ನೀವು ತಲೆಗೂದಲಿಗೆ ಬಣ್ಣ ಹಚ್ಚಿಕೊಳ್ಳುತ್ತೀರಾ? ಹಾಗಿದ್ದರೆ ಅದರ ಅಡ್ಡಪರಿಣಾಮಗಳೂ ನಿಮಗೆ ಗೊತ್ತಿರಲಿ

Update: 2020-10-29 15:01 GMT

ತಲೆಗೂದಲಿಗೆ ಬಣ್ಣವನ್ನು ಹಚ್ಚಿಕೊಳ್ಳುವುದು ಇಂದು ಅತ್ಯಂತ ಸಾಮಾನ್ಯವಾಗಿದೆ. ಇದರಲ್ಲಿ ಪುರುಷರು ಮತ್ತು ಮಹಿಳೆಯರು ಎಂಬ ಭೇದವಿಲ್ಲ. ಮಾರುಕಟ್ಟೆಯಲ್ಲಿ ಹಲವಾರು ವಿಧಗಳ ತಾತ್ಕಾಲಿಕ ಮತ್ತು ಪರ್ಮನೆಂಟ್ ಹೇರ್‌ಡೈಗಳು ಲಭ್ಯವಿವೆ. ತಲೆಗೂದಲಿಗೆ ಬಣ್ಣವನ್ನು ಹಚ್ಚಿಕೊಳ್ಳುವುದು ಎಷ್ಟು ಸುರಕ್ಷಿತ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ ಮತ್ತು ಹೇರ್‌ಡೈ ಬಳಸುವ ಪ್ರತಿಯೊಬ್ಬರೂ ಈ ಬಗ್ಗೆ ಖಂಡಿತ ಯೋಚಿಸಬೇಕು. ಹೇರ್‌ಡೈ ತಲೆಗೂದಲು ಮತ್ತು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಲ್ಲದು,ಹೀಗಾಗಿ ಅದನ್ನು ಬಳಸುವಾಗ ಸಾಕಷ್ಟು ಎಚ್ಚರಿಕೆಯನ್ನು ವಹಿಸುವುದು ಅಗತ್ಯವಾಗಿದೆ.

ಪರ್ಮನೆಂಟ್,ಸೆಮಿ ಪರ್ಮನೆಂಟ್,ಬ್ಲೀಚಿಂಗ್,ಅಮೋನಿಯಾ ಫ್ರೀ ಹೀಗೆ ಹತ್ತು ಹಲವಾರು ವಿಧಗಳ ಹೈರ್‌ಡೈಗಳು ಲಭ್ಯವಿವೆ.ಆದರೆ ಪರ್ಮನೆಂಟ್ ಹೇರ್‌ಡೈ ಗರಿಷ್ಠ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಹೇರ್‌ಡೈ ಬಳಕೆಯ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿಗಳಿಲ್ಲಿವೆ.......

ಕಂಜಕ್ಟಿವೈಟಿಸ್

 ಸಾಕಷ್ಟು ಎಚ್ಚರಿಕೆ ವಹಿಸದಿದ್ದರೆ ತಲೆಗೂದಲಿಗೆ ಬಣ್ಣ ಹಚ್ಚಿಕೊಳ್ಳುವುದು ಕಣ್ಣುಗಳಿಗೂ ಹಾನಿಯನ್ನುಂಟು ಮಾಡುತ್ತದೆ. ಹೇರ್‌ಡೈನಲ್ಲಿರುವ ರಾಸಾಯನಿಕಗಳಿಗೆ ಕಣ್ಣುಗಳು ಅತ್ಯಂತ ಸುಲಭದ ಗುರಿಗಳಾಗಿವೆ. ಕಣ್ಣು ಹೇರ್‌ಡೈ ಸಂಪರ್ಕಕ್ಕೆ ಬಂದರೆ ಅದು ಕಂಜಕ್ಟಿವೈಟಿಸ್ ಅಥವಾ ಕೆಂಗಣ್ಣು ಬೇನೆಗೆ ಕಾರಣವಾಗಬಲ್ಲದು. ಕೆಲವು ಪ್ರಕರಣಗಳಲ್ಲಿ ಇದು ಕಣ್ಣಿನಲ್ಲಿ ಕಿರಿಕಿರಿಯನ್ನಷ್ಟೇ ಉಂಟು ಮಾಡಬಹುದು.

ಅಲರ್ಜಿ

ಹೇರ್‌ಡೈನಲ್ಲಿ ಪ್ಯಾರಾಫಿನೈಲ್ಡಿಮೈನ್ ಸೇರಿದಂತೆ ಹಲವಾರು ರಾಸಾಯನಿಕಗಳಿರುತ್ತವೆ ಮತ್ತು ಈ ಪ್ಯಾರಾಫಿನೈಲ್ಡಿಮೈನ್ ಅಲರ್ಜಿಕಾರಕವಾಗಿದೆ. ಇದರಿಂದಾಗಿ ಡರ್ಮಟೈಟಿಸ್ ಅಥವಾ ಚರ್ಮದಲ್ಲಿ ಉರಿಯನ್ನು ಅನುಭವಿಸುತ್ತಿರುವವರು ತೀವ್ರ ಅಲರ್ಜಿ ಪ್ರತಿವರ್ತನೆಗೆ ಗುರಿಯಾಗಬಹುದು. ಕಜ್ಜಿ ಮತ್ತು ಸೋರಿಯಾಸಿಸ್‌ನಿಂದ ಬಳಲುತ್ತಿರುವವರೂ ಹೇರ್‌ಡೈನಿಂದ ದೂರವಿದ್ದರೆ ಒಳ್ಳೆಯದು. ತುರಿಕೆ,ಚರ್ಮದಲ್ಲಿ ಕಿರಿಕಿರಿ,ಚರ್ಮ ಕೆಂಪಾಗುವುದು ಅಥವಾ ಬಾತುಕೊಳ್ಳುವಿಕೆ ಇವೆಲ್ಲ ಇಂತಹ ಅಲರ್ಜಿಗಳಾಗಿವೆ.

ಅಸ್ತಮಾ

ಅಸ್ತಮಾ ಹೇರ್‌ಡೈಗಳ ಗಂಭೀರ ಅಲರ್ಜಿಗಳಲ್ಲೊಂದಾಗಿದೆ. ಹೇರ್‌ಡೈನಲ್ಲಿರುವ ರಾಸಾಯನಿಕಗಳನ್ನು ಉಸಿರಾಡುವುದು ನಿರಂತರ ಕೆಮ್ಮು,ಉಬ್ಬಸ,ಶ್ವಾಸಕೋಶಗಳ ಉರಿಯೂತ,ಗಂಟಲಿನ ಕಿರಿಕಿರಿ ಮತ್ತು ಅಸ್ತಮಾಕ್ಕೆ ಕಾರಣವಾಗುತ್ತದೆ. ಈಗಾಗಲೇ ಅಸ್ತಮಾದಿಂದ ಬಳಲುತ್ತಿರುವವರಿಗೆ ಹೇರ್‌ಡೈಗಳ ಬಳಕೆ ಅತ್ಯಂತ ಹಾನಿಕಾರಕವಾಗುತ್ತದೆ.

ಭ್ರೂಣದ ಮೇಲೆ ಪರಿಣಾಮ

ಗರ್ಭಿಣಿಯರು ಹೇರ್‌ಡೈ ಬಳಸುವುದರಿಂದ ಗರ್ಭದಲ್ಲಿರುವ ಶಿಶುವಿಗೆ ಹಾನಿಯಾಗಬಹುದು. ಹೀಗಾಗಿ ಗರ್ಭಿಣಿಯರು ತಲೆಗೂದಲಿಗೆ ಬಣ್ಣವನ್ನು ಹಚ್ಚಿಕೊಳ್ಳುವ ಗೋಜಿಗೆ ಹೋಗಲೇಬಾರದು.

ಕೂದಲು ಉದುರುವಿಕೆ

ಹಲವಾರು ರಾಸಾಯನಿಕಗಳನ್ನು ಒಳಗೊಂಡಿರುವ ಹೇರ್‌ಡೈ ತಲೆಗೂದಲಿಗೆ ಹಾನಿಯನ್ನುಂಟು ಮಾಡುವುದು ಸಹಜವೇ ಆಗಿದೆ. ಅದರಲ್ಲಿರುವ ಅಮೋನಿಯಾ ಮತ್ತು ಪೆರಾಕ್ಸೈಡ್ ತಲೆಗೂದಲು ಉದುರುವಿಕೆ ಮತ್ತು ಸೀಳುವಿಕೆಗೆ ಕಾರಣವಾಗುತ್ತವೆ. ಕೂದಲು ದುರ್ಬಲಗೊಳ್ಳುತ್ತವೆ ಮತ್ತು ಹೊಳಪನ್ನು ಕಳೆದುಕೊಳ್ಳುತ್ತವೆ.

ಹೇರ್‌ಡೈ ಮಾಡಿಕೊಳ್ಳುವಾಗ ಅಗತ್ಯ ಮುನ್ನೆಚ್ಚರಿಕೆಗಳು

ಪರ್ಮನೆಂಟ್ ಹೇರ್‌ಡೈ ಬಳಕೆಯನ್ನು ನಿವಾರಿಸಿ. ಹೇರ್‌ಡೈಗೆ ಬದಲಾಗಿ ಮದರಂಗಿ,ಬೀಟ್‌ರೂಟ್ ರಸ ಇತ್ಯಾದಿ ಪರ್ಯಾಯಗಳನ್ನು ಪ್ರಯತ್ನಿಸಿ. ವಿವಿಧ ಬ್ರಾಂಡ್‌ಗಳ ಹೇರ್‌ಡೈಗಳಲ್ಲಿರುವ ರಾಸಾಯನಿಕಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡ ಬಳಿಕವೇ ಬಳಸಿ. ಮನೆಯಲ್ಲಿ ಕೂದಲಿಗೆ ಬಣ್ಣ ಹಚ್ಚಿಕೊಳ್ಳಬೇಡಿ,ವೃತ್ತಿಪರರಿಂದ ಈ ಸೇವೆಯನ್ನು ಪಡೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News