ಟರ್ಕಿ ಭೂಕಂಪ: 91 ಗಂಟೆಗಳ ಬಳಿಕ 3 ವರ್ಷದ ಮಗುವಿನ ರಕ್ಷಣೆ

Update: 2020-11-03 17:07 GMT

ಬೈರಾಕ್ಲಿ (ಟರ್ಕಿ), ನ. 3: ಟರ್ಕಿಯ ಇಝ್ಮಿರ್ ನಗರದಲ್ಲಿ ಭೂಕಂಪ ಸಂಭವಿಸಿದ 91 ಗಂಟೆಗಳ ಬಳಿಕ, ರಕ್ಷಣಾ ಕೆಲಸಗಾರರು ಮಂಗಳವಾರ ಅವಶೇಷಗಳ ಅಡಿಯಿಂದ ಮೂರು ವರ್ಷದ ಹೆಣ್ಣು ಮಗುವೊಂದನ್ನು ಜೀವಂತವಾಗಿ ಹೊರಗೆ ತೆಗೆದಿದ್ದಾರೆ.

‘‘91ನೇ ಗಂಟೆಯಲ್ಲಿ ನಾವು ಪವಾಡವೊಂದಕ್ಕೆ ಸಾಕ್ಷಿಯಾಗಿದ್ದೇವೆ. ರಕ್ಷಣಾ ಸಿಬ್ಬಂದಿ ಮಗುವನ್ನು ಜೀವಂತವಾಗಿ ಹೊರ ತೆಗೆದಿದ್ದಾರೆ. ನಾವು ಅನುಭವಿಸಿದ ಅಗಾಧ ನೋವಿನ ಜೊತೆಗೆ ಇದೊಂದು ಸಂತಸದ ಕ್ಷಣ’’ ಎಂದು ಇಝ್ಮಿರ್ ಮೇಯರ್ ಟಂಕ್ ಸೋಯರ್ ಹೇಳಿದರು.

ಮಗು ಮೇಲೆ ಬಂದ ತಕ್ಷಣ ಅಮ್ಮನನ್ನು ಕರೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದರ ಅಮ್ಮ ಅವಶೇಷಗಳ ಅಡಿಯಲ್ಲಿ ಈಗಲೂ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ಟರ್ಕಿ ಭೂಕಂಪ: ಮೃತರ ಸಂಖ್ಯೆ 100ಕ್ಕೆ

ಪಶ್ಚಿಮ ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ ಮಂಗಳವಾರ 100ಕ್ಕೆ ಏರಿದೆ ಎಂದು ದೇಶದ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

 ಶುಕ್ರವಾರ ಅಪರಾಹ್ನ ಏಜಿಯನ್ ಸಮುದ್ರದಲ್ಲಿ ಸಂಭವಿಸಿದ, ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ಹೊಂದಿದ್ದ ಭೂಕಂಪದಲ್ಲಿ 994 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 147 ಮಂದಿ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಝ್ಮಿರ್ ಪ್ರಾಂತದಲ್ಲಿ ಕುಸಿದ ಐದು ಕಟ್ಟಡಗಳ ಅಡಿಯಲ್ಲಿ ಇರುವ ಅನಿರ್ದಿಷ್ಟ ಸಂಖ್ಯೆಯ ಜನರಿಗಾಗಿ ರಕ್ಷಣಾ ಕಾರ್ಯಕರ್ತರು ಈಗಲೂ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.

ಇಝ್ಮಿರ್ ಪ್ರಾಂತದ ಬೈರಾಕ್ಲಿ ಭೂಕಂಪದ ಅತೀ ಹೆಚ್ಚಿನ ಪ್ರಕೋಪಕ್ಕೆ ಒಳಗಾದ ನಗರವಾಗಿದೆ. ಶುಕ್ರವಾರದ ಭೂಕಂಪದ ಬಳಿಕ, 1,464ಕ್ಕೂ ಅಧಿಕ ಪಶ್ಚಾತ್ ಕಂಪನಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News