ನೀರವ್ ಮೋದಿ ಗಡೀಪಾರು ಪ್ರಕ್ರಿಯೆಗೆ ಚುರುಕು ನೀಡಿದ ಲಂಡನ್ ನ್ಯಾಯಾಲಯದ ತೀರ್ಪು

Update: 2020-11-04 03:59 GMT

ಲಂಡನ್, ನ.4: ಪಿಎನ್‌ಬಿ ಬ್ಯಾಂಕ್ ವಂಚನೆ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡುವ ಸಂಬಂಧ ಭಾರತ ಸರಕಾರಕ್ಕೆ ಲಂಡನ್ ನ್ಯಾಯಾಲಯದಲ್ಲಿ ಮಹತ್ವದ ಜಯ ಸಿಕ್ಕಿದೆ. ಆರ್ಥಿಕ ಅಪರಾಧಿಯ ವಿರುದ್ಧದ ಪುರಾವೆಗಳನ್ನು ಒಪ್ಪಿಕೊಳ್ಳುವಂತೆ ಭಾರತ ಸರಕಾರ ಮಾಡಿದ ಮನವಿಯನ್ನು ಲಂಡನ್ ನ್ಯಾಯಾಲಯ ಪುರಸ್ಕರಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 6,498 ಕೋಟಿ ರೂಪಾಯಿ ವಂಚಿಸಿದ ಆರೋಪ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ನೀರವ್‌ಗೆ ಡಿಸೆಂಬರ್ 1ರವರೆಗೆ ಕಸ್ಟಡಿ ಬಂಧನ ವಿಧಿಸಲಾಗಿದೆ. ಬ್ಯಾರಿಸ್ಟರ್ ಅವರು ಮೌಖಿಕ ಸಲ್ಲಿಕೆಯನ್ನು ಜನವರಿ 7 ಮತ್ತು 8ರಂದು ಪೂರ್ಣಗೊಳಿಸಲಿದ್ದು, ಅದಾದ ಕೆಲವೇ ವಾರಗಳಲ್ಲಿ ಅಂತಿಮ ತೀರ್ಪು ಬರುವ ನಿರೀಕ್ಷೆ ಇದೆ.

ನೀರವ್ ಪರ ವಕೀಲ ಕಾರ್ಲ್ ಮಾಂಟ್‌ಗೊಮೆರಿ ಅವರು ವಿಚಾರಣೆ ವೇಳೆ, ಭಾರತ ಸರಕಾರದ ವಾದವನ್ನು ಅಲ್ಲಗಳೆದು, ನೌಕಾಯುದ್ಧ ಕೊಠಡಿ ಸೋರಿಕೆ ಪ್ರಕರಣದ ಪ್ರಮುಖ ಅರೋಪಿ ರವಿಶಂಕರನ್ ಪ್ರಕರಣಕ್ಕೆ ಈ ಪ್ರಕರಣವನ್ನು ಹೋಲಿಸಿದರು. ರವಿಶಂಕರನ್ ಬ್ರಿಟನ್‌ನಲ್ಲಿದ್ದು, ಇದುವರೆಗೂ ಗಡೀಪಾರು ಆಗಿಲ್ಲ. ಶಂಕರನ್ ಗಡೀಪಾರು ಪ್ರಕರಣದಲ್ಲಿ ಭಾರತ ಸರಕಾರದ ಪುರಾವೆಗಳು ಬ್ರಿಟನ್‌ನ ಗಡೀಪಾರು ಮಾನದಂಡಕ್ಕೆ ತಕ್ಕುದಾಗಿಲ್ಲ ಎಂದು ಅವರು ಪ್ರತಿಪಾದಿಸಿದರು. ಭಾರತದ ಅಪರಾಧ ದಂಡ ಸಂಹಿತೆಯ ಸೆಕ್ಷನ್ 161ರ ಅನ್ವಯ ದಾಖಲಿಸಿಕೊಳ್ಳುವ ದಾಖಲೆಗಳು ಗಡೀಪಾರು ಪ್ರಕರಣದಲ್ಲಿ ಸ್ವೀಕಾರಾರ್ಹವಲ್ಲ ಎಂದು ವಾದಿಸಿದರು.

ಆದಾಗ್ಯೂ ಜಿಲ್ಲಾ ನ್ಯಾಯಾಧೀಶ ಸ್ಯಾಮ್ಯುಯೆಲ್ ಮಾರ್ಕ್ ಗೂಝೀ, ಮತ್ತೊಬ್ಬ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪಿನ ಆಧಾರದಲ್ಲಿ ಆದೇಶ ನೀಡಿದರು. ಸೆಕ್ಷನ್ 161ರ ಅನ್ವಯ ದಾಖಲಿಸಿಕೊಂಡ ಹೇಳಿಕೆಗಳು ಸ್ವೀಕಾರಾರ್ಹ ಎಂದು ನ್ಯಾಯಾಲಯ ಆ ಪ್ರಕರಣದಲ್ಲಿ ಅಭಿಪ್ರಾಯಪಟ್ಟಿತ್ತು. ಮಲ್ಯ ಹಾಗೂ ನೀರವ್ ಪ್ರಕರಣಗಳು ಸಂಪೂರ್ಣ ಭಿನ್ನ ಎಂದು ಮೋಟಗೊಮೆರಿ ವಾದಿಸಿದರೂ ನ್ಯಾಯಾಧೀಶರು ಭಾರತ ಸರಕಾರದ ಪರವಾಗಿ ತೀರ್ಪು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News