ಇದೆಂತಹ ಓಡಿಸುವ ವ್ಯರ್ಥ ಮಾತು? ಇಲ್ಲಿ ಎಲ್ಲರೂ ಭಾರತೀಯರು !

Update: 2020-11-05 05:02 GMT

ಪಾಟ್ನಾ: ಬಿಹಾರ ಚುನಾವಣಾ ಪ್ರಚಾರದ ನಡುವೆಯೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉತ್ತರ ಪ್ರದೇಶ ಸಿಎಂ ಮತ್ತು ಬಿಜೆಪಿಯ ತಾರಾ ಪ್ರಚಾರಕ ಆದಿತ್ಯನಾಥ್ ಅವರ ನಡುವೆ ಎದ್ದಿರುವ ವಿವಾದವೊಂದು ಆಡಳಿತ ಎನ್‍ಡಿಎ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದಕ್ಕೆ ಸಾಕ್ಷಿಯಾದಂತಿದೆ.

“ನುಸುಳುಕೋರರನ್ನು ಹೊರಕ್ಕೆಸೆಯುವ'' ಕುರಿತು ಆದಿತ್ಯನಾಥ್ ಹೇಳಿಕೆಯನ್ನು ನಿತೀಶ್ ಕುಮಾರ್ ಸಾರ್ವಜನಿಕವಾಗಿ ಖಂಡಿಸಿದ್ದಾರೆ.

“ಯಾರು ಈ ರೀತಿಯ ಅಪಪ್ರಚಾರ ನಡೆಸುತ್ತಿದ್ದಾರೆ? ಯಾರು ಇಂತಹ ಅಸಂಬದ್ಧ ಮಾತುಗಳನ್ನು ಆಡುತ್ತಿದ್ದಾರೆ? ಯಾರು ಜನರನ್ನು ಹೊರಕ್ಕೆಸೆಯುತ್ತಾರೆ? ಯಾರೂ ಹಾಗೆ ಮಾಡಲು ಧೈರ್ಯ ತೋರಬಾರದು. ಎಲ್ಲರೂ ಈ ದೇಶಕ್ಕೆ ಸೇರಿದವರು. ಎಲ್ಲರೂ ಭಾರತೀಯರು,'' ಎಂದು ಬುಧವಾರ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ನಿತೀಶ್ ಕುಮಾರ್ ಗುಡುಗಿದ್ದಾರೆ.

ತಮ್ಮ ಈ ಹೇಳಿಕೆಯ ಕುರಿತು ನಿತೀಶ್ ಟ್ವೀಟ್ ಕೂಡ ಮಾಡಿದ್ದಾರೆ. “ಎಲ್ಲರನ್ನೂ ಜತೆಯಾಗಿ ಕರೆದುಕೊಂಡು ಹೋಗುವುದು ನಮ್ಮ ಕರ್ತವ್ಯ ಹಾಗೂ ನಮ್ಮ ಸಂಸ್ಕೃತಿ ಕೂಡ. ಆಗ ಮಾತ್ರ ಬಿಹಾರ ಪ್ರಗತಿ ಕಾಣುತ್ತದೆ,'' ಎಂದೂ ನಿತೀಶ್ ಬರೆದಿದ್ದಾರೆ.

ನಿತೀಶ್ ತಮ್ಮ ಭಾಷಣದಲ್ಲಿ ಯಾರನ್ನೂ ಹೆಸರಿಸದೇ ಇದ್ದರೂ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಪರ ಪ್ರಚಾರ ನಡೆಸುತ್ತಿರುವ ಆದಿತ್ಯನಾಥ್ ರನ್ನು ಗುರಿಯಾಗಿಸಿ ಅವರು ಹೇಳಿದ್ದಾರೆಂದೇ ತಿಳಿಯಲಾಗಿದೆ.

ಬಿಹಾರದ ಕಟಿಹಾರ್‍ನಲ್ಲಿ ಚುನಾವಣಾ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಸಿಎಎ ಕುರಿತು ಉಲ್ಲೇಖಿಸಿ “ನುಸುಳುವಿಕೆ ಸಮಸ್ಯೆಗೆ ಮೋದೀಜಿ ಪರಿಹಾರ ಕಂಡುಕೊಂಡಿದ್ದಾರೆ. ದೇಶದೊಳಗೆ ನುಸುಳಿ ಭದ್ರತೆಗೆ ಅಪಾಯವೊಡ್ಡುವವರನ್ನು ಹೊರಕ್ಕೆಸೆಯಲಾಗುವುದೆಂದು ಕೇಂದ್ರ ಹೇಳಿದೆ.  ದೇಶದ ಭದ್ರತೆ ಹಾಗೂ ಸಾರ್ವಭೌಮತ್ವದ ಜತೆ ಚೆಲ್ಲಾಟ ಆಡುವವರನ್ನು ನಾವು ಸಹಿಸುವುದಿಲ್ಲ,'' ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News