ತಿಹಾರ್ ಜೈಲಿನಲ್ಲಿ ಮೂಲಸೌಕರ್ಯ ನಿರಾಕರಣೆ ದೂರು: ಅಧಿಕಾರಿಗಳಿಗೆ ನ್ಯಾಯಾಧೀಶರ ತರಾಟೆ
ಹೊಸದಿಲ್ಲಿ, ನ.4: ತಿಹಾರ್ ಜೈಲಿನಲ್ಲಿ ಕೈದಿಗಳಿಗೆ ಮೂಲಭೂತ ಅಗತ್ಯವನ್ನು ನಿರಾಕರಿಸಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತಾನು ಖುದ್ದು ಜೈಲಿಗೆ ಭೇಟಿ ನೀಡಿ ಪರೀಕ್ಷಿಸಬೇಕಾಗುತ್ತದೆ ಎಂದು ದಿಲ್ಲಿ ಕೋರ್ಟ್‌ನ ನ್ಯಾಯಾಧೀಶ ಅಮಿತಾಬ್ ರಾವತ್ ಜೈಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ಸಂಭವಿಸಿದ್ದ ಗಲಭೆ ಮತ್ತು ಹಿಂಸಾಚಾರ ಪ್ರಕರಣದ 15 ಆರೋಪಿಗಳನ್ನು ತಿಹಾರ್ ಜೈಲಿನಲ್ಲಿಡಲಾಗಿದೆ. ಆದರೆ ತಮಗೆ ಬೆಚ್ಚಗಿನ ಬಟ್ಟೆ, ಔಷಧಿ ಹಾಗೂ ಇತರ ಆರೋಗ್ಯರಕ್ಷಣೆ ವ್ಯವಸ್ಥೆ ಸಹಿತ ಯಾವುದೇ ಮೂಲಭೂತ ಅಗತ್ಯವನ್ನು ಒದಗಿಸಿಲ್ಲ ಎಂದು 7 ಕೈದಿಗಳು ಜೈಲು ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ನ್ಯಾಯಾಲಯದ ಸೂಚನೆಯಿಲ್ಲದೆ ತಾವು ಸವಲತ್ತು ಒದಗಿಸಲಾಗದು ಎಂದು ಅಧಿಕಾರಿಗಳು ಉತ್ತರಿಸಿ ನಿರ್ಲಕ್ಷ್ಯ ತೋರಿದ್ದರು.
ಈ ಬಗ್ಗೆ ಗಮನ ಹರಿಸಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೈದಿಗಳ ಪರವಾಗಿ ದಿಲ್ಲಿಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯದ ಆದೇಶದ ಅನುಕೂಲ ಎಲ್ಲಾ ಆರೋಪಿಗಳಿಗೂ ಲಭ್ಯವಾಗಬೇಕು ಎಂದು ಅರ್ಜಿಯ ವಿಚಾರಣೆ ಸಂದರ್ಭ ಜೆಎನ್‌ಯು ವಿದ್ಯಾರ್ಥಿ ದೇವಾಂಗನ ಕಲಿತಾ ಮತ್ತು ನತಾಶಾ ನರ್ವಾಲ್ ಪರ ವಕೀಲರು ಮನವಿ ಮಾಡಿಕೊಂಡರು. ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ಸೂಚಿಸಿದ ನ್ಯಾಯಾಧೀಶ ರಾವತ್, ಜೈಲಿನಲ್ಲಿರುವ ಪರಿಸ್ಥಿತಿಯನ್ನು ಸುಧಾರಿಸಬೇಕು.
ಈ ರೀತಿಯ ದೂರು ಇನ್ನು ಮುಂದಕ್ಕೆ ಕೇಳಿಬರಬಾರದು. ಇಂತಹ ಸಣ್ಣ ಪುಟ್ಟ ಕೆಲಸಗಳಿಗೂ ಆರೋಪಿಗಳು ಅಧಿಕಾರಿಗಳ ಮರ್ಜಿ ಕಾಯುವಂತಾಗಬಾರದು. ತಿಹಾರ್ ಜೈಲಿನ ಪ್ರಧಾನ ನಿರ್ದೇಶಕರು ತಕ್ಷಣ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಾನೇ ಜೈಲಿಗೆ ಭೇಟಿ ನೀಡಬೇಕಾಗುತ್ತದೆ ಎಂದು ಸೂಚಿಸಿದರಲ್ಲದೆ, ನವೆಂಬರ್ 23ರಂದು ತನ್ನೆದುರು ಹಾಜರಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸುವಂತೆ ಜೈಲಿನ ಅಧಿಕಾರಿಗೆ ತಿಳಿಸಿದರು.