×
Ad

ಶಿಕ್ಷಣಕ್ಕೆ 51 ಟಿ.ವಿ. ಚಾನೆಲ್‌ಗಳ ಆರಂಭ: ಇಲೆಕ್ಟ್ರಾನಿಕ್ಸ್-ಐಟಿ ಸಚಿವಾಲಯದೊಂದಿಗೆ ಪ್ರಸಾರ ಭಾರತಿ ಒಪ್ಪಂದ

Update: 2020-11-04 23:32 IST

ಹೊಸದಿಲ್ಲಿ, ನ. 4: ದೇಶದಲ್ಲಿ ಶಿಕ್ಷಣ ನೀಡಲು 51 ಡಿಟಿಎಚ್ ಟಿ.ವಿ. ಚಾನೆಲ್‌ಗಳನ್ನು ಆರಂಭಿಸುವ ಒಪ್ಪಂದಕ್ಕೆ ಪ್ರಸಾರಭಾರತಿ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ ಬುಧವಾರ ಸಹಿ ಹಾಕಿದೆ.

ಗ್ರಾಮೀಣ ಹಾಗೂ ದುರ್ಗಮ ಪ್ರದೇಶದಲ್ಲಿ ಇರುವವರು ಸೇರಿದಂತೆ ಪ್ರತಿ ಮನೆಯವರಿಗೂ ಗುಣಮಟ್ಟದ ಶಿಕ್ಷಣ ಕಾರ್ಯಕ್ರಮಗಳನ್ನು ಒದಗಿಸುವ ಉದ್ದೇಶದೊಂದಿಗೆ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಭಾಸ್ಕರಾಚಾರ್ಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ಅಪ್ಲಿಕೇಶನ್ಸ್ ಹಾಗೂ ಜಿಯೋ-ಇನ್ಫೋರ್ಮೇಟಿಕ್ಸ್ ಹಾಗೂ ಪ್ರಸಾರ ಭಾರತಿ ಪರಸ್ಪರ ತಿಳಿವಳಿಕಾ ಪತ್ರ (ಎಂಒಯು) ಕ್ಕೆ ಸಹಿ ಹಾಕಿವೆ ಎಂದು ಸರಕಾರದ ಹೇಳಿಕೆ ತಿಳಿಸಿದೆ.

ಈ ಒಪ್ಪಂದದ ಅಡಿಯಲ್ಲಿ ಸ್ವಯಂಪ್ರಭಾ (22 ಚಾನೆಲ್‌ಗಳು) (ಎಂ/ಒ ಶಿಕ್ಷಣ), ಎನ್‌ಸಿಇಆರ್‌ಟಿಯ 1ರಿಂದ 12ನೇ ವರೆಗಿನ ತರಗತಿಗಳಿಗೆ ಇ-ವಿದ್ಯಾ (12 ಚಾನೆಲ್‌ಗಳು), ವಂದೇ ಗುಜರಾತ್ (ಗುಜರಾತ್ ಸರಕಾರದ್ದು) (16 ಚಾನೆಲ್‌ಗಳು), ಎಂ/ಒ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನದ ಅಡಿಯಲ್ಲಿ ಬರುವ ಡಿಜಿಶಾಲಾ (1 ಚಾನೆಲ್) ಸೇರಿದಂತೆ ಶಿಕ್ಷಣದ 51 ಡಿಟಿಎಚ್ ಚಾನೆಲ್‌ಗಳು ಡಿಡಿ ಕೋ ಬ್ರಾಂಡೆಡ್ ಚಾನೆಲ್‌ಗಳಾಗಿ ಎಲ್ಲ ಡಿಶ್ ವೀಕ್ಷಕರಿಗೆ ಉಚಿತ ಲಭ್ಯವಾಗಲಿದೆ ಎಂದು ಅದು ತಿಳಿಸಿದೆ. ಕೌಶಲ ಅಭಿವೃದ್ಧಿ ಹಾಗೂ ದೇಶದ ಕೊನೆಯ ವ್ಯಕ್ತಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸರಕಾರದ ಬದ್ಧತೆಗೆ ಅನುಗುಣವಾಗಿ 24x7 ಗಂಟೆ ಈ ಸೇವೆಗಳು ಉಚಿತವಾಗಿ ಲಭ್ಯವಾಗಲಿದೆ ಎಂದು ಕೇಂದ್ರ ಸರಕಾರದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News