ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ರಾಜ್ಯದ ಸ್ಥಾನಮಾನ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಣೆ

Update: 2020-11-02 16:37 GMT

ಇಸ್ಲಾಮಾಬಾದ್, ನ. 2: ಪಾಕ್ ಆಕ್ರಮಿತ ಕಾಶ್ಮೀರದ ಆಯಕಟ್ಟಿನ ಸ್ಥಳದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ವಲಯಕ್ಕೆ ನನ್ನ ಸರಕಾರ ತಾತ್ಕಾಲಿಕವಾಗಿ ರಾಜ್ಯದ ಸ್ಥಾನಮಾನ ನೀಡಲಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ರವಿವಾರ ಹೇಳಿದ್ದಾರೆ.

ಅಫ್ಘಾನಿಸ್ತಾನ ಮತ್ತು ಚೀನಾ ಗಡಿಗೆ ಹೊಂದಿಕೊಂಡಿರುವ ಗಿಲ್ಗಿಟ್-ಬಾಲ್ಟಿಸ್ತಾನ್ ವಲಯದಲ್ಲಿ ಸುಮಾರು 20 ಲಕ್ಷ ಜನರು ವಾಸಿಸುತ್ತಿದ್ದಾರೆ.

1947ರಲ್ಲಿ ಸ್ವತಂತ್ರಗೊಂಡ ಬಳಿಕ, ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮೂರು ಯುದ್ಧಗಳು ನಡೆದಿದ್ದು, ಆ ಪೈಕಿ ಎರಡು ಯುದ್ಧಗಳು ಗುಡ್ಡಗಾಡು ಪ್ರದೇಶವನ್ನೊಳಗೊಂಡ ಕಾಶ್ಮೀರದ ವಿಚಾರದಲ್ಲಿ ಸಂಭವಿಸಿವೆ.

ಗಿಲ್ಗಿಟ್-ಬಾಲ್ಟಿಸ್ತಾನ್ ವಲಯದ ರಾಜಧಾನಿ ಗಿಲ್ಗಿಟ್ ನಗರದಲ್ಲಿ ರಾಜಕೀಯ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ‘‘ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ರಾಜ್ಯದ ಸ್ಥಾನಮಾನ ಕೊಡುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ಇದು ಅಲ್ಲಿನ ಜನರ ದೀರ್ಘಕಾಲೀನ ಬೇಡಿಕೆಯಾಗಿತ್ತು’’ ಎಂದು ಹೇಳಿದರು.

ಭಾರತದಿಂದ ತೀವ್ರ ವಿರೋಧ

ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ತಾತ್ಕಾಲಿಕವಾಗಿ ರಾಜ್ಯದ ಸ್ಥಾನಮಾನ ನೀಡುವ ಇಮ್ರಾನ್ ಖಾನ್ ಪ್ರಸ್ತಾಪವನ್ನು ಭಾರತ ತೀವ್ರವಾಗಿ ವಿರೋಧಿಸಿದೆ.

 ‘‘ತಥಾಕಥಿತ ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ನಾನು ಪುನರುಚ್ಚರಿಸುತ್ತೇನೆ. 1947ರಲ್ಲಿ ಭಾರತ ಒಕ್ಕೂಟಕ್ಕೆ ಜಮ್ಮು ಮತ್ತು ಕಾಶ್ಮೀರವು ಸೇರ್ಪಡೆಯಾಗಿರುವುದು ಕಾನೂನುಬದ್ಧವಾಗಿದೆ, ಸಂಪೂರ್ಣವಾಗಿದೆ ಹಾಗೂ ಅದರಿಂದ ಹಿಂದಕ್ಕೆ ಬರುವುದು ಸಾಧ್ಯವಿಲ್ಲ’’ ಎಂದು ಭಾರತದ ವಿದೇಶ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News