ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ: ಗೇಲ್

Update: 2020-10-27 18:48 GMT

ಶಾರ್ಜಾ: ನಿವೃತ್ತಿಯನ್ನು ರದ್ದು ಮಾಡಿದ್ದೇನೆ. ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಹೇಳಿದ್ದಾರೆ.

 ಸೋಮವಾರ ಇಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಟೂರ್ನಿಯ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಪಂದ್ಯದ ಬಳಿಕ ಗೇಲ್ ಅಭಿಪ್ರಾಯಪಟ್ಟರು.

ಈ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ನ್ನು (ಕೆಕೆಆರ್)ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 8 ಎಂಟು ವಿಕೆಟ್‌ಗಳ ಅಂತರದಿಂದ ಸೋಲಿಸಿತು. ಪಂದ್ಯದಲ್ಲಿ ಗೇಲ್ ಮತ್ತು ಮನ್‌ದೀಪ್ ಎರಡನೇ ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನೀಡಿದ್ದರು.

 ಪಂದ್ಯದ ನಂತರ ಮನ್‌ದೀಪ್ ಅವರು ಗೇಲ್‌ರನ್ನು ಸಂದರ್ಶಿಸುವ ವೀಡಿಯೊವನ್ನು ಐಪಿಎಲ್‌ಟಿ 20. ಕಾಂ ಪೋಸ್ಟ್ ಮಾಡಿದೆ.

ಇವರ ಸಂಭಾಷಣೆಯ ವೇಳೆ ಮನ್‌ದೀಪ್ ಅವರು ಎಂದಿಗೂ ನೀವು ನಿವೃತ್ತರಾಗಬಾರದು ಎಂದು ಗೇಲ್‌ಗೆ ತಿಳಿಸಿದರು.

ಇದಕ್ಕೆ ಉತ್ತರಿಸಿದ 41ರ ಹರೆಯದ ಗೇಲ್ ‘‘ನಿವೃತ್ತಿಯನ್ನು ರದ್ದು ಮಾಡಿದ್ದೇನೆ. ಯಾವುದೇ ಸಮಯದಲ್ಲಿ ನಿವೃತ್ತಿಯಾಗುವುದಿಲ್ಲ’’ ಎಂದು ಹೇಳಿದರು.

 ಐಪಿಎಲ್ ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನೇರ ಮತ್ತು ಐದನೇ ಗೆಲುವು ದಾಖಲಿಸಿದೆ. ತಂಡವು ಈಗ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ. 150 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಲು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಮನ್‌ದೀಪ್ ಮತ್ತು ಗೇಲ್ ಕ್ರಮವಾಗಿ ಔಟಾಗದೆ 66 ರನ್ ಮತ್ತು 51 ರನ್‌ಗಳ ಕೊಡುಗೆ ನೀಡಿದರು.

ಮನ್‌ದೀಪ್ ಅವರ ತಂದೆ ಶುಕ್ರವಾರ ನಿಧನರಾದರು. ಅವರು ಪ್ರತಿ ಪಂದ್ಯದಲ್ಲೂ ಔಟಾಗಬಾರದು ಎಂದು ತನ್ನಲ್ಲಿ ಹೇಳಿದ್ದರು ಎಂದು ಮನ್‌ದೀಪ್ ನೆನಪಿಸಿಕೊಂಡರು.

 ‘‘ನನ್ನ ತಂದೆ ಯಾವಾಗಲೂ ಪ್ರತಿಯೊಂದು ಪಂದ್ಯದಲ್ಲೂ ನನಗೆ ನಾಟೌಟ್ ಆಗಿ ಉಳಿಯಬೇಕೆಂದು ಹೇಳುತ್ತಿದ್ದರು. ಈ ಪಂದ್ಯದಲ್ಲಿ ನಾನು ಔಟಾಗಿಲ್ಲ. ಪಂದ್ಯದ ಮೊದಲು, ನಾನು ರಾಹುಲ್ ಅವರೊಂದಿಗೆ ಮಾತನಾಡಿದ್ದೇನೆ. ನನ್ನ ಆಟವನ್ನು ಆಡಲು ಅವಕಾಶ ಮಾಡಿಕೊಡಿ ಮತ್ತು ನಾನು ಆರಂಭದಲ್ಲಿ ಕೆಲವು ಎಸೆತಗಳಲ್ಲಿ ರನ್ ಗಳಿಸದಿದ್ದರೂ ನಾನು ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡಬಲ್ಲೆ ಎಂದು ಹೇಳಿದ್ದೆ. ನಾನು ಪಂದ್ಯವನ್ನು ಮುಗಿಸಿ ನಾಟೌಟ್ ಆಗಿ ಉಳಿದಿರುವ ಹಿನ್ನೆಲೆಯಲ್ಲಿ ನನ್ನ ತಂದೆಗೆ ಇಂದು ನಿಜವಾಗಿಯೂ ಸಂತೋಷವಾಗುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂದು ಮನ್‌ದೀಪ್ ತಿಳಿಸಿದರು.

 ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮನ್‌ದೀಪ್ ಅವರು ‘‘ಗೇಲ್ ಅವರು ಓರ್ವ ಶ್ರೇಷ್ಠ ಟಿ 20 ಆಟಗಾರ’’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘‘ಗೇಲ್ ಎಂದಿಗೂ ನಿವೃತ್ತರಾಗಬಾರದು ಅವರು ಯಾವಾಗಲೂ ಉತ್ತಮ ಫಾರ್ಮ್‌ನಲ್ಲಿರುತ್ತಾರೆ ಅವರು ರನ್‌ಗಾಗಿ ಪರದಾಡುವುದನ್ನು ನಾನು ನೋಡಿಲ್ಲ ’’ಎಂದು ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News