ಏಳು ಬಂಡಾಯ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಿದ ಮಾಯಾವತಿ

Update: 2020-10-29 07:56 GMT

ಲಕ್ನೋ: ರಾಜ್ಯಸಭಾ ಚುನಾವಣೆಗೆ ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ರಾಮ್‍ಜಿ ಗೌತಮ್ ಅವರ ಆಯ್ಕೆಯನ್ನು ವಿರೋಧಿಸಿದ ಏಳು ಮಂದಿ ಬಂಡುಕೋರ ಶಾಸಕರನ್ನು ಬಹುಜನ್ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಪಕ್ಷದಿಂದ ಅಮಾನತುಗೊಳಿಸಿದ್ದಾರೆ. ಚೌಧುರಿ ಅಸ್ಲಂ ಆಲಿ, ಹಕೀಂ ಲಾಲ್ ಬಿಂಡ್, ಮುಹಮ್ಮದ್ ಮುಜ್ತಾಬ್ ಸಿದ್ದೀಖಿ, ಅಸ್ಲಂ ರೈನಿ, ಸುಷ್ಮಾ ಪಟೇಲ್, ಹರಗೋವಿಂದ್ ಭಾರ್ಗವ ಹಾಗೂ ಬಂದನಾ ಸಿಂಗ್  ಅಮಾನತುಗೊಂಡವರಾಗಿದ್ದಾರೆ.

ಈ ಬಂಡಾಯ ಶಾಸಕರುಗಳು ಬುಧವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದರಲ್ಲದೆ ಎಲ್ಲರೂ ಪಕ್ಷಾಂತರಗೊಳ್ಳಲಿದ್ದಾರೆಂಬ ಸುದ್ದಿಯೂ ದಟ್ಟವಾಗಿತ್ತು.

ಬಿಎಸ್‍ಪಿ ರಾಷ್ಟ್ರೀಯ ಸಂಚಾಲಕ ಹಾಗೂ ಬಿಹಾರ ಉಸ್ತುವಾರಿ ರಾಮ್‍ಜಿ ಗೌತಮ್ ಅವರ ನಾಮಪತ್ರದಲ್ಲಿ ತಮ್ಮ ಸಹಿಯನ್ನು ಫೋರ್ಜರಿ ಮಾಡಲಾಗಿತ್ತು ಎಂದು  ಈ ಏಳು ಮಂದಿಯ ಪೈಕಿ ನಾಲ್ಕು ಮಂದಿ ಆರೋಪಿಸಿದ್ದಾರೆ. ಅದರೆ ರಿಟರ್ನಿಂಗ್ ಅಧಿಕಾರಿ ನವೆಂಬರ್ 9ರಂದು  ನಡೆಯಲಿರುವ ಚುನಾವಣೆಗೆ ಗೌತಮ್ ಅವರ ನಾಮಪತ್ರವನ್ನು ಸ್ವೀಕರಿಸಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಲು ಅಗತ್ಯವಿರುವ ಸದಸ್ಯರ ಬೆಂಬಲವಿರದ ಹೊರತಾಗಿಯೂ ಬಿಎಸ್‍ಪಿ ಸೋಮವಾರ ರಾಮಜಿ ಗೌತಮ್  ಅವರನ್ನು ಕಣಕ್ಕಿಳಿಸಿತ್ತು. ಇತರ ಬಿಜೆಪಿಯೇತರ ಪಕ್ಷಗಳು ಅವರನ್ನು ಬೆಂಬಲಿಸುವ ನಿರೀಕ್ಷೆಯನ್ನು ಬಿಎಸ್‍ಪಿ ನಾಯಕರು ವ್ಯಕ್ತಪಡಿಸಿದ್ದರು.

ಉತ್ತರ ಪ್ರದೇಶದ ಒಟ್ಟು 10 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಈ ಹಿಂದೆ ಇವುಗಳ ಪೈಕಿ ಮೂರು ಸ್ಥಾನಗಳನ್ನು ಬಿಜೆಪಿ ಪಡೆದಿದ್ದರೆ, ಎಸ್‍ಪಿ ನಾಲ್ಕು, ಬಿಎಸ್‍ಪಿ ಎರಡು ಸ್ಥಾನಗಳನ್ನು ಹಾಗೂ ಕಾಂಗ್ರೆಸ್ ಒಂದು ಸ್ಥಾನ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News