ಸೆನೆಗಲ್ ಕರಾವಳಿಯಲ್ಲಿ ದೋಣಿ ಮುಳುಗಿ 140 ವಲಸಿಗರ ಸಾವು: ವಿಶ್ವಸಂಸ್ಥೆ

Update: 2020-10-30 18:19 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 30: ಯುರೋಪ್‌ನತ್ತ ವಲಸೆ ಹೋಗುತ್ತಿದ್ದ ಕನಿಷ್ಠ 140 ವಲಸಿಗರು ಸೆನೆಗಲ್ ಕರಾವಳಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸೆ ಸಂಸ್ಥೆ ಗುರುವಾರ ತಿಳಿಸಿದೆ.

ಇದು ಈ ವರ್ಷ ವರದಿಯಾದ ಹಡಗು ದುರಂತಗಳಲ್ಲೇ ಅತ್ಯಂತ ಭೀಕರವಾಗಿದೆ.

ಕಳೆದ ಶನಿವಾರ ಸೆನೆಗಲ್ ರಾಜಧಾನಿ ಡಕರ್‌ನಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಮಬೌರ್ ಪಟ್ಟಣದಿಂದ 200 ಮಂದಿಯನ್ನು ಹೊತ್ತು ಹೊರಟ ಬಳಿಕ ಕೆಲವೇ ಗಂಟೆಗಳಲ್ಲಿ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿತು ಹಾಗೂ ಬಳಿಕ ದೋಣಿಯು ಮಗುಚಿತು ಎಂದು ಅಂತರ್‌ರಾಷ್ಟ್ರೀಯ ವಲಸೆ ಸಂಘಟನೆ (ಐಒಎಮ್) ತಿಳಿಸಿದೆ.

ಸೆನೆಗಲ್ ಮತ್ತು ಸ್ಪೇನ್ ದೇಶಗಳ ನೌಕಾ ಪಡೆಗಳ ಹಡಗುಗಳು ಸುಮಾರು 60 ಮಂದಿಯನ್ನು ರಕ್ಷಿಸಿವೆ. ‘‘ಆದರೆ, ಕನಿಷ್ಠ 140 ಮಂದಿ ಮುಳುಗಿ ಮೃತಪಟ್ಟಿದ್ದಾರೆ’’ ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪಶ್ಚಿಮ ಆಫ್ರಿಕ ಮತ್ತು ಕ್ಯಾನರಿ ದ್ವೀಪವನ್ನು ಸಂಪರ್ಕಿಸುವ ಸಮುದ್ರ ಮಾರ್ಗವು, ಒಂದು ಕಾಲದಲ್ಲಿ ಬಡತನವನ್ನು ಬಿಟ್ಟು ಒಳ್ಳೆಯ ಬದುಕನ್ನು ಅರಸಿ ಹೊರಡುವವರ ಪ್ರಮುಖ ಮಾರ್ಗವಾಗಿತ್ತು. ಆದರೆ, 2000ದ ದಶಕದಲ್ಲಿ ಸ್ಪೇನ್ ಈ ಮಾರ್ಗದಲ್ಲಿ ಗಸ್ತು ಹೆಚ್ಚಿಸಿದ ಬಳಿಕ ಈ ಪ್ರಯತ್ನಗಳು ಕಡಿಮೆಯಾದವು. ಆದರೆ, ಈ ವರ್ಷ ಈ ಮಾರ್ಗದಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News