ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಕ್ಷೆ: ಜೋ ಬೈಡನ್‌ಗೆ ಸ್ಪಷ್ಟ ಮುನ್ನಡೆ

Update: 2020-11-02 05:34 GMT

ವಾಶಿಂಗ್ಟನ್, ನ.1: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಕೇವಲ ಎರಡು ದಿನಗಳು ಬಾಕಿಯಿರುವಂತೆಯೇ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎದುರಾಳಿ, ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಸ್ಪಷ್ಟವಾದ ಮುನ್ನಡೆ ಹೊಂದಿದ್ದಾರೆಂದು ನೂತನ ಚುನಾವಣಾ ಸಮೀಕ್ಷೆ ಬಹಿರಂಗಪಡಿಸಿದೆ.

2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತಚಲಾಯಿಸದ ಭಾರೀ ಸಂಖ್ಯೆಯ ಮತದಾರರು ಈ ಸಲ ಹಕ್ಕು ಚಲಾಯಿಸಲು ಉತ್ಸುಕರಾಗಿದ್ದು, ಅವರಲ್ಲಿ ಬಹುತೇಕ ಮಂದಿ ಬೈಡನ್ ಅವರನ್ನು ಬೆಂಬಲಿಸುತ್ತಿದ್ದಾರೆಂದು ಸಮೀಕ್ಷೆ ತಿಳಿಸಿದೆ. ಚುನಾವಣಾ ದೃಷ್ಟಿಯಿಂದ ನಿರ್ಣಾಯಕವಾದ ವಿಸ್ಕಾನ್ಸಿನ್ ಹಾಗೂ ಪೆನ್ಸಿಲ್ವೆನಿಯಾಗಳಲ್ಲಿ ಬೈಡನ್ ಅವರು ಟ್ರಂಪ್ ಅವರಿಗಿಂತ ಸ್ಪಷ್ಟವಾದ ಮುನ್ನಡೆ ಸಾಧಿಸಿ ದ್ದಾರೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್‌’ ಪತ್ರಿಕೆ ಹಾಗೂ ‘ಸಿಯೆನಾ ಕಾಲೇಜ್ ’ ಜಂಟಿಯಾಗಿ ಆಯೋಜಿಸಿದ್ದ ಚುನಾವಣಾ ಸಮೀಕ್ಷೆ ತಿಳಿಸಿದೆ. ಫ್ಲಾರಿಡಾ, ಅರಿರೆನಾಗಳಲ್ಲಿಯೂ ಬೈಡನ್ ಅವರೇ ಮೇಲುಗೈ ಸಾಧಿಸಿದ್ದಾರೆ.

ಸಮೀಕ್ಷೆಯ ಪ್ರಕಾರ ವಿಸ್ಕಾನ್ಸಿನ್‌ನಲ್ಲಿ 52 ಶೇ. ಮತದಾರರು ಬೈಡನ್ ಅವರನ್ನು ಬೆಂಬಲಿಸುತ್ತಿದ್ದರೆ, ಶೇ.41 ಮಂದಿ ಟ್ರಂಪ್‌ಪರ ಒಲವು ಹೊಂದಿದ್ದಾರೆ. ಇನ್ನೂ ಮಹತ್ವದ ರಾಜ್ಯವಾದ ಫ್ಲಾರಿಡಾದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಯಿದೆಯಾದರೂ ಅಲ್ಲಿ ಬೈಡೆನ್ ಅವರು ಟ್ರಂಪ್‌ಗಿಂತ 3 ಅಂಕಗಳ ಮುನ್ನಡೆ ಸಾಧಿಸುವಲ್ಲಿ ಸಫಲರಾಗಿದ್ದಾರೆ. ಫ್ಲಾರಿಡಾದಲ್ಲಿ ಬೈಡೆನ್‌ಗೆ ಶೇ.47 ಹಾಗೂ ಟ್ರಂಪ್‌ಗೆ ಶೇ.44 ಮತದಾರರ ಬೆಂಬಲಿವಿದೆ. ಜೂನ್ ತಿಂಗಳಿನಿಂದೀಚೆಗೆ ನಡೆದ ಎಲ್ಲಾ ಸಮೀಕ್ಷೆಗಳಲ್ಲಿ ಬೈಡನ್ ಅವರು ಟ್ರಂಪ್‌ಗಿಂತ ಮೇಲುಗೈ ಸಾಧಿಸುತ್ತಲೇ ಬಂದಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಗಾಗಿ ಶನಿವಾರದವರೆಗೆ 9 ಕೋಟಿಗೂ ಅಧಿಕ ಮಂದಿ ಅಂಚೆಮತಗಳನ್ನು (ಮೈಲ್‌ವೋಟಿಂಗ್) ಚಲಾಯಿಸಿದ್ದಾರೆ. ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಈ ಸಲ ಭಾರೀ ಸಂಖ್ಯೆಯಲ್ಲಿ ಅಂಚೆ ಮತ ಚಲಾವಣೆಯಾಗಿರುವುದು ವಿಶೇಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News