ಅಮೆರಿಕದಲ್ಲಿ ಒದೇ ದಿನ 90,000 ಮೀರಿದ ಹೊಸ ಕೊರೋನ ಪ್ರಕರಣ: ಹೊಸ ದಾಖಲೆ

Update: 2020-10-30 18:22 GMT

ವಾಶಿಂಗ್ಟನ್, ಅ. 30: ಅಮೆರಿಕದಲ್ಲಿ ಗುರುವಾರ ದಾಖಲೆಯ ಪ್ರಮಾಣದಲ್ಲಿ ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿವೆ. 24 ಗಂಟೆಗಳಲ್ಲಿ ದಾಖಲಾದ ಸೋಂಕು ಪ್ರಕರಣಗಳ ಸಂಖ್ಯೆ 90,000ವನ್ನು ಮೀರಿದ್ದು, ಇದು ಮೊದಲ ಬಾರಿಯಾಗಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿಅಂಶಗಳು ತಿಳಿಸಿವೆ.

ಅಕ್ಟೋಬರ್ ಮಧ್ಯ ಭಾಗದಿಂದ ದೇಶದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ.

ಇದರೊಂದಿಗೆ ಅಮೆರಿಕದಲ್ಲಿ ದಾಖಲಾಗಿರುವ ಒಟ್ಟು ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 89.4 ಲಕ್ಷಕ್ಕೆ ಏರಿದೆ. ಇದು ಜಗತ್ತಿನಲ್ಲೇ ಅಧಿಕವಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಈ ಸಾಂಕ್ರಾಮಿಕಕ್ಕೆ 1021 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ರೋಗಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 2,28,625ಕ್ಕೆ ಏರಿದೆ. ಇದು ಕೂಡ ವಿಶ್ವದಲ್ಲೇ ಅತ್ಯಧಿಕವಾಗಿದೆ.

ನಾವು ತಪ್ಪು ದಾರಿಯಲ್ಲಿ ಸಾಗುತ್ತಿದ್ದೇವೆ: ಕೊರೋನ ಕಾರ್ಯಪಡೆ ಮುಖ್ಯಸ್ಥ

ಅಮೆರಿಕದ ಹೆಚ್ಚಿನ ಭಾಗಗಳಲ್ಲಿ ಹೊಸ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರುತ್ತಿದ್ದು, ಕಠಿಣ ಕ್ರಮಗಳ ಅಗತ್ಯವಿದೆ ಎಂದು ಶ್ವೇತಭವನದ ಕೊರೋನ ವೈರಸ್ ಕಾರ್ಯಪಡೆ ಹೇಳಿದೆ.

‘‘ನಾವು ಅತ್ಯಂತ ಸಂಕಷ್ಟದ ದಾರಿಯಲ್ಲಿದ್ದೇವೆ. ನಾವು ತಪ್ಪು ದಿಕ್ಕಿನಲ್ಲಿ ಸಾಗುತ್ತಿದ್ದೇವೆ’’ ಎಂದು ಕಾರ್ಯಪಡೆಯ ಪ್ರಮುಖ ಸದಸ್ಯ ಹಾಗೂ ರಾಷ್ಟ್ರೀಯ ಅಲರ್ಜಿ ಮತ್ತು ಸೋಂಕು ರೋಗಗಳ ಸಂಸ್ಥೆಯ ನಿರ್ದೇಶಕ ಡಾ. ಆ್ಯಂತನಿ ಫೌಚಿ ಹೇಳಿದ್ದಾರೆ.

‘‘ಪರಿಸ್ಥಿತಿಯಲ್ಲಿ ಬದಲಾವಣೆಯಾಗದಿದ್ದರೆ, ಸೋಂಕು ಪ್ರಕರಣಗಳು ಈಗಿನ ದರದಲ್ಲೇ ಮುಂದುವರಿದರೆ ಈ ದೇಶದಲ್ಲಿ ಭಾರೀ ಸಂಕಷ್ಟಗಳು ಉಂಟಾಗುತ್ತವೆ. ಹೆಚ್ಚೆಚ್ಚು ಜನರು ಆಸ್ಪತ್ರೆಗಳಿಗೆ ದಾಖಲಾಗುತ್ತಾರೆ, ಹೆಚ್ಚೆಚ್ಚು ಜನರು ಸಾಯುತ್ತಾರೆ’’ ಎಂದು ಬುಧವಾರ ರಾತ್ರಿ ಸಿಎನ್‌ಬಿಸಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News