ಭವಿಷ್ಯದ ಸಾಂಕ್ರಾಮಿಕ ರೋಗಗಳು ಇನ್ನಷ್ಟು ಮಾರಕ: ಅಧ್ಯಯನ ವರದಿ

Update: 2020-10-30 03:52 GMT

ಜರ್ಮನಿ, ಅ.30: ಭವಿಷ್ಯದಲ್ಲಿ ವಿಶ್ವಾದ್ಯಂತ ಇನ್ನಷ್ಟು ಸಾಂಕ್ರಾಮಿಕಗಳು ಪದೇಪದೇ ಕಾಣಿಸಿಕೊಳ್ಳಲಿದ್ದು, ಈ ಪೈಕಿ ಕೆಲ ಸಾಂಕ್ರಾಮಿಕಗಳು ಕೊರೋನಾ ವೈರಸ್ ರೋಗ (ಕೋವಿಡ್-19)ಕ್ಕಿಂತಲೂ ಮಾರಕವಾಗಲಿವೆ ಎಂದು ತಜ್ಞರ ತಂಡದ ಅಧ್ಯಯನ ವರದಿ ಎಚ್ಚರಿಸಿದೆ. ಇಂಥ ಸೋಂಕು ರೋಗಗಳನ್ನು ನಿಭಾಯಿಸುವ ಜಾಗತಿಕ ದೃಷ್ಟಿಕೋನ ಬದಲಾಗದಿದ್ದರೆ, ಇದನ್ನು ನಿಯಂತ್ರಿಸುವುದು ಇನ್ನಷ್ಟು ದುಬಾರಿಯಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಜೀವವೈವಿಧ್ಯ ಮತ್ತು ಸಾಂಕ್ರಾಮಿಕಗಳ ಬಗೆಗಿನ ಜಾಗತಿಕ ವರದಿಯನ್ನು ವಿಶ್ವದ ವಿವಿಧೆಡೆಗಳ 22 ಮಂದಿ ತಜ್ಞರು ಸಿದ್ಧಪಡಿಸಿದ್ದು, ಗುರುವಾರ ಇದು ಬಿಡುಗಡೆಯಾಗಿದೆ. ಇಂಟರ್‌ಗವರ್ನ್‌ಮೆಂಟಲ್ ಸೈನ್ಸ್ ಪಾಲಿಸಿ ಪ್ಲಾಟ್‌ಫಾರ್ಮ್ ಆನ್ ಬಯೋಡೈವರ್ಸಿಟಿ ಆ್ಯಂಡ್ ಎಕೋಸಿಸ್ಟಮ್ ಸರ್ವೀಸಸ್ (ಐಪಿಬಿಇಎಸ್) ಆಯೋಜಿಸಿದ್ದ ಕಾರ್ಯಾಗಾರವೊಂದರಲ್ಲಿ ತಜ್ಞರು ಈ ವರದಿ ಸಿದ್ಧಪಡಿಸಿದ್ದಾರೆ. ಪರಿಸರಕ್ಕೆ ಆಗುತ್ತಿರುವ ಹಾನಿ ಮತ್ತು ಹೆಚ್ಚುತ್ತಿರುವ ಸಾಂಕ್ರಾಮಿಕ ಆಪಾಯದ ನಡುವೆ ಇರುವ ಸಂಬಂಧದ ಬಗ್ಗೆಯೂ ವರದಿ ಗಮನ ಹರಿಸಿದೆ.

ಕೋವಿಡ್-19ಗೆ ಕಾರಣವಾಗುವ ಎಸ್‌ಎಆರ್‌ಎಸ್-ಸಿಓವಿ-2 ವೈರಸ್ ಬಗ್ಗೆ ಜನ ಯೋಚಿಸುತ್ತಿದ್ದರೆ, ಪ್ರಕೃತಿಯಲ್ಲಿ ಮನುಷ್ಯರಿಗೆ ಸೋಂಕು ತರುವ 5,40,000ದಿಂದ 8,50,000 ದಷ್ಟು ವೈರಸ್‌ಗಳಿವೆ ಎಂದು ವರದಿ ಎಚ್ಚರಿಸಿದೆ. ಫ್ರೆಂಚ್ ಗಯಾನದಲ್ಲಿ ಮಯಾರೊ ವೈರಸ್ ಕಾಯಿಲೆ ಹರಡಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಎಚ್ಚರಿಸಿದ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ. ಡೆಂಗಿ ಜ್ವರವನ್ನು ಹೋಲುವ ರೋಗಲಕ್ಷಣಗಳು ಈ ಕಾಯಿಲೆಯಲ್ಲೂ ಕಾಣಿಸಿಕೊಳ್ಳುತ್ತವೆ. ಇದು ಕೂಡಾ ಸೊಳ್ಳೆಗಳಿಂದ ಹರಡುವ ರೋಗ.

ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಎಬೋಲಾ, ಝಿಕಾ, ನೀಪ್ ಎನ್‌ಸೆಪ್ಟಲಿಸ್ಟೀಸ್‌ನಂಥ ರೋಗಗಳ ಪೈಕಿ ಶೇಕಡ 70ರಷ್ಟು ರೋಗಗಳು ಮತ್ತು ಇನ್‌ಫ್ಲುಯೆಂಝ, ಎಚ್‌ಐವಿ/ಏಡ್ಸ್, ಕೋವಿಡ್-19 ರೋಗಗಳು ಪ್ರಾಣಿಗಳಲ್ಲಿ ಬೆಳೆಯುವ ಸೂಕ್ಷ್ಮಾಣುಗಳಿಂದ ಬರುತ್ತವೆ. ಈ ಸೂಕ್ಷ್ಮಾಣು ಜೀವಿಗಳು ವನ್ಯಮೃಗಗಳು, ಸಾಕುಪ್ರಾಣಿಗಳು ಮತ್ತು ಜನರಿಂದ ಹರಡುತ್ತವೆ ಎಂದು ಐಪಿಬಿಇಎಸ್ ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News