ಡಬ್ಲ್ಯುಟಿಒ ಮುಖ್ಯಸ್ಥೆಯಾಗಿ ನೈಜೀರಿಯ ಮಹಿಳೆ ನೇಮಕಾತಿಗೆ ಅಮೆರಿಕ ತಡೆ

Update: 2020-10-29 17:13 GMT

ನ್ಯೂಯಾರ್ಕ್, ಅ. 29: ಜಾಗತಿಕ ವ್ಯಾಪಾರ ಕಾವಲು ಸಂಸ್ಥೆ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)ಯ ಮಹಾನಿರ್ದೇಶಕರಾಗಿ ನೈಜೀರಿಯದ ಮಹಿಳೆ ನಗೊಝಿ ಒಕೊಂಜೊ ಐವಿಯಾಲರನ್ನು ನೇಮಿಸುವ ಪ್ರಸ್ತಾಪಕ್ಕೆ ಅಮೆರಿಕ ಬುಧವಾರ ತಡೆಯೊಡ್ಡಿದೆ. ಇದರೊಂದಿಗೆ ಈ ನೇಮಕಾತಿ ಪ್ರಕ್ರಿಯೆಯು ಅನಿಶ್ಚಿತತೆಗೆ ಸಿಲುಕಿದೆ.

ವ್ಯಾಪಾರವೇ ಪ್ರಧಾನ ವಿಷಯವಾಗಿರುವ ಅಮೆರಿಕ ಚುನಾವಣೆಗೆ ಕೇವಲ ಆರು ದಿನಗಳು ಇರುವಂತೆ ಡಬ್ಲ್ಯುಟಿಒ ಗೆ ಟ್ರಂಪ್ ಆಡಳಿತವು ಈ ಹೊಡೆತ ನೀಡಿದೆ. ಡಬ್ಲ್ಯುಟಿಒ ಭಯಾನಕ ಸಂಸ್ಥೆಯಾಗಿದೆ ಹಾಗೂ ಅದು ಚೀನಾ ಪರ ಒಲವು ಹೊಂದಿದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ವಾಗ್ದಾಳಿ ನಡೆಸಿದ್ದಾರೆ.

ಡಬ್ಲ್ಯುಟಿಒದ ಮೇಲ್ಮನವಿ ಮಂಡಳಿಯ ನೇಮಕಾತಿಗಳನ್ನು ತಡೆಯುವ ಮೂಲಕ, ಜಾಗತಿಕ ಪಂಚಾಯಿತಿ ಸಂಸ್ಥೆಯ ಕಾರ್ಯನಿರ್ವಹಣೆಗೆ ಅಮೆರಿಕ ಈಗಾಗಲೇ ಅಡ್ಡಿಯುಂಟು ಮಾಡಿದೆ. ಈಗ, ವಾರಗಳು ಅಥವಾ ತಿಂಗಳುಗಳ ಕಾಲ ನಾಯಕತ್ವರಹಿತ ಸಂಸ್ಥೆಯನ್ನಾಗಿ ಮಾಡಲು ಅದು ಮುಂದಾಗಿದೆ.

ಮುಂದಿನ ಸಭೆಯನ್ನು ಡಬ್ಲುಟಿಒ ನವೆಂಬರ್ 9ಕ್ಕೆ ನಿಗದಿಪಡಿಸಿದೆ. ಆ ಸಭೆಯಲ್ಲಿ ನೈಜೀರಿಯದ ಮಾಜಿ ಹಣಕಾಸು ಸಚಿವರೂ ಆಗಿರುವ ಐವಿಯಾಲಗೆ ಪೂರ್ಣ ಬೆಂಬಲ ಲಭಿಸುವ ವಿಶ್ವಾಸವನ್ನು ಅದು ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News