ಅರ್ನಬ್ ಗೋಸ್ವಾಮಿ ಬಂಧನ ರೀತಿಗೆ ಸುದ್ದಿವಾಹಿನಿಗಳ ಸಂಘಟನೆ ಖಂಡನೆ
ಹೊಸದಿಲ್ಲಿ, ನ. 4: ಮುಂಬೈಯಲ್ಲಿ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಪೊಲೀಸರು ಬಂಧಿಸಿರುವ ರೀತಿಯನ್ನು ಸುದ್ದಿ ವಾಹಿನಿಗಳ ಸಂಘಟನೆ (ಎನ್‌ಬಿಎ) ಬುಧವಾರ ಖಂಡಿಸಿದೆ.
ಅರ್ನಬ್ ಗೋಸ್ವಾಮಿ ಅವರನ್ನು ನ್ಯಾಯೋಚಿತವಾಗಿ ನಡೆಸಿಕೊಳ್ಳುವ ಭರವಸೆ ನೀಡುವಂತೆ ಹಾಗೂ ಪ್ರತೀಕಾರದ ಕ್ರಮಕ್ಕೆ ರಾಜ್ಯದ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಎನ್‌ಬಿಎ ಆಗ್ರಹಿಸಿದೆ. ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಿದ ರೀತಿಯ ಬಗ್ಗೆ ಎನ್‌ಬಿಎ ವಿಷಾದಿಸುತ್ತದೆ. ಎನ್‌ಬಿಎ, ಗೋಸ್ವಾಮಿ ರೀತಿಯ ಪತ್ರಿಕೋದ್ಯಮವನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ಮಾಧ್ಯಮದ ಸಂಪಾದಕರ ವಿರುದ್ಧ ಅಧಿಕಾರಿಗಳು ಈ ರೀತಿಯ ಯಾವುದೇ ಕ್ರಮ ಕೈಗೊಂಡರೆ ನಾವು ಖಂಡಿಸುತ್ತೇವೆ ಎಂದು ಎನ್‌ಬಿಎ ಹೇಳಿದೆ. ಮಾಧ್ಯಮ ಕಾನೂನಿಗೆ ಅತೀತವಲ್ಲ. ಆದರೆ. ಸರಿಯಾದ ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕು ಎಂದು ಹಿರಿಯ ಪತ್ರಕರ್ತ ರಜತ್ ಶರ್ಮಾ ನೇತೃತ್ವದ ಎನ್‌ಬಿಎ ಹೇಳಿದೆ.