ಫ್ರೆಂಚ್ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ಬೆನ್ನಲ್ಲೇ ವೈರಲ್ ಆಯ್ತು ಟರ್ಕಿ ಅಧ್ಯಕ್ಷರ ಪತ್ನಿಯ ದುಬಾರಿ ಹ್ಯಾಂಡ್ ಬ್ಯಾಗ್

Update: 2020-10-28 18:18 GMT

 ಹೊಸದಿಲ್ಲಿ: ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಬ್ ಎರ್ದೊಗಾನ್ ಎಲ್ಲ ಫ್ರೆಂಚ್ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ ಬೆನ್ನಿಗೇ ಪ್ರಥಮ ಮಹಿಳೆ ಎಮೈನ್ ಎರ್ದೊಗಾನ್ ಅವರು ಫ್ರೆಂಚ್ ಕಂಪೆನಿ ತಯಾರಿಸಿರುವ ಹ್ಯಾಂಡ್ ಬ್ಯಾಗ್ ನ್ನು ಹಿಡಿದುಕೊಂಡು ಹೋಗುತ್ತಿರುವ ಹಳೆಯ ಫೋಟೊಗಳು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್  ಪ್ರವಾದಿ ಮುಹಮ್ಮದ್ ಅವರ ಕುರಿತಾದ ವ್ಯಂಗ್ಯಚಿತ್ರಗಳನ್ನು ತೋರಿಸುವ ಹಕ್ಕನ್ನು ಸಮರ್ಥಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮ್ಯಾಕ್ರೋನ್ ಹೇಳಿಕೆಯ ಬಳಿಕ ಟರ್ಕಿ ಹಾಗೂ ಫ್ರಾನ್ಸ್ ನಡುವೆ ಬಿರುಕು ಉಂಟಾಗಿದ್ದು, ಫ್ರಾನ್ಸ್ ಸರಕುಗಳನ್ನು ಬಹಿಷ್ಕರಿಸಲು  ಕರೆ ನೀಡಲಾಗಿತ್ತು.

ಟ್ವಿಟರ್ ನಲ್ಲಿ ಬಳಕೆದಾರರು ಹರ್ಮ್ಸ್ ಹ್ಯಾಂಡ್ ಬ್ಯಾಗನ್ನು ಹಿಡಿದುಕೊಂಡಿರುವ ಎಮೈನ್ ಅವರ ಚಿತ್ರಗಳನ್ನುಹಂಚಿಕೊಂಡಿದ್ದಾರೆ. ಈ ಬ್ಯಾಗ್ ನ ಬೆಲೆ ಸುಮಾರು 50,000 ಡಾಲರ್ (ಅಂದಾಜು 36.8 ಲಕ್ಷ ರೂ.) ಹರ್ಮ್ಸ್ ಅಗ್ರಮಾನ್ಯ ಫ್ಯಾಷನ್ ಐಷಾರಾಮಿ ಸರಕುಗಳ ತಯಾರಕ ಕಂಪೆನಿಯಾಗಿದ್ದು, ಇದನ್ನು 1837ರಲ್ಲಿ ಫ್ರಾನ್ಸ್ ನಲ್ಲಿ ಸ್ಥಾಪಿಸಲಾಗಿತ್ತು.

ಸೋಮವಾರ ದೂರದರ್ಶನದಲ್ಲಿ ಮಾತನಾಡಿದ್ದ ಎರ್ದೊಗಾನ್ "ಫ್ರೆಂಚ್ ಲೇಬಲ್ ಇರುವ ಸರಕುಗಳಿಗೆ  ಬೆಲೆ ನೀಡಬೇಡಿ. ಆ ವಸ್ತುಗಳನ್ನು ಖರೀದಿಸಬೇಡಿ. ಮ್ಯಾಕ್ರೋನ್ ಮನಸ್ಸು ಕೆಟ್ಟಿದೆ. ಅವರಿಗೆ ಮುಸ್ಲಿಮರೊಂದಿಗೆ ಸಮಸ್ಯೆ ಇದೆ'' ಎಂದು ಹೇಳಿದ್ದರು.

ದೇಶವು ಕರೆನ್ಸಿ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿದ್ದಾಗ ಕಳೆದ ವರ್ಷ ಕೂಡ ಪ್ರಥಮ ಮಹಿಳೆ ಇದೇ ದುಬಾರಿ ಹ್ಯಾಂಡ್ ಬ್ಯಾಗನ್ನು ಹಿಡಿದುಕೊಂಡಿರುವುದಕ್ಕೆ ಟೀಕೆಗಳು ವ್ಯಕ್ತವಾಗಿದ್ದವು. ಟೋಕಿಯೊದ ಇಂಪೀಯರಿಯಲ್ ಪ್ಯಾಲೇಸ್ ಗೆ ಅಧ್ಯಕ್ಷ ಎರ್ದೊಗಾನ್ ಅವರೊಂದಿಗೆ ತೆರಳಿದ್ದಾಗ ಎಮೈನ್ ಹ್ಯಾಂಡ್ ಬ್ಯಾಗನ್ನು ಹಿಡಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News