ಚರ್ಚ್‌ ನಲ್ಲಿ ಮೂವರ ಹತ್ಯೆ: ಫ್ರಾನ್ಸ್ ಮುಸ್ಲಿಮರಿಂದ ಖಂಡನೆ

Update: 2020-10-30 17:10 GMT

ನೀಸ್ (ಫ್ರಾನ್ಸ್), ಅ. 30: ಫ್ರಾನ್ಸ್‌ನ ದಕ್ಷಿಣದ ನಗರ ನೀಸ್‌ನ ನೋಟ್ರ ಡಾಮ್ ಚರ್ಚ್‌ನಲ್ಲಿ ಗುರುವಾರ ಮೂವರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ಶಂಕಿತನನ್ನು ಟ್ಯುನೀಶಿಯ ದೇಶದ ವಲಸಿಗ ಇಬ್ರಾಹೀಮ್ ಇಸಾವುಯಿ ಎಂಬುದಾಗಿ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವನು ಕಳೆದ ತಿಂಗಳು ವಲಸಿಗನಾಗಿ ದೋಣಿಯಲ್ಲಿ ಇಟಲಿಯ ಲ್ಯಾಂಪಡುಸ ದ್ವೀಪಕ್ಕೆ ಬಂದಿದ್ದನು. ಕ್ವಾರಂಟೈನ್ ಮುಗಿಸಿದ ಬಳಿಕ, ಮುಂದಕ್ಕೆ ಹೋಗುವಂತೆ ಅವನಿಗೆ ಸೂಚಿಸಲಾಗಿತ್ತು.

ಅವನು ಬಳಿಕ ನೀಸ್ ನಗರಕ್ಕೆ ರೈಲಿನಲ್ಲಿ ಬಂದಿದ್ದನು. ಅವನಲ್ಲಿ ಇಟಲಿಯಲ್ಲಿ ನೀಡಲಾದ ರೆಡ್‌ಕ್ರಾಸ್ ದಾಖಲೆಯೊಂದನ್ನು ಬಿಟ್ಟರೆ ಬೇರೆ ಯಾವುದೇ ದಾಖಲೆಯಿರಲಿಲ್ಲ ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

ಅವನ ಹೆಸರು ಶಂಕಿತ ಭಯೋತ್ಪಾದಕರ ಪಟ್ಟಿಯಲ್ಲಿ ಇರಲಿಲ್ಲ ಎಂದು ಟ್ಯುನೀಶಿಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನೊಂದು ಬೆಳವಣಿಗೆಯಲ್ಲಿ, ಶಂಕಿತನೊಂದಿಗೆ ಸಂಪರ್ಕದಲ್ಲಿದ್ದನೆಂದು ನಂಬಲಾದ 47 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಗುರುವಾರ ತಡರಾತ್ರಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಫ್ರಾನ್ಸ್ ಮಾಧ್ಯಮಗಳು ವರದಿ ಮಾಡಿವೆ.

 ಶಂಕಿತ ದಾಳಿಕೋರ ಇಬ್ರಾಹೀಮ್‌ಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಅವನು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವನ ಪರಿಸ್ಥಿತಿ ಗಂಭೀರವಾಗಿದೆಯೆನ್ನಲಾಗಿದೆ.

 ಈ ನಡುವೆ, ನೀಸ್ ನಗರದ ಚರ್ಚೊಂದರಲ್ಲಿ ಗುರುವಾರ ವ್ಯಕ್ತಿಯೊಬ್ಬ ಮೂವರನ್ನು ಹತ್ಯೆಗೈದ ಘಟನೆಗೆ ಸಂಬಂಧಿಸಿ ಫ್ರಾನ್ಸ್ ಮುಸ್ಲಿಮರು ಆಘಾತ ವ್ಯಕ್ತಪಡಿಸಿದ್ದಾರೆ. ಈ ಅಪರಾಧವು ತಮ್ಮ ಧರ್ಮವನ್ನಾಗಲಿ, ಮೌಲ್ಯಗಳನ್ನಾಗಲಿ ಪ್ರತಿನಿಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

‘‘ಇಂಥ ಕೃತ್ಯಗಳನ್ನು ಮಾಡುವವರು ಮುಸ್ಲಿಮರೂ ಅಲ್ಲ, ಕ್ರೈಸ್ತರೂ ಅಲ್ಲ. ಅವರು ಇಸ್ಲಾಮ್‌ನಲ್ಲಿರದ ಸಿದ್ಧಾಂತದ ಅನುಯಾಯಿಗಳಾಗಿದ್ದಾರೆ’’ ಎಂದು ಫ್ರಾನ್ಸ್‌ನ ನಾಗರಿಕ ಹಕ್ಕುಗಳ ಹೋರಾಟಗಾರ ಯಾಸಿರ್ ಲೋವಟಿ ಹೇಳಿದರು.

‘‘ಚರ್ಚ್‌ನ ಒಳಗೆ ಮಹಿಳೆಯೊಬ್ಬರ ತಲೆ ಕಡಿಯಲಾಗಿದೆ. ಅಂದರೆ ಈ ಕೃತ್ಯವನ್ನು ಮಾಡುವವರಿಗೂ ಧರ್ಮಕ್ಕೂ ಸಂಬಂಧವಿಲ್ಲ. ಅವರಲ್ಲಿ ನೈತಿಕ ಸೀಮಾರೇಖೆಗಳಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News