×
Ad

ವಿಮಾನ ಪ್ರಯಾಣಿಕರಲ್ಲಿ ಕೊರೋನ ಸೋಂಕಿನ ಭೀತಿ ಇಳಿಮುಖ: ಸಮೀಕ್ಷೆಯ ವರದಿ

Update: 2020-11-04 23:54 IST

ಹೊಸದಿಲ್ಲಿ, ನ.4: ಪ್ರಯಾಣಿಕರಲ್ಲಿ ವಿಮಾನಯಾನದ ಸಂದರ್ಭ ಕೊರೋನ ಸೋಂಕಿಗೆ ಒಳಗಾಗುವ ಮತ್ತು ಸಹ ಪ್ರಯಾಣಿಕರು ಕೊರೋನ ಶಿಷ್ಟಾಚಾರವನ್ನು ಪಾಲಿಸುತ್ತಿಲ್ಲ ಎಂಬ ಭೀತಿ ಕಳೆದ 3 ತಿಂಗಳಿನಿಂದ ಗಮನಾರ್ಹ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ ಎಂದು ‘ವಿಸ್ತಾರ’ ಬುಧವಾರ ಬಿಡುಗಡೆಗೊಳಿಸಿರುವ ಸಮೀಕ್ಷೆಯ ವರದಿ ತಿಳಿಸಿದೆ. ಈ ವರ್ಷದ ಜೂನ್‌ನಲ್ಲಿ ಇದೇ ವಿಷಯದ ಬಗ್ಗೆ ‘ವಿಸ್ತಾರ’ ನಡೆಸಿದ್ದ ಪ್ರಥಮ ಸಮೀಕ್ಷೆಯಲ್ಲಿ ಸುಮಾರು 6,000 ವಿಮಾನ ಪ್ರಯಾಣಿಕರನ್ನು ಸಂದರ್ಶಿಸಲಾಗಿತ್ತು.

ಮೇಲೆ ತಿಳಿಸಿದ ಎರಡು ಪ್ರಶ್ನೆಗಳಿಗೆ ಕ್ರಮವಾಗಿ 34ಶೇ. ಮತ್ತು 26 ಶೇ. ಪ್ರಯಾಣಿಕರು ಹೌದು ಎಂದುತ್ತರಿಸಿದ್ದರು. ಆಗಸ್ಟ್-ಸೆಪ್ಟಂಬರ್‌ನಲ್ಲಿ ನಡೆಸಿದ ಎರಡನೇ ಸರ್ವೆಯಲ್ಲಿ ಇದೇ ಪ್ರಶ್ನೆಗಳಿಗೆ ಕ್ರಮವಾಗಿ 22 ಶೇ ಮತ್ತು 17 ಶೇ ಪ್ರಯಾಣಿಕರು ಹೌದು ಎಂದುತ್ತರಿಸಿದ್ದಾರೆ. ಈ ಸಮೀಕ್ಷೆಯಲ್ಲಿ 4,550 ಪ್ರಯಾಣಿಕರು ಪಾಲ್ಗೊಂಡಿದ್ದರು. ಪ್ರಥಮ ಸಮೀಕ್ಷೆಯಲ್ಲಿ ಪ್ರಯಾಣಿಕರು ವ್ಯಕ್ತಪಡಿಸಿದ ಅಭಿಪ್ರಾಯದಂತೆ - ಕೊರೋನ ಸೋಂಕಿಗೆ ಒಡ್ಡಿಕೊಳ್ಳುವ ಭೀತಿ, ಸಹಪ್ರಯಾಣಿಕರು ಸುರಕ್ಷತಾ ಶಿಷ್ಟಾಚಾರ ಉಲ್ಲಂಘಿಸುವುದು ಮತ್ತು ಅಧಿಕ ವಿಮಾನ ದರ’ ದ ಬಗ್ಗೆ ಹೆಚ್ಚಿನ ಆತಂಕವಿತ್ತು.

ಆದರೆ ಎರಡನೆ ಸಮೀಕ್ಷೆಯ ಪ್ರಕಾರ- ಕ್ವಾರಂಟೈನ್ ಅಗತ್ಯತೆ, ಅಧಿಕ ವಿಮಾನ ದರದ ಕುರಿತ ಆತಂಕ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರೆ, ಕೊರೋನ ಸೋಂಕಿಗೆ ಒಡ್ಡಿಕೊಳ್ಳುವ ಭೀತಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣಿಸಲು ವಿಮಾನಪ್ರಯಾಣ ಅತ್ಯಂತ ಸುರಕ್ಷಿತ ವಿಧಾನ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಮೂರರಲ್ಲಿ ಇಬ್ಬರು ಪ್ರಯಾಣಿಕರು ಅಭಿಪ್ರಾಯ ಪಟ್ಟಿದ್ದಾರೆ. ವಿಮಾನ ಪ್ರಯಾಣಕ್ಕೆ ಆದ್ಯತೆ ನೀಡುವವರಲ್ಲಿ 41 ಶೇ. ಜನತೆ ಮುಂದಿನ ಎರಡು ತಿಂಗಳ ಬಳಿಕ ಪ್ರಯಾಣಿಸಲು ಬಯಸಿದರೆ 63 ಶೇ. ಜನತೆ ಮುಂದಿನ 6 ತಿಂಗಳೊಳಗೆ, 28 ಶೇ. ಜನತೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಕಾಯಲು ಇಚ್ಛಿಸಿದ್ದಾರೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News