೆಯಾಗಲಿಲ್ಲ. ಜನರು ಸಾಯುವುದು ತಪ್ಪಲಿಲ್ಲ. ಇದರ ಬದಲಾಗಿ ಸರಕಾರ ಜನರ ಆರ್ಥಿಕ ಬದುಕಿನ ಚೇತರಿಕೆಗೆ ಕ್ರಮ ಕೈಗೊಳ್ಳಬೇಕಾಗಿತ್ತು. ಆರ್ಥಿಕ ಪುನಶ್ಚೇತನಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವಾರು ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿವೆ. ಆದರೆ ಈ ಪ್ಯಾಕೇಜ್‌ಗಳಿಂದ ಜನಸಾಮಾನ್ಯರ ಆರ್ಥಿಕ ಸಮಸ್ಯೆಗಳಿಗೆ ಎಷ್ಟು ಉಪಯೋಗವಾಗಿದೆ? ಆರ್ಥಿಕ ಪರಿಸ್ಥಿತಿ ಎಷ್ಟರ ಮಟ್ಟಿಗೆ ಚೇತರಿಸಿದೆ? ಎಂಬ ವಿವರಗಳನ್ನು ಪ್ರಧಾನಿ ನೀಡಿಲ್ಲ. ಬರೀ ಗಂಟೆ-ಜಾಗಟೆಗಳಿಂದ ಹಾಗೂ ಜನರನ್ನು ಮನೆಗಳಲ್ಲಿ ಕೂಡಿ ಹಾಕುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ.

ಇನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅವ್ಯವಸ್ಥೆಯ ತಾಣವಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ಸಾಮಾನ್ಯವಾಗಿವೆ. ಈ ನಡುವೆಯೂ ಕೋವಿಡ್ ಇಳಿಮುಖವಾಗುತ್ತಿರುವುದು ಒಳ್ಳೆಯ ಸೂಚನೆಯಾಗಿದೆ. ಹಾಗೆಂದು ಸರಕಾರಿ ಆಸ್ಪತ್ರೆಗಳ ಸುಧಾರಣೆಯನ್ನು ಕಡೆಗಣಿಸಬೇಕೆಂದಿಲ್ಲ.

ಪ್ರಧಾನಿಯವರೇನೋ ಟಿವಿಯಲ್ಲಿ ಮತ್ತೆ ಕಾಣಿಸಿಕೊಂಡು ಸರಕಾರದ ಕೋವಿಡ್ ತಡೆ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನರಿಗೆ ಉಪದೇಶ ನೀಡಿದ್ದಾರೆ. ಆದರೆ ಜನರಿಗೆ ಇಂತಹ ಒಣ ಉಪದೇಶಗಳ ಬದಲಾಗಿ ಕೊರೋನ ಮತ್ತು ಲಾಕ್‌ಡೌನ್‌ನಿಂದ ಅಸ್ತವ್ಯಸ್ತವಾದ ಬದುಕಿಗೆ ನೆಮ್ಮದಿಯ ಪುನರ್‌ನೆಲೆ ಬೇಕಾಗಿದೆ. ಪ್ರಧಾನಿಯವರಿಂದ ಜನರು ಅಂತಹ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಕನಿಷ್ಠ ಪ್ರತಿ ಕುಟುಂಬಕ್ಕೆ ಎಂಟು ಸಾವಿರ ರೂಪಾಯಿಗಳನ್ನಾದರೂ ತುರ್ತಾಗಿ ನೀಡಬೇಕಾಗಿತ್ತು. ಆದರೆ ಅದ್ಯಾವುದನ್ನ್ನು ಮಾಡಿಲ್ಲ. ಬರೀ ಒಣ ಮಾತಿನಿಂದ ಏನೂ ಆಗುವುದಿಲ್ಲ. ಈ ಆಘಾತದಿಂದ ದೇಶ ಪುನಶ್ಚೇತನ ಪಡೆಯಲು ಒಂದು ನಿರ್ದಿಷ್ಟವಾದ ಕಾರ್ಯಯೋಜನೆಯನ್ನು ಸರಕಾರ ಕೈಗೊಳ್ಳುವುದು ಅಗತ್ಯವಾಗಿದೆ.

ನಾವು ಅಧಿಕಾರಕ್ಕೆ ತಂದ ನಮ್ಮನ್ನು ಆಳುವ ಸರಕಾರ ತನ್ನ ಕರ್ತವ್ಯ ಪಾಲನೆಯಲ್ಲಿ ಇದುವರೆಗೆ ನಿರ್ಲಕ್ಷ ಧೋರಣೆ ತಾಳಿರುವುದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇನ್ನು ಮುಂದಿನ ಎರಡು ತಿಂಗಳುಗಳ ಕಾಲ ಅತ್ಯಂತ ನಿರ್ಣಾಯಕವಾಗಿರುವುದರಿಂದ ವೈದ್ಯಕೀಯ ಮಾರ್ಗಸೂಚಿಗಳನ್ನು ದೇಶದ ಜನತೆ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News