ಗಿಲ್ಗಿಟ್-ಬಾಲ್ಟಿಸ್ತಾನ ಸ್ಥಾನಮಾನ ಮಾರ್ಪಾಡು ಮಾಡುವ ಪಾಕ್ ಪ್ರಯತ್ನಕ್ಕೆ ಭಾರತ ಖಂಡನೆ

Update: 2020-11-01 18:23 GMT

ಹೊಸದಿಲ್ಲಿ, ನ. 1: ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ತಾತ್ಕಾಲಿಕ ಪ್ರಾಂತ್ಯದ ಸ್ಥಾನಮಾನ ನೀಡುವ ಪಾಕಿಸ್ತಾನದ ನಡೆಯನ್ನು ಭಾರತ ರವಿವಾರ ಬಲವಾಗಿ ತಿರಸ್ಕರಿಸಿದೆ. ಅಲ್ಲದೆ ‘ಕಾನೂನುಬಾಹಿರ ಹಾಗೂ ಬಲವಂತ’ವಾಗಿ ಅತಿಕ್ರಮಿಸಿದ ಪ್ರದೇಶದ ಸ್ಥಾನಮಾನವನ್ನು ಮಾರ್ಪಡಿಸುವ ಹಕ್ಕು ಇಸ್ಲಾಮಾಬಾದ್‌ಗೆ ಇಲ್ಲ ಎಂದು ಹೇಳಿದೆ.

‘‘ತನ್ನ ಕಾನೂನುಬಾಹಿರ ಹಾಗೂ ಬಲವಂತದ ಅತಿಕ್ರಮಣ ಕೃತ್ಯದ ಮೂಲಕ ಭಾರತದ ಪ್ರದೇಶದ ಭಾಗದಲ್ಲಿ ಭೌತಿಕ ಮಾರ್ಪಾಡು ತರುವ ಪಾಕಿಸ್ತಾನದ ಪ್ರಯತ್ನವನ್ನು ಭಾರತ ದೃಢವಾಗಿ ತಿರಸ್ಕರಿಸುತ್ತದೆ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ ಹೇಳಿದ್ದಾರೆ.

1947ರಲ್ಲಿ ಜಮ್ಮು ಹಾಗೂ ಕಾಶ್ಮೀರವನ್ನು ಕಾನೂನು ಬದ್ಧವಾಗಿ, ಸಂಪೂರ್ಣವಾಗಿ ಹಾಗೂ ಶಾಶ್ವತವಾಗಿ ಭಾರತದ ಒಕ್ಕೂಟದ ಸಾರ್ವಭೌಮತೆಗೆ ಒಳಪಡಿಸಲಾಗಿದ್ದು, ಗಿಲ್ಗಿಟ್-ಬಾಲ್ಟಿಸ್ತಾನ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಹಾಗೂ ಕಾಶ್ಮೀರ, ಲಡಾಖ್ ಅದರ ಅವಿಭಾಜ್ಯ ಅಂಗಗಳಾಗಿವೆ ಎಂದು ಅನುರಾಗ್ ಶ್ರೀವಾತ್ಸವ ಪುನರುಚ್ಚರಿಸಿದ್ದಾರೆ.

ಈ ಪ್ರದೇಶವನ್ನು ಕಾನೂನುಬಾಹಿರವಾಗಿ ಹಾಗೂ ಬಲವಂತವಾಗಿ ಅತಿಕ್ರಮಿಸುವ ಯಾವುದೇ ಅಧಿಕಾರ ಪಾಕಿಸ್ತಾನ ಸರಕಾರಕ್ಕೆ ಇಲ್ಲ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಕಾನೂನು ಬಾಹಿರ ಕೃತ್ಯವನ್ನು ಮರೆ ಮಾಚುವ ಉದ್ದೇಶವನ್ನು ಹೊಂದಿರುವ ಇಂತಹ ಪ್ರಯತ್ನಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕಳೆದ 7 ದಶಕಗಳಿಂದ ವಾಸಿಸುತ್ತಿರುವ ಜನರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವುದನ್ನು ಹಾಗೂ ಅವರ ಸ್ವಾತಂತ್ರ್ಯವನ್ನು ನಿರಾಕರಿಸುತ್ತಿರುವುದನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದು ಸಚಿವಾಲಯ ಹೇಳಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ಗಮನದಲ್ಲಿರಿಸಿ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪ್ರಾಂತ್ಯದ ಸ್ಥಾನಮಾನ ನೀಡಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರವಿವಾರ ಘೋಷಿಸಿದ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News