ನವೆಂಬರ್ 10ರಿಂದ 30ರ ವರೆಗೆ ಪಟಾಕಿ ಮಾರಾಟ, ಬಳಕೆ ನಿಷೇಧ

Update: 2020-11-04 17:47 GMT

ಭುವನೇಶ್ವರ, ನ. 4: ಕೊರೋನ ರೋಗಿಗಳ ಅನಾರೋಗ್ಯ ಉಲ್ಬಣಗೊಳ್ಳಲು ಕಾರಣವಾಗುವ ವಾಯು ಮಾಲಿನ್ಯ ತಡೆಯಲು ಈ ಹಬ್ಬದ ಸಂದರ್ಭ ರಾಜ್ಯಾದ್ಯಂತ ಪಟಾಕಿಗಳ ಮಾರಾಟ ಹಾಗೂ ಬಳಕೆಗೆ ಒಡಿಶಾ ಸರಕಾರ ಮಂಗಳವಾರ ನಿಷೇಧ ವಿಧಿಸಿದೆ.

ಒಡಿಶಾ ಸರಕಾರದ ಆದೇಶದ ಪ್ರಕಾರ ಈ ನಿಷೇಧ ನವೆಂಬರ್ 10ರಿಂದ 30ರ ವರೆಗೆ ಜಾರಿಯಲ್ಲಿ ಇರಲಿದೆ. ಈ ವರ್ಷ ನವೆಂಬರ್ 14 ಹಾಗೂ 30ರಂದು ಬರುವ ದೀಪಾವಳಿ ಹಾಗೂ ಕಾರ್ತಿಕ ಪೂರ್ಣಿಮಾ ಹಬ್ಬದ ಸಂದರ್ಭ ರಾಜ್ಯದಲ್ಲಿ ಜನರು ಪಟಾಕಿ ಸಿಡಿಸುತ್ತಾರೆ. ನವೆಂಬರ್ 10ರಿಂದ 30ರ ವರೆಗೆ ರಾಜ್ಯದ ಎಲ್ಲ ಭಾಗಗಳಲ್ಲಿ ಪಟಾಕಿ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿ ಮುಖ್ಯ ಕಾರ್ಯದರ್ಶಿ ಎ.ಕೆ. ತ್ರಿಪಾಠಿ ಆದೇಶ ನೀಡಿದ್ದಾರೆ.

ಈ ಆದೇಶವನ್ನು ಯಾವುದೇ ವ್ಯಕ್ತಿ ಉಲ್ಲಂಘಿಸಿದರೆ, ವಿಪತ್ತು ನಿರ್ವಹಣಾ ಕಾಯ್ದೆ, 2005 ಹಾಗೂ ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಶಿಕ್ಷಿಸಲಾಗುವುದು ಎಂದು ಆದೇಶ ಹೇಳಿದೆ. ಚಳಿಗಾಲ ಆಗಮಿಸುತ್ತಿರುವುದರಿಂದ ಹಾಗೂ ಕೊರೋನ ಸಾಂಕ್ರಾಮಿಕ ರೋಗದ ಪರಿಸ್ಥಿತಿ ಇರುವ ನಡುವೆ ಪಟಾಕಿಗಳನ್ನು ಸಿಡಿಸುವುದು ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ 2020 ನವೆಂಬರ್ 10ರಿಂದ 30ರ ವರೆಗೆ ಪಟಾಕಿ ಮಾರಾಟ ಹಾಗೂ ಬಳಕೆಗೆ ನಿಷೇಧ ವಿಧಿಸಲಾಗಿದೆ ಎಂದು ಎ.ಕೆ. ತ್ರಿಪಾಠಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News