ಕೇಂದ್ರದ ಭೂ ಕಾನೂನು ಜನವಿರೋಧಿ: ಗುಪ್ಕರ್ ಮೈತ್ರಿಕೂಟ ಟೀಕೆ

Update: 2020-11-03 18:21 GMT

ಶ್ರೀನಗರ, ನ.3: ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೊಳಿಸಿರುವ ನೂತನ ಭೂ ಕಾನೂನನ್ನು ಖಂಡಿಸಿರುವ ಗುಪ್ಕರ್ ಘೋಷಣೆಗಾಗಿನ ಜನತಾ ಮೈತ್ರಿಕೂಟ, ಇದು ಜನವಿರೋಧಿ, ಸಂವಿಧಾನ ವಿರೋಧಿ, ಪ್ರತಿಗಾಮಿಯಾಗಿದ್ದು ಜನರನ್ನು ದುರ್ಬಲಗೊಳಿಸುವ, ಜಮ್ಮು ಕಾಶ್ಮೀರದ ಜನಸಂಖ್ಯಾ ವಿಜ್ಞಾನವನ್ನು ಬದಲಿಸುವ ಗುರಿಯನ್ನು ಹೊಂದಿದೆ ಎಂದು ಟೀಕಿಸಿದೆ.

ಅಕ್ಟೋಬರ್ 26ರಂದು ಜಮ್ಮು ಕಾಶ್ಮೀರ ಆಡಳಿತದ ವಕ್ತಾರರು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಜನರನ್ನು ದಾರಿ ತಪ್ಪಿಸುವ ಉದ್ದೇಶ ಹೊಂದಿದೆ ಎಂದು ಮೈತ್ರಿಕೂಟ ಮಂಗಳವಾರ ಬಿಡುಗಡೆಗೊಳಿಸಿರುವ ಹೇಳಿಕೆ ತಿಳಿಸಿದೆ. ಜಮ್ಮು ಕಾಶ್ಮೀರದ 90ಶೇ.ಕ್ಕೂ ಹೆಚ್ಚು ಕೃಷಿಭೂಮಿ ಆಗಿರುವುದರಿಂದ ಅದನ್ನು ಹೊರಗಿನವರಿಗೆ ಮಾರುವಂತಿಲ್ಲ. ಹೊಸ ಕಾನೂನಿನಲ್ಲಿ ಈ ಭೂಮಿ ಹೊರಗಿನವರ ವಶಕ್ಕೆ ಹೋಗುವುದನ್ನು ತಡೆಯಲಾಗಿದೆ ಮತ್ತು ಕೃಷಿ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ತ್ವರಿತ ಕೈಗಾರೀಕರಣ, ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೃಜಿಸುತ್ತದೆ ಎಂದು ಜಮ್ಮು ಕಾಶ್ಮೀರದ ಆಡಳಿತದ ಪರವಾಗಿ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಸೋಮವಾರ ಸುದ್ಧಿಗೋಷ್ಟಿಯಲ್ಲಿ ಹೇಳಿಕೆ ನೀಡಿದ್ದರು.

ಇದನ್ನು ವಿರೋಧಿಸಿರುವ ಮೈತ್ರಿಕೂಟ, 2019ರ ಆಗಸ್ಟ್‌ಗಿಂತ ಹಿಂದಿನ ಕಾನೂನು ಜಮ್ಮು ಕಾಶ್ಮೀರವನ್ನು ಇಡೀ ಭಾರತೀಯ ಉಪಖಂಡದಲ್ಲೇ ಅತ್ಯಂತ ಅಭಿವೃದ್ದಿಹೊಂದಿದ, ರೈತರ ಪರವಾದ ಪ್ರದೇಶವನ್ನಾಗಿಸಿತ್ತು ಎಂದು ಹೇಳಿದೆ. ಉಳುವವನಿಗೇ ಭೂಮಿ ಎಂಬ ಕಲ್ಪನೆಯನ್ನು ದೇಶದಲ್ಲಿ ಮೊದಲು ಜಾರಿಗೆ ತಂದಿದ್ದು ಜಮ್ಮು ಕಾಶ್ಮೀರ ರಾಜ್ಯ. ಕೆಲವೇ ಭೂಮಾಲಿಕರ ಕೈಯಲ್ಲಿ ಕೃಷಿ ಭೂಮಿ ಕೇಂದ್ರೀಕೃತವಾಗುವುದನ್ನು ತಪ್ಪಿಸಲು, ಓರ್ವ ರೈತನಿಗೆ ಗರಿಷ್ಟ 12.5 ಎಕರೆ ಭೂಮಿ ಹೊಂದಲು ಅವಕಾಶ ಮಾಡಿಕೊಡುವ 1976ರ ಕೃಷಿ ಸುಧಾರಣೆ ಕಾಯ್ದೆಯನ್ನು ಜಾರಿಗೊಳಿಸಿತ್ತು. ಇದು ಅಪ್ರಚಲಿತ ಕಾನೂನು ಎಂದು ಹೇಳುವವರು ಜಮ್ಮು-ಕಾಶ್ಮೀರದ ಇತಿಹಾಸದ ಬಗ್ಗೆ ಅಜ್ಞಾನಿಗಳಾಗಿದ್ದಾರೆ ಎಂದು ಮೈತ್ರಿಕೂಟ ಹೇಳಿದೆ.

ಜಮ್ಮು ಕಾಶ್ಮೀರದಲ್ಲಿ ಸಕಾಲದಲ್ಲಿ ಜಾರಿಗೊಳಿಸಿದ ಭೂಸುಧಾರಣಾ ಕಾನೂನಿನಿಂದಾಗಿ ರಾಜ್ಯದಲ್ಲಿ ಹಸಿವಿನಿಂದ ಸಾಯುವ ಪ್ರಕರಣ ವರದಿಯಾಗಿಲ್ಲ ಅಥವಾ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ ಮತ್ತು ಪ್ರತಿಯೊಬ್ಬರಿಗೂ ಮೂರು ಮೂಲ ಅಗತ್ಯಗಳಾದ ಆಹಾರ, ಬಟ್ಟೆ ಮತ್ತು ವಸತಿಯ ಸೌಲಭ್ಯ ದಕ್ಕಿದೆ. ಹೊಸ ಕಾನೂನು ಈ ಪರಿಸ್ಥಿತಿಯನ್ನು ಹದಗೆಡಿಸಲಿದೆ ಎಂದು ಮೈತ್ರಿಕೂಟ ಆಕ್ರೋಶ ವ್ಯಕ್ತಪಡಿಸಿದೆ. ಭೂಮಿಯ ಪರಭಾರೆ ಕಾಯ್ದೆಯು ರಾಜ್ಯದ ಪ್ರಜೆಗಳಲ್ಲದವರಿಗೆ ಭೂಮಿಯನ್ನು ವರ್ಗಾಯಿಸುವುದನ್ನು ನಿಷೇಧಿಸಿದ್ದು ಇದು ಅಪ್ರಚಲಿತ ಹೇಗಾಗುತ್ತದೆ ? ಜಮ್ಮು ಕಾಶ್ಮೀರದ ಶಾಶ್ವತ(ಕಾಯಂ) ಪ್ರಜೆಗಳ ಹಿತಾಸಕ್ತಿಯನ್ನು ರಕ್ಷಿಸುವ ಜೊತೆಗೆ, ಐಡಿಬಿಐ, ಐಸಿಐಸಿಐ ಮತ್ತಿತರ ಸಂಸ್ಥೆಗಳಿಗೆ ಭೂಮಿಯನ್ನು ಅಡಮಾನ ಇಡುವ ಮೂಲಕ ವರ್ಗಾಯಿಸುವ ಅವಕಾಶವನ್ನೂ ಭೂಮಿಯ ಪರಭಾರೆ ಕಾಯ್ದೆಯಲ್ಲಿ ನೀಡಲಾಗಿತ್ತು. ಇದು ಕೈಗಾರಿಕಾ ಅಭಿವೃದ್ಧಿಗೆ ಪೂರಕವಾದ ಅಂಶವಾಗಿದೆ ಎಂದು ಮೈತ್ರಿಕೂಟದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News