​ಕ್ಷಮೆ ಯಾಚಿಸಬೇಕಾದವರು ಯಾರು?

Update: 2020-11-02 07:08 GMT

ಸಾಧಾರಣವಾಗಿ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಗಡಿಯಲ್ಲಿ ತಳಮಳಗಳು ಆರಂಭವಾಗುತ್ತವೆ ಅಥವಾ ಮಾಧ್ಯಮಗಳ ಮುಖಪುಟಗಳಲ್ಲಿ ಉಗ್ರರು ಚುರುಕಾಗುತ್ತಾರೆ. ಬಿಹಾರ ಚುನಾವಣೆಯ ಸಂದರ್ಭದಲ್ಲಿ ಮಾಧ್ಯಮಗಳ ಮುಖಪುಟಗಳಲ್ಲಿ ಚರ್ಚೆಯಾಗುತ್ತಿದ್ದುದು ‘ಚೀನಾ-ಭಾರತ ಗಡಿ ಗಲಾಟೆ’. ಚೀನಾ ಈಗಾಗಲೇ ಭಾರತದ ಭಾರೀ ಪ್ರಮಾಣದ ಭೂಮಿಯನ್ನು ವಶಪಡಿಸಿಕೊಂಡಿದೆ ಎನ್ನುವುದನ್ನು ಇತ್ತೀಚೆಗೆ ಸ್ವತಃ ಆರೆಸ್ಸೆಸ್ ಮುಖಂಡರೇ ಒಪ್ಪಿಕೊಂಡಿದ್ದರು. ಚೀನಾದ ಸೈನಿಕರ ದಾಳಿಗೆ ಭಾರತದ ದೊಡ್ಡ ಸಂಖ್ಯೆಯ ಸೈನಿಕರು ಮೃತರಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಈ ಹಿಂದೆ ಚುನಾವಣೆಯ ಸಂದರ್ಭದಲ್ಲಿ ಪಾಕಿಸ್ತಾನ ವಿರುದ್ಧ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗಳನ್ನು ಬಳಸಿಕೊಂಡಿದ್ದ ಬಿಜೆಪಿ ನಾಯಕರು ಈ ಬಾರಿ, ಚೀನಾ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಕುರಿತಂತೆ ಮೌನವಾಗಿದ್ದಾರೆ. ವಿಪರ್ಯಾಸವೆಂದರೆ, ಲಡಾಖ್‌ನಲ್ಲಿ ಚೀನಾದ ಪುಂಡಾಟವನ್ನು ಮುಂದಿಟ್ಟುಕೊಂಡು ಸರಕಾರದ ವೈಫಲ್ಯವನ್ನು ಮನದಟ್ಟು ಮಾಡಿಕೊಡುವಲ್ಲಿ ವಿರೋಧ ಪಕ್ಷದ ನಾಯಕರೂ ವಿಫಲರಾಗಿದ್ದಾರೆ. ಇದೇ ಸಂದರ್ಭದಲ್ಲಿ, ಬಿಹಾರ ಚುನಾವಣೆಯಲ್ಲೂ ಮತ್ತೆ ಪಾಕಿಸ್ತಾನದ ವಿರುದ್ಧದ ‘ಸರ್ಜಿಕಲ್ ಸ್ಟ್ರೈಕ್’ಗೆ ಹೊಸ ಬಣ್ಣ ಕೊಟ್ಟು ಮುನ್ನೆಲೆಗೆ ತರುವ ಪ್ರಯತ್ನವನ್ನು ಬಿಜೆಪಿ ನಾಯಕರು ನಡೆಸುತ್ತಿದ್ದಾರೆ. ಪಾಕಿಸ್ತಾನದ ಸಂಸತ್‌ನಲ್ಲಿ ಅಲ್ಲಿನ ರಾಜಕಾರಣಿಗಳು ನೀಡಿರುವ ಹೇಳಿಕೆಗಳನ್ನೇ ಈ ಬಾರಿ ಚುನಾವಣೆಗೆ ಬಂಡವಾಳ ಮಾಡಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಈ ಮೂಲಕ ‘ನಾವು ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಸ್ತಾನವನ್ನು ಬೆದರಿಸಿದ್ದೆವು’ ಎನ್ನುವುದನ್ನು ಮತ್ತೆ ಸಾಧಿಸುವುದಕ್ಕೆ ಮುಂದಾಗಿದ್ದಾರೆ. ‘‘ಪುಲ್ವಾಮಾ ದಾಳಿಯನ್ನು ನಡೆಸಿರುವುದು ತಾನು ಎನ್ನುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಆದುದರಿಂದ, ಪುಲ್ವಾಮಾ ದಾಳಿ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಪಿತೂರಿ ಎಂದು ಆರೋಪಿಸಿದ ಕಾಂಗ್ರೆಸ್ ಪಕ್ಷ ದೇಶದ ಕ್ಷಮೆ ಯಾಚಿಸಬೇಕು’’ ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಲಡಾಖ್‌ನಲ್ಲಿ ಚೀನಾ ನಡೆಸುತ್ತಿರುವ ದಾಂಧಲೆಗಳ ಕುರಿತಂತೆ ಸ್ಪಷ್ಟೀಕರಣ ನೀಡಬೇಕಾಗಿದ್ದ ಕೇಂದ್ರ ನಾಯಕರು ‘ಪುಲ್ವಾಮಾದಲ್ಲಿ ದಾಳಿ ನಡೆಸಿರುವುದು ಪಾಕಿಸ್ತಾನ’ ಎನ್ನುವುದೇ ನಮ್ಮ ಹೆಗ್ಗಳಿಕೆ ಎಂಬಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಾಕಿಸ್ತಾನದ ಸಂಸದ್‌ನಲ್ಲಿ ರಾಜಕಾರಣಿಯೊಬ್ಬ ನೀಡಿರುವ ಗೊಂದಲದ ಹೇಳಿಕೆಯನ್ನು ಯಾವ ರೀತಿಯಲ್ಲೂ ಅಧಿಕೃತವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಂಡೇ, ಅಂದಿನ ದುರಂತಕ್ಕೆ ಸಂಬಂಧಿಸಿ ಈಗ ಬಿಜೆಪಿ ಸಂಭ್ರಮಿಸುವುದು ಎಷ್ಟರಮಟ್ಟಿಗೆ ಸರಿ? ಎನ್ನುವುದನ್ನು ಚರ್ಚಿಸೋಣ. ಪಾಕಿಸ್ತಾನದ ರಾಜಕಾರಣಿ, ಆರಂಭದಲ್ಲಿ ಪುಲ್ವಾಮಾ ದಾಳಿ ನಡೆಸಿರುವುದು ಪಾಕಿಸ್ತಾನ ಎಂದು ಹೆಮ್ಮೆ ಪಟ್ಟು, ಬಳಿಕ ತನ್ನ ಹೇಳಿಕೆ ಪುಲ್ವಾಮಾ ದಾಳಿಗೆ ಸಂಬಂಧಿಸಿದ್ದಲ್ಲ ಎಂದು ಸಮಜಾಯಿಶಿ ನೀಡುತ್ತಾನೆ. ಒಂದು ವೇಳೆ ಪಾಕಿಸ್ತಾನವೇ ಪುಲ್ವಾಮಾ ದಾಳಿಯನ್ನು ನಡೆಸಿರುವುದು ಸಾಬೀತಾಯಿತು ಎಂದೇ ಇಟ್ಟುಕೊಳ್ಳೋಣ. ಆಗಲೂ ನಮ್ಮ ಯೋಧರ ಮಾರಣ ಹೋಮಕ್ಕೆ ಪರೋಕ್ಷ ಕಾರಣವಾದ ಕಳಂಕದಿಂದ ಮೋದಿ ನೇತೃತ್ವದ ಸರಕಾರ ಮುಕ್ತವಾಗುವುದಿಲ್ಲ. ಪಾಕಿಸ್ತಾನವೇನು ಆಕಾಶದಿಂದ ಬಾಂಬುಗಳನ್ನು ತಂದು ಸುರಿಯಲಿಲ್ಲ. ಉಗ್ರಗಾಮಿಯೊಬ್ಬ ನಮ್ಮ ಎಲ್ಲ ಭದ್ರತೆಗಳನ್ನು ಅತ್ಯಂತ ಸುಲಭವಾಗಿ ದಾಟಿಕೊಂಡು ಭಾರೀ ಸ್ಫೋಟಕಗಳ ಜೊತೆಗೆ ಭಾರತದ ಯೋಧರಿರುವ ವಾಹನದ ಮೇಲೆ ದಾಳಿ ನಡೆಸಿದ್ದ. ಈ ಭದ್ರತಾ ವೈಫಲ್ಯಕ್ಕೆ ಕಾರಣವಂತೂ ಪಾಕಿಸ್ತಾನವಲ್ಲ, ನಮ್ಮದೇ ಸರಕಾರ. ಈ ವೈಫಲ್ಯದ ಹೊಣೆ ಹೊತ್ತು, ಯೋಧರ ಸಾವಿಗಾಗಿ ದೇಶದ ಕ್ಷಮೆ ಯಾಚಿಸುವುದು ಮೋದಿ ನೇತೃತ್ವದ ಆದ್ಯ ಕರ್ತವ್ಯವಾಗಿತ್ತು. ಆದರೆ ಈವರೆಗೆ ಅವರು ಕ್ಷಮೆ ಯಾಚಿಸಿಲ್ಲ. ಬದಲಿಗೆ, ಪುಲ್ವಾಮಾ ದಾಳಿಯ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಲು ಒತ್ತಾಯಿಸಿದ ಕಾಂಗ್ರೆಸ್ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ಇದಕ್ಕಿಂತ ವಿಪರ್ಯಾಸ ಇನ್ನೇನಿದೆ?

ಎರಡನೆಯದಾಗಿ ‘ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಬಹುದು ಎಂದು ಸೇನೆಯ ಮುಖ್ಯಸ್ಥರು ಹೆದರಿದ್ದರು’ ಎನ್ನುವ ವರದಿಯನ್ನು ಬಿಜೆಪಿ ತನ್ನ ಹೆಗ್ಗಳಿಕೆಯೆಂಬಂತೆ ಯಾವ ನಾಚಿಕೆಯೂ ಇಲ್ಲದೆ ಹೇಳಿಕೆ ನೀಡುತ್ತಿದೆ. ಆ ಮೂಲಕ ‘ಅಭಿನಂದನ್ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡಿರುವುದೇ ಮೋದಿಗೆ ಹೆದರಿ’ ಎಂಬಂತೆ ಬಿಜೆಪಿಯೊಳಗಿನ ನಾಯಕರು ವ್ಯಾಖ್ಯಾನಿಸುತ್ತಿದ್ದಾರೆ. ಯುದ್ಧ ಒಂದು ದೇಶಕ್ಕೆ ಮಾತ್ರ ಹಾನಿಯನ್ನುಂಟು ಮಾಡುವುದಿಲ. ಪಾಕಿಸ್ತಾನ ಅಣುಬಾಂಬು ಹೊಂದಿರುವ ದೇಶ. ಯುದ್ಧ ನಡೆದರೆ ಉಭಯ ದೇಶಗಳೂ ಭಾರೀ ನಾಶ, ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಪಾಕಿಸ್ತಾನದ ಸೇನಾಧಿಕಾರಿಯ ಕಾಲು ನಡುಗುತ್ತಿತ್ತು ಎಂಬ ಹೇಳಿಕೆಯ ಆಧಾರದಲ್ಲಿ ಪಾಕಿಸ್ತಾನ, ಭಾರತಕ್ಕೆ ಹೆದರಿತ್ತು ಎಂದು ವ್ಯಾಖ್ಯಾನಿಸುವುದು, ಗಡಿಭಾಗದ ಸಮಸ್ಯೆಗಳನ್ನು ಮೋದಿ ನೇತೃತ್ವದ ಸರಕಾರ ಎಷ್ಟರಮಟ್ಟಿಗೆ ಲಘುವಾಗಿ ತೆಗೆದುಕೊಂಡಿದೆ ಎನ್ನುವುದನ್ನು ಹೇಳುತ್ತದೆ. ಎರಡನೇ ಬಾರಿಯ ಸರ್ಜಿಕಲ್ ಸ್ಟೈಕ್‌ನಿಂದಾಗಿ ಎಷ್ಟು ಉಗ್ರರು ಸತ್ತಿದ್ದಾರೆ, ಎಷ್ಟರಮಟ್ಟಿಗೆ ಪಾಕಿಸ್ತಾನಕ್ಕೆ ಹಾನಿಯಾಗಿದೆ ಎನ್ನುವ ವಿವರಗಳನ್ನು ಅಧಿಕೃತವಾಗಿ ನೀಡಲು ಸರಕಾರ ಈಗಲೂ ವಿಫಲವಾಗಿದೆ. ಆದರೆ, ನಮ್ಮ ಸೈನಿಕನೊಬ್ಬ ಪಾಕಿಸ್ತಾನದ ಕೈಗೆ ಸೆರೆಯಾಗಿ ಸಿಕ್ಕಿರುವುದು ಮಾತ್ರ ವಿಶ್ವದ ಮಾಧ್ಯಮಗಳಲ್ಲಿ ವರದಿಯಾಯಿತು. ಅಷ್ಟೇ ಅಲ್ಲ, ಆತನನ್ನು ಪಾಕಿಸ್ತಾನ ಅತ್ಯಂತ ಗೌರವಯುತವಾಗಿ ನಡೆಸಿಕೊಂಡು ಭಾರತಕ್ಕೆ ಒಪ್ಪಿಸುವ ಮೂಲಕ, ಪಾಕಿಸ್ತಾನ ವಿಶ್ವ ಮಾಧ್ಯಮಗಳ ಪ್ರಶಂಸೆಗೆ ಪಾತ್ರವಾಯಿತು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಅಂದಿನ ನಡವಳಿಕೆ ವಿಶ್ವ ಮಟ್ಟದಲ್ಲಿ ಶ್ಲಾಘನೆಗೆ ಒಳಗಾಯಿತು. ಉಭಯ ದೇಶಗಳ ನಡುವೆ ಶಾಂತಿ ನಿರ್ಮಾಣಕ್ಕೆ ಇದು ಪೂರಕವಾಗಲಿ ಎಂದು ಎಲ್ಲರೂ ಬಯಸಿದರು. ಅಭಿನಂದನ್ ಸೆರೆಯಾಗಿ ಸಿಕ್ಕಿರುವುದು ಮತ್ತು ಪಾಕಿಸ್ತಾನ ಯಾವುದೇ ಶರತ್ತುಗಳಿಲ್ಲದೆ ಆತನನ್ನು ಒಪ್ಪಿಸಿರುವುದು ಪಾಕಿಸ್ತಾನಕ್ಕೆ ಪೂರಕವಾದ ಬೆಳವಣಿಗೆಯೇ ಹೊರತು, ಭಾರತಕ್ಕಲ್ಲ. ಹೀಗಿರುವಾಗ, ಆ ಘಟನೆಗಳನ್ನು ಮತ್ತೆ ಕೆದಕಿ, ಅವುಗಳನ್ನು ತನ್ನ ಸಾಧನೆಯಾಗಿ ಬಿಂಬಿಸಲು ಯತ್ನಿಸುವ ಬಿಜೆಪಿಯ ಪ್ರಯತ್ನ ಲಜ್ಜೆಗೇಡಿತನದಿಂದ ಕೂಡಿದ್ದು. ಪುಲ್ವಾಮಾ ದಾಳಿ, ಆ ಬಳಿಕ ಸರಕಾರ ನಡೆಸಿದ ಸರ್ಜಿಕಲ್ ಸ್ಟ್ರೈಕ್, ಅದರಿಂದ ಪಾಕಿಸ್ತಾನಕ್ಕಾದ ನಾಶ, ನಷ್ಟ ಇವುಗಳ ಕುರಿತಂತೆ ಈವರೆಗೆ ಸರಕಾರದ ಬಳಿ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಇದೇ ಸಂದರ್ಭದಲ್ಲಿ, ಚೀನಾದ ಸೈನಿಕರು ಲಡಾಖ್‌ನಲ್ಲಿ ನಡೆಸುತ್ತಿರುವ ದಾಂಧಲೆಯ ಕುರಿತಂತೆ ಸರಕಾರ ಯಾವ ಸ್ಪಷ್ಟೀಕರಣವನ್ನೂ ನೀಡುತ್ತಿಲ್ಲ. ಹೀಗಿರುವಾಗ ನಿಜಕ್ಕೂ ಕ್ಷಮೆಯಾಚಿಸಬೇಕಾದವರು ಯಾರು? ಪುಲ್ವಾಮಾ ದಾಳಿಗೆ ಸಂಬಂಧಿಸಿ ತನ್ನ ವೈಫಲ್ಯವನ್ನು ಒಪ್ಪಿಕೊಂಡು ಮೋದಿಯವರು ದೇಶದ ಜನರ ಕ್ಷಮೆ ಯಾಚಿಸಬೇಕಾಗಿದೆ.

ಅಷ್ಟೇ ಅಲ್ಲ, ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಪಾಕಿಸ್ತಾನಕ್ಕೆ ಮತ್ತು ಅಲ್ಲಿರುವ ಉಗ್ರರಿಗೆ ಆಗಿರುವ ನಾಶ ನಷ್ಟದ ವಿವರಗಳನ್ನು ಅಧಿಕೃತವಾಗಿ ನೀಡಬೇಕಾಗಿದೆ. ಕನಿಷ್ಠ ಹತರಾದ ಪ್ರಮುಖ ಉಗ್ರವಾದಿ ಮುಖಂಡರ ಹೆಸರನ್ನಾದರೂ ಬಹಿರಂಗಗೊಳಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಸರ್ಜಿಕಲ್ ಸ್ಟ್ರೈಕ್‌ನ ಕನವರಿಕೆಗಳಿಂದ ಹೊರಬಂದು, ಲಡಾಖ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತಂತೆ ದೇಶಕ್ಕೆ ವಿವರಗಳನ್ನು ನೀಡಬೇಕಾಗಿದೆ. ಬಿಹಾರದ ಚುನಾವಣೆಯಲ್ಲಿ ಚಚೆಯಾಗಬೇಕಾಗಿರುವುದು ಸರ್ಜಿಕಲ್ ಸ್ಟ್ರೈಕ್ ಅಲ್ಲ. ಪಾತಾಳ ತಲುಪಿರುವ ದೇಶದ ಆರ್ಥಿಕತೆ, ವಲಸೆ ಕಾರ್ಮಿಕರ ನೋವು ಸಂಕಟಗಳು ಚುನಾವಣೆಯ ಮುಖ್ಯ ವಿಷಯವಾಗಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ಬೀದಿ ಹೆಣವಾದ ವಲಸೆ ಕಾರ್ಮಿಕರ ದುರಂತಗಳಿಗಾಗಿ ಮೋದಿಯವರು ಬಿಹಾರದ ಜನರ ಕ್ಷಮೆ ಯಾಚಿಸಬೇಕು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News