ಅಮೆರಿಕ ಅಧ್ಯಕ್ಷೀಯ ರೇಸ್: ಬೈಡನ್ ಆರಂಭಿಕ ಮುನ್ನಡೆ

Update: 2020-11-04 01:15 GMT

ವಾಷಿಂಗ್ಟನ್: ಇಡೀ ಜಗತ್ತು ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಕುತೂಹಲದಿಂದ ಕಾಯುತ್ತಿದ್ದು, ಮಾಧ್ಯಮ ಸಮೀಕ್ಷೆಗಳು ನಿಜವಾಗುವ ಸಾಧ್ಯತೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ಆರಂಭಿಕ ಮುನ್ನಡೆ ಗಳಿಸಿದ್ದಾರೆ.

ಇತ್ತೀಚಿನ ವರದಿಗಳು ಬಂದಾಗ ಜೋ ಬೈಡನ್ 16 ಅಧ್ಯಕ್ಷೀಯ ಮತಗಳನ್ನು ಪಡೆದಿದ್ದು, ಡೊನಾಲ್ಡ್ ಟ್ರಂಪ್ 13 ಮತಗಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಗೆಲುವಿಗೆ 270 ಮತಗಳ ಅಗತ್ಯವಿದೆ.

ಒಟ್ಟು ಮತ ಎಣಿಕೆಯಲ್ಲಿ  ಬೈಡನ್  64,76,843 ಮತಗಳನ್ನು ಪಡೆದಿದ್ದರೆ, ಟ್ರಂಪ್ ಅಲ್ಪ ಹಿನ್ನಡೆಯಲ್ಲಿದ್ದು, 64,69,835 ಮತ ಗಳಿಸಿದ್ದಾರೆ.

ಫ್ಲೋರಿಡಾದಲ್ಲಿ  ಬೈಡನ್  ಅಲ್ಪಮುನ್ನಡೆ ಸಾಧಿಸಿದ್ದಾರೆ. 2000ದಿಂದೀಚೆಗೆ ಫ್ಲೋರಿಡಾದಲ್ಲಿ ಗೆಲುವು ಸಾಧಿಸಿದವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದು, ಇಲ್ಲಿನ ಸ್ಪರ್ಧೆ ಕುತೂಹಲಕ್ಕೆ ಕಾರಣವಾಗಿದೆ.

ಓಹಿಯೊದಲ್ಲಿ 18 ಅಧ್ಯಕ್ಷೀಯ ಮತಗಳಿದ್ದು, ರಾಜ್ಯದಲ್ಲಿ 38 ಅಂಕಗಳಷ್ಟು ಮುನ್ನಡೆ ಸಾಧಿಸಿದ್ದಾರೆ. 2016ರ ಚುನಾವಣೆಯಲ್ಲಿ ಇಲ್ಲಿ ಟ್ರಂಪ್, ಕ್ಲಿಂಟನ್ ಅವರಿಗಿಂತ ಶೇಕಡ 8ರಷ್ಟು ಅಧಿಕ ಮತ ಗಳಿಸಿ ಜಯ ಸಾಧಿಸಿದ್ದರು. 2008 ಹಾಗೂ 2012ರಲ್ಲಿ ಒಬಾಮಾ ಜಯ ಸಾಧಿಸಿದ್ದರು.

ಮತ್ತೊಂದು ಪ್ರಮುಖ ಕಣವಾಗಿರುವ ಜಾರ್ಜಿಯಾದಲ್ಲೂ  ಬೈಡನ್ ಮುನ್ನಡೆದಿದ್ದಾರೆ. ಇಲ್ಲಿ 16 ಅಧ್ಯಕ್ಷೀಯ ಮತಗಳಿವೆ. 2016ರಲ್ಲಿ ಇಲ್ಲಿ ಟ್ರಂಪ್ ಗೆದ್ದಿದ್ದರು. ಪಶ್ಚಿಮ ವರ್ಜೀನಿಯಾದಲ್ಲಿ ಐದು ಅಧ್ಯಕ್ಷೀಯ ಮತಗಳೊಂದಿಗೆ ಟ್ರಂಪ್ ಗೆಲುವು ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News