×
Ad

ಕೇಂದ್ರದಿಂದ ಆರ್ಥಿಕ ದಿಗ್ಭಂಧನದಂತಹ ಪರಿಸ್ಥಿತಿ ನಿರ್ಮಾಣ: ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಆರೋಪ

Update: 2020-11-04 23:29 IST

ಹೊಸದಿಲ್ಲಿ, ನ. 4: ಭದ್ರತೆಯ ನೆಪ ಒಡ್ಡಿ ಸರಕು ಸಾಗಾಟ ರೈಲುಗಳ ಸಂಚಾರ ರದ್ದುಗೊಳಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಆರ್ಥಿಕ ದಿಗ್ಭಂಧನದಂತಹ ಪರಿಸ್ಥಿತಿ ನಿರ್ಮಾಣ ಮಾಡಿ ಪಂಜಾಬ್ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆರೋಪಿಸಿದ್ದಾರೆ.

ಜಂತರ್‌ಮಂತರ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಅಮರಿಂದರ್ ಸಿಂಗ್ ಅವರೊಂದಿಗೆ ನವಜೋತ್ ಸಿಂಗ್ ಸಿಧು ಹಾಗೂ ರಾಜ್ಯ ಪ್ರತಿಪಕ್ಷದ ನಾಯಕರ ಸಹಿತ ಪಂಜಾಬ್‌ನ ಎಲ್ಲ ಸಚಿವರು ಹಾಗೂ ಶಾಸಕರು ಪಾಲ್ಗೊಂಡರು. ಪಂಜಾಬ್‌ನ ಯೋಧರು ಸಿಯಾಚಿನ್, ಗರೇಝ್, ದ್ರಾಸ್, ಕಾರ್ಗಿಲ್, ಗಲ್ವಾನ್, ದೌಲತ್ ಬೇಗ್ ಓಲ್ಡಿಯಲ್ಲಿ ದೇಶದ ಗಡಿ ಕಾಯುತ್ತಿದ್ದಾರೆ.

ನಾವು ಎಂದಿಗೂ ದೇಶದ ವಿರುದ್ಧ ಮಾತನಾಡಲು ಸಾಧ್ಯವಿಲ್ಲ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ. ಕೇಂದ್ರ ಸರಕಾರ ಜಾರಿಗೊಳಿಸಿದ ಮೂರು ಕೃಷಿ ಕಾಯ್ದೆಗಳು ನಾವು ಪ್ರತಿಭಟನೆ ನಡೆಸಲು ಕಾರಣ ಎಂದು ಅವರು ತಿಳಿಸಿದರು. ನೂತನ ಕಾನೂನು ಮಧ್ಯವರ್ತಿಗಳನ್ನು ತೆಗೆದು ಹಾಕಿ ರೈತರನ್ನು ಸಶಕ್ತೀಕರಿಸುತ್ತದೆ ಎಂಬ ಕೇಂದ್ರ ಸರಕಾರದ ಪ್ರತಿಪಾದನೆಯನ್ನು ತಿರಸ್ಕರಿಸಿದ ಅಮರಿಂದರ್ ಸಿಂಗ್, ‘ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಧ್ಯವರ್ತಿ ವ್ಯವಸ್ಥೆ ನಮ್ಮಲ್ಲಿದೆ. ನಮ್ಮ ಹೆಚ್ಚಿನ ರೈತರು ಸಣ್ಣ ಹಿಡುವಳಿದಾರರು. ಅವರು ಹಣಬೇಕಾಗಿದ್ದರೆ, ಮಧ್ಯವರ್ತಿಗಳಿಂದ ಪಡೆದುಕೊಳ್ಳುತ್ತಾರೆ. ಈಗ ರೈತರಿಗೆ ಯಾರು ನೆರವಾಗುತ್ತಾರೆ ? ಕಾರ್ಪೋರೇಟರ್‌ಗಳೇ ?’’ ಎಂದು ಪ್ರಶ್ನಿಸಿದ್ದಾರೆ. ನಾವು ರಾಜ್‌ಘಾಟ್‌ಗೆ ಹೋಗಬೇಕು ಎಂದಿದ್ದೆವು. ಆದರೆ, ಅಲ್ಲಿ 144 ಸೆಕ್ಷನ್ ಜಾರಿಗೊಳಿಸಿರುವುದರಿಂದ ಇಲ್ಲಿಗೆ ಆಗಮಿಸಿದೆವು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News