ಕೋವಿಡ್-19, ಉಸಿರಾಟ, ನರಶಾಸ್ತ್ರೀಯ ಸಮಸ್ಯೆಗಳು ಮಾತ್ರವಲ್ಲ ದೀರ್ಘಕಾಲಿಕ ಚರ್ಮ ಸಮಸ್ಯೆಗಳಿಗೂ ಕಾರಣವಾಗುತ್ತದೆ

Update: 2020-10-30 18:13 GMT

 ಕೋವಿಡ್-19 ಸಾಂಕ್ರಾಮಿಕವು ಜಗತ್ತನ್ನೇ ಆವರಿಸಿಕೊಂಡು ತಿಂಗಳುಗಳೇ ಕಳೆದಿವೆ,ಆದರೆ ಪ್ರತಿದಿನವೂ ವಿಜ್ಞಾನಿಗಳು ಈ ಮಾರಣಾಂತಿಕ ವೈರಸ್‌ನ ಕುರಿತು ಹೊಸ ಹೊಸ ವಿಷಯಗಳನ್ನು ಪತ್ತೆ ಹಚ್ಚುತ್ತಲೇ ಇದ್ದಾರೆ. ಕೋವಿಡ್-19 ಅನ್ನು ಆರಂಭದಲ್ಲಿ ಸ್ವರಕ್ಷಿತ ರೋಗವೆಂದು ಗುರುತಿಸಲಾಗಿತ್ತು. ಆದರೆ ಅದು ಶರೀರ ಮತ್ತು ಮನಸ್ಸು ಎರಡರ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ ಎನ್ನುವುದನ್ನು ವಿಜ್ಞಾನಿಗಳು ಈಗ ಕಂಡುಕೊಂಡಿದ್ದಾರೆ. ಕೊರೋನ ವೈರಸ್ ಸೋಂಕಿನಿಂದ ಹಲವಾರು ಪರಿಣಾಮಗಳು ಉಂಟಾಗುತ್ತಿದ್ದು,ಒಮ್ಮೆ ಸೋಂಕಿಗೆ ತುತ್ತಾದ ವ್ಯಕ್ತಿ ಸುದೀರ್ಘ ಸಮಯದವರೆಗೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಲೇ ಇರಬೇಕಾಗಬಹುದು. ಕೋವಿಡ್-19 ಉಸಿರಾಟ ಮತ್ತು ನರಶಾಸ್ತ್ರೀಯ ಸಮಸ್ಯೆಗಳು ಮಾತ್ರವಲ್ಲ,ಚರ್ಮದ ಸಮಸ್ಯೆಗಳನ್ನೂ ಹುಟ್ಟು ಹಾಕುತ್ತದೆ. ಸೋಂಕಿತ ವ್ಯಕ್ತಿಯು ದೀರ್ಘಕಾಲದವರೆಗೆ ಚರ್ಮವು ಕೆಂಪಾಗುವಿಕೆ ಮತ್ತು ದದ್ದುಗಳಂತಹ ಸಮಸ್ಯೆಗಳನ್ನು ಅನುಭವಿಸುತ್ತಿರಬೇಕಾಗುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬೆಳಕಿಗೆ ತಂದಿದೆ.

 ಕೊರೋನ ವೈರಸ್ ಸೋಂಕು ಸನ್ನಿ,ಮಿದುಳಿನ ಉರಿಯೂತ ಮತ್ತು ಅಸಾಧ್ಯ ತಲೆನೋವುಗಳಂತಹ ನರಶಾಸ್ತ್ರೀಯ ಸಮಸ್ಯೆಗಳಿಗೆ ಕಾರಣವಾಗಬಲ್ಲದು ಎನ್ನುವುದನ್ನು ವಿಜ್ಞಾನಿಗಳು ಈ ಹಿಂದೆಯೇ ಕಂಡುಕೊಂಡಿದ್ದರು. ಬಳಿಕ ದೀರ್ಘಕಾಲಿಕ ಉಸಿರಾಟ ಸಮಸ್ಯೆಗಳೂ ಈ ವೈರಸ್‌ನೊಂದಿಗೆ ಗುರುತಿಸಿಕೊಂಡಿವೆ ಎನ್ನುವುದು ಬೆಳಕಿಗೆ ಬಂದಿತ್ತು. ಇದೀಗ ಚರ್ಮ ಸಮಸ್ಯೆಗಳೂ ಈ ವೈರಸ್‌ನೊಂದಿಗೆ ನಂಟು ಹೊಂದಿವೆ ಎನ್ನುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

 ಅಮೆರಿಕದ ಮಸಾಚುಸೆಟ್ಸ್ ಜನರಲ್ ಹಾಸ್ಪಿಟಲ್‌ನ ಸಂಶೋಧಕರ ತಂಡವು ಇತ್ತೀಚಿಗೆ ಯುರೋಪಿಯನ್ ಅಕಾಡೆಮಿ ಆಫ್ ಡರ್ಮಟಾಲಜಿ ಆ್ಯಂಡ್ ವೆನೆರಾಲಜಿಯ ಸಮಾವೇಶದಲ್ಲಿ ಮಂಡಿಸಿದ ಅಧ್ಯಯನ ವರದಿಯಂತೆ ಕೋವಿಡ್‌ನಿಂದ ಚೇತರಿಸಿಕೊಂಡು ಕೊರೋನ ವೈರಸ್‌ಗೆ ನೆಗೆಟಿವ್ ಆಗಿರುವ ಕೆಲವು ರೋಗಿಗಳು ಚರ್ಮ ಸಂಬಂಧಿತ ಸೋಂಕುಗಳನ್ನು ಅನುಭವಿಸುತ್ತಿದ್ದಾರೆ. ಚರ್ಮದ ಮೇಲೆ ಕೊರೋನ ವೈರಸ್‌ನ ಪರಿಣಾಮಗಳ ವಿಶ್ಲೇಷಣೆಯನ್ನು ನಡೆಸಿದ ಸಂಶೋಧಕರ ತಂಡವು 2020,ಎಪ್ರಿಲ್‌ನಲ್ಲಿ ಮೊದಲ ಬಾರಿಗೆ ಲ್ಯಾಬ್ ಪರೀಕ್ಷೆಗಳನ್ನು ನಡೆಸಿತ್ತು. ಬಳಿಕ ಆಗಸ್ಟ್‌ನಲ್ಲಿ ಬದಲಾವಣೆಗಳನ್ನು ದಾಖಲಿಸಿತ್ತು. ಕೆಲವು ರೋಗಿಗಳಲ್ಲಿ ಸೋಂಕಿಗೊಳಗಾದ ತಿಂಗಳುಗಳ ನಂತರವೂ ಚರ್ಮ ಸಮಸ್ಯೆಗಳ ಲಕ್ಷಣಗಳಿದ್ದವು.

 ಚರ್ಮ ಸಮಸ್ಯೆಗಳ ಲಕ್ಷಣಗಳು ಕಂಡು ಬಂದಿದ್ದ ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ತಂಡವು ವಿಶ್ಲೇಷಣೆಗೊಳಪಡಿಸಿತ್ತು. ಈ ರೋಗಿಗಳಲ್ಲಿ ಚರ್ಮದಲ್ಲಿ ಚುಚ್ಚುತ್ತಿರುವ ಅನುಭವ ಮತ್ತು ದದ್ದುಗಳು ಸಾಮಾನ್ಯವಾಗಿದ್ದವು ಮತ್ತು ಇವು ಸುಮಾರು 70 ದಿನಗಳವರೆಗೂ ಇರುತ್ತವೆ ಎನ್ನುವುದು ಕಂಡು ಬಂದಿತ್ತು. ಕೈಗಳು ಮತ್ತು ಪಾದಗಳಲ್ಲಿ ಉರಿಯೂತ ಮತ್ತು ಚರ್ಮ ಕೆಂಪಗಾಗುವಿಕೆಯ ಲಕ್ಷಣಗಳೂ ಈ ಕೆಲವರಲ್ಲಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News