ತೈವಾನ್‌ಗೆ ಹಾರ್ಪೂನ್ ಕ್ಷಿಪಣಿಗಳ ಮಾರಾಟ: ಅಮೆರಿಕ ನಿರ್ಧಾರ

Update: 2020-10-27 18:21 GMT

ವಾಶಿಂಗ್ಟನ್, ಅ. 27: 2.4 ಬಿಲಿಯ ಡಾಲರ್ (ಸುಮಾರು 17,675 ಕೋಟಿ ರೂಪಾಯಿ) ವೆಚ್ಚದಲ್ಲಿ ತೈವಾನ್‌ಗೆ 100 ‘ಹಾರ್ಪೂನ್ ಕರಾವಳಿ ರಕ್ಷಣಾ’ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಮಾರಾಟ ಮಾಡುವ ಗುತ್ತಿಗೆಗೆ ಅಂಗೀಕಾರ ನೀಡಿರುವುದಾಗಿ ಅಮೆರಿಕ ಸೋಮವಾರ ಪ್ರಕಟಿಸಿದೆ.

‘‘ಹಾರ್ಪೂನ್ ಶಸ್ತ್ರ ವ್ಯವಸ್ಥೆಗಳ ಮಾರಾಟದಿಂದಾಗಿ ತೈವಾನ್‌ನ ಭದ್ರತೆ ಹೆಚ್ಚುತ್ತದೆ ಹಾಗೂ ರಾಜಕೀಯ ಸ್ಥಿರತೆ, ಸೇನಾ ಸಮತೋಲನ ನೆಲೆಸುತ್ತದೆ ಹಾಗೂ ವಲಯದಲ್ಲಿ ಪ್ರಗತಿ ಸಾಧ್ಯವಾಗುತ್ತದೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ತೈವಾನ್‌ನೊಂದಿಗೆ ಅಮೆರಿಕ ಮಾಡಿಕೊಂಡಿರುವ ಮಾರಾಟ ಕರಾರಿನ ಪ್ರಕಾರ, ಆ ದೇಶಕ್ಕೆ 100 ಹಾರ್ಪೂನ್ ರಕ್ಷಣಾ ವ್ಯವಸ್ಥೆಗಳನ್ನು ಮಾರಾಟ ಮಾಡಲಾಗುತ್ತದೆ. ಅದರಲ್ಲಿ ಭೂಮಿ ಅಥವಾ ನೀರಿನ ಮೇಲ್ಮೈಯಿಂದ ಉಡಾಯಿಸಲಾಗುವ 400 ‘ಆರ್‌ಜಿಎಮ್-84ಎಲ್-4 ಹಾರ್ಪೂನ್ ಬ್ಲಾಕ್ 2’ ಕ್ಷಿಪಣಿಗಳು ಒಳಗೊಂಡಿರುತ್ತವೆ. ಈ ಕ್ಷಿಪಣಿಗಳು ಗರಿಷ್ಠ 125 ಕಿ.ಮೀ. ದೂರ ಹಾರುವ ಸಾಮರ್ಥ್ಯವನ್ನು ಒಳಗೊಂಡಿದೆ.

ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಿರುವ ತೈವಾನ್ ಚೀನಾ ದಾಳಿಯ ನಿರಂತರ ಬೆದರಿಕೆಯನ್ನು ಎದುರಿಸುತ್ತಿದೆ.

ಸಾರ್ವಭೌಮತೆ ಎತ್ತಿಹಿಡಿಯಲು ಸೂಕ್ತ ನಿರ್ಧಾರ: ಚೀನಾ

ಬೀಜಿಂಗ್ (ಚೀನಾ), ಅ. 27: ತೈವಾನ್‌ಗೆ ಹಾರ್ಪೂನ್ ಕ್ಷಿಪಣಿಗಳನ್ನು ಮಾರಾಟ ಮಾಡಲು ಅವೆುರಿಕ ತೆಗೆದುಕೊಂಡಿರುವ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಚೀನಾ ವಿದೇಶ ಸಚಿವಾಲಯವು, ತನ್ನ ಸಾರ್ವಭೌಮತೆ ಮತ್ತು ಭದ್ರತಾ ಹಿತಾಸಕ್ತಿಗಳನ್ನು ಎತ್ತಿಹಿಡಿಯಲು ಚೀನಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದೆ.

ಚೀನಾ-ಅವೆುರಿಕ ಸಂಬಂಧಕ್ಕೆ ಇನ್ನಷ್ಟು ಹಾನಿಯಾಗುವುದನ್ನು ತಪ್ಪಿಸಲು ತೈವಾನ್‌ಗೆ ಶಸ್ತ್ರಾಸ್ತ್ರಗಳ ಮಾರಾಟವನ್ನು ನಿಲ್ಲಿಸುವಂತೆ ಚೀನಾವು ಅಮೆರಿಕವನ್ನು ಒತ್ತಾಯಿಸುತ್ತದೆ ಎಂದು ವಿದೇಶ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಬೀಜಿಂಗ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತೈವಾನ್‌ಗೆ ಶಸ್ತ್ರಾಸ್ತ್ರ ಮಾರಾಟದಲ್ಲಿ ತೊಡಗಿರುವ ಅವೆುರಿಕದ ಕಂಪೆನಿಗಳಾದ ಲಾಕ್‌ಹೀಡ್ ಮಾರ್ಟಿನ್, ಬೋಯಿಂಗ್ ಡಿಫೆನ್ಸ್, ರೇತಿಯಾನ್ ಮತ್ತು ಇತರ ಕೆಲವು ಕಂಪೆನಿಗಳ ಮೇಲೆ ದಿಗ್ಬಂಧನ ವಿಧಿಸಿಸುವುದಾಗಿ ಚೀನಾ ಸೋಮವಾರ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News