ಪಟಾಕಿ ನಿಷೇಧವಾಗಲಿ

Update: 2020-11-06 05:34 GMT

ಕೊರೋನ ಸೋಂಕನ್ನು ಎದುರಿಸುವ ಸಂದರ್ಭದಲ್ಲಿ ಸರಕಾರಕ್ಕೆ ಅತಿ ದೊಡ್ಡ ಸವಾಲಾಗಿ ಎದುರಾಗಿದ್ದು ಸಾಲು ಸಾಲು ಹಬ್ಬಗಳು. ಜನರು ಹಬ್ಬಗಳ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿರುವುದರಿಂದ, ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸದಂತೆ ನಿಯಂತ್ರಣ ಹೇರುವುದು ಎಷ್ಟರಮಟ್ಟಿಗೆ ಫಲಿಸೀತು ಎನ್ನುವುದರ ಬಗ್ಗೆ ಆತಂಕವಿತ್ತು. ಆದರೆ ಜನರು ನಿರೀಕ್ಷೆ ಮೀರಿ ಸ್ಪಂದಿಸಿದರು. ಮುಖ್ಯವಾಗಿ ರಮಝಾನ್‌ನ ಒಂದು ತಿಂಗಳ ಕಾಲದಲ್ಲಿ ಮುಸ್ಲಿಮರು ಮಸೀದಿಗೆ ತೆರಳದೆ ಮನೆಯಲ್ಲೇ ಸರಳ ರೀತಿಯಲ್ಲಿ ವ್ರತಗಳನ್ನು ಆಚರಿಸಿದರು. ರಮಝಾನ್, ಬಕ್ರೀದ್ ಹಬ್ಬಗಳ ಸಂದರ್ಭದಲ್ಲೂ ಸರಕಾರದ ಆದೇಶಗಳನ್ನು ಪಾಲಿಸಿದರು. ಇದೇ ಸಂದರ್ಭದಲ್ಲಿ ಗಣೇಶೋತ್ಸವ, ದಸರಾದಂತಹ ಸಾರ್ವಜನಿಕ ಉತ್ಸವಗಳನ್ನು ಜನರು ಸುರಕ್ಷಿತ ಅಂತರಗಳ ಜೊತೆಗೆ ಆಚರಿಸಿಕೊಂಡರು. ಎಲ್ಲೂ ಸಾರ್ವಜನಿಕ ಮೆರವಣಿಗೆಗಳಿಗೆ ಆಸ್ಪದ ನೀಡಲಿಲ್ಲ. ಇದರಿಂದಾಗಿ ಈ ಬಾರಿ ಪರಿಸರ ಮಾಲಿನ್ಯ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಸೀಮಿತ ಸಂಖ್ಯೆಯಲ್ಲಿ ಗಣೇಶ ವಿಸರ್ಜನೆಯನ್ನು ಮಾಡಿರುವುದರಿಂದ, ಕೆರೆ, ನದಿಗಳಲ್ಲಿ ಹಿಂದಿನ ಮಾಲಿನ್ಯಗಳು ಈ ಬಾರಿ ನಡೆಯಲಿಲ್ಲ. ಗಣೇಶ ಹಬ್ಬಕ್ಕೆ ಪ್ರಕೃತಿಯೊಂದಿಗೆ ನೇರ ಸಂಬಂಧವಿದೆ. ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ನದಿ, ಕೆರೆಗಳಿಗೆ ಆಗುವ ಹಾನಿ ಪ್ರಕೃತಿಗೆ ಮಾಡುವ ಅಪಮಾನವಾಗಿದೆ. ಕೊರೋನ ಕಾಲದ ಪ್ರಕೃತಿ ಮಾಲಿನ್ಯ ರಹಿತ ಗಣೇಶ ವಿಸರ್ಜನೆ ಭವಿಷ್ಯದಲ್ಲೂ ನಮಗೆ ಮಾದರಿಯಾಗಬೇಕಾಗಿದೆ.

ಇದೀಗ ಭಾರತದ ಇನ್ನೊಂದು ಪ್ರಮುಖ ಹಬ್ಬ ದೀಪಾವಳಿ ಆಗಮಿಸಿದೆ. ಹೆಸರೇ ಹೇಳುವಂತೆ ದೀಪಾವಳಿ ಬೆಳಕಿನ ಹಬ್ಬ. ಆದರೆ ಈ ಬೆಳಕಿನ ಹಬ್ಬಗಳನ್ನು ಪಟಾಕಿ ಉದ್ಯಮಗಳು ‘ಸದ್ದಿನ ಹಬ್ಬ’ವಾಗಿ ಮಾರ್ಪಡಿಸಿದೆ. ಹಣತೆಯ ಜಾಗದಲ್ಲಿ ಪಟಾಕಿಗಳನ್ನು ಮಾರಲಾಗುತ್ತದೆ. ಹಣತೆ ಹಚ್ಚಿ ಮನೆ, ಮನವನ್ನು ಬೆಳಗುವ ಬದಲು, ಪಟಾಕಿ ಸುಟ್ಟು, ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯಗಳ ಮೂಲಕ ಹಬ್ಬದ ವೌಲ್ಯಗಳಿಗೆ, ಸಂದೇಶಗಳಿಗೆ ಧಕ್ಕೆ ತರಲಾಗುತ್ತದೆ. ಪಟಾಕಿ ಬೆಳಗುವುದಿಲ್ಲ. ಬೆಳಗಿದಂತೆ ನಟಿಸಿ ಬೂದಿ ಮತ್ತು ಕತ್ತಲನ್ನು ಉಳಿಸಿಹೋಗುತ್ತದೆ. ಪಟಾಕಿ ಸುಟ್ಟು ಬೂದಿಯಾದ ಬಳಿಕವೂ ಗಂಧಕದ ವಾಸನೆ ಇಡೀ ಪರಿಸರವನ್ನು ಆವರಿಸಿಕೊಂಡಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಪಟಾಕಿಯ ಕಾರಣದಿಂದಾಗಿ ಪ್ರತಿವರ್ಷ ನೂರಾರು ಮಕ್ಕಳು ಕಣ್ಣುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಶಾಶ್ವತವಾಗಿಬೆಳಕನ್ನು ನೋಡುವ ಭಾಗ್ಯವನ್ನೇ ಕಳೆದುಕೊಂಡವರಿದ್ದಾರೆ. ನಮ್ಮ ಮನೆ, ಮನದೊಳಗೆ ಬೆಳಕನ್ನು ಬಿತ್ತಿ ಹೋಗಬೇಕಾದ ದೀಪಾವಳಿ,ಶಾಶ್ವತ ಕತ್ತಲನ್ನು ಬಿಟ್ಟು ಹೋಗುವಂತಹ ಪರಿಸ್ಥಿತಿಯನ್ನು ನಾವೇ ನಿರ್ಮಾಣ ಮಾಡಿಕೊಳ್ಳುತ್ತಿದ್ದೇವೆ. ಅಷ್ಟೇ ಅಲ್ಲ ಪಟಾಕಿಯ ಅವಾಂತರಗಳಿಂದ ಇಡೀ ಬಡಾವಣೆಯೇ ಸುಟ್ಟು ಹೋದ ಘಟನೆಗಳು ದೇಶದ ಹಲವೆಡೆ ಘಟಿಸಿವೆೆ. ಇದರ ಜೊತೆ ಜೊತೆಗೆ ಪಟಾಕಿ ಕಾರ್ಖಾನೆಗಳಿಗೂ ಬೆಂಕಿ ಬಿದ್ದು ಸಾವುನೋವುಗಳು ಸಂಭವಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಪಟಾಕಿ ತಯಾರಿಸುವ ಸಂದರ್ಭದಲ್ಲೂ ಮಕ್ಕಳು ಮಹಿಳೆಯರನ್ನೇ ಅಧಿಕವಾಗಿ ಬಳಸಿಕೊಳ್ಳಲಾಗುವುದರಿಂದ ಪಟಾಕಿ ಕಾರ್ಖಾನೆಗಳಲ್ಲಿ ಸಂಭವಿಸುತ್ತಿರುವ ದುರಂತಗಳಲ್ಲಿ ಮಕ್ಕಳು, ಮಹಿಳೆಯರೇ ಹೆಚ್ಚಾಗಿ ಬಲಿಪಶುಗಳಾಗುತ್ತಾರೆ. ಸಾವು ನೋವುಗಳ ಹಿನ್ನೆಲೆಯಿರುವ ಪಟಾಕಿಗಳನ್ನು ಸುಡದೇ ಹಣತೆ ಬೆಳಗುವುದಕ್ಕೆ ಹೀಗೆ ಹತ್ತು ಹಲವು ಕಾರಣಗಳಿವೆ.

ಈ ಬಾರಿ ಅದಕ್ಕೆ ಇನ್ನೊಂದು ಕಾರಣ ಸೇರಿಕೊಂಡಿದೆ. ಅದು ಕೋರೋನ ಸೋಂಕು. ಉಸಿರಾಟದ ಸಮಸ್ಯೆಯಿರುವ ಜನರು ಬೇಗ ಕೊರೋನ ಸೋಂಕುಗಳಿಗೆ ಬಲಿಯಾಗುತ್ತಾರೆ. ಲಾಕ್‌ಡೌನ್‌ನಿಂದಾಗಿ ಆರ್ಥಿಕವಾಗಿ ಜರ್ಜರಿತವಾಗಿರುವ ಜನರು ಆಸ್ಪತ್ರೆಗಳಿಗೆ ದಾಖಲಾಗಲೂ ಹೆದರುವ ಸನ್ನಿವೇಶ ನಿರ್ಮಾಣವಾಗಿದೆ. ಒಂದು ರೀತಿಯಲ್ಲಿ ಇಡೀ ದೇಶ ಕೊರೋನ ಮಾತ್ರವಲ್ಲ, ಬಗೆ ಬಗೆಯ ರೋಗಗಳಿಂದ ಒಳಗೊಳಗೇ ನರಳುತ್ತಿದೆ. ಹೃದಯ ಕಾಯಿಲೆಯಿರುವವರಂತೂ ಅತ್ಯಂತ ಜಾಗರೂಕತೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ದೀಪಾವಳಿಯ ನೆಪದಲ್ಲಿ ಪಟಾಕಿಗಳು ಮತ್ತೆ ಮಾರುಕಟ್ಟೆಗೆ ಇಳಿಯಲು ಪ್ರಯತ್ನಿಸುತ್ತಿದೆ. ಲಾಕ್‌ಡೌನ್‌ನಿಂದಾಗಿ ಇಡೀ ಆರ್ಥಿಕತೆ ಜರ್ಜರಿತವಾಗಿರುವಾಗ ಪಟಾಕಿ ಮಾರಾಟವನ್ನು ನಿಷೇಧಿಸಿದರೆ, ಅದನ್ನು ಅವಲಂಬಿಸಿದವರು ಬೀದಿಪಾಲಾಗಬೇಕಾಗುತ್ತದೆ ಎಂದು ಸರಕಾರವನ್ನು ಬೆದರಿಸುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಒಂದನ್ನು ನೆನಪಿಡಬೇಕಾಗಿದೆ. ಕೊರೋನ ಎದುರಿಸುವುದಕ್ಕಾಗಿ ಘೋಷಿಸಲ್ಪಟ್ಟ ಲಾಕ್‌ಡೌನ್‌ನಿಂದಾಗಿ ಜನರು ತುತ್ತು ಊಟಕ್ಕೂ ಪರಿತಪಿಸುವಂತಹ ಸ್ಥಿತಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಪಟಾಕಿಯ ರೂಪದಲ್ಲಿ ಹಣವನ್ನು ಸುಟ್ಟು ಬೂದಿ ಮಾಡುವುದು ಆ ಸಂತ್ರಸ್ತರಿಗೆ ನಾವು ಮಾಡುವ ಅವಮಾನವಾಗಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಹಣತೆ ಹಚ್ಚಿ ಕೊರೋನ ಯೋಧರಿಗೆ ಗೌರವವನ್ನು ಸಲ್ಲಿಸಲು ಸೂಚಿಸಿದರು. ಇದೀಗ ದೀಪಾವಳಿಯ ಸಂದರ್ಭದಲ್ಲಿಯೂ ಹಣತೆಗೇ ಪ್ರಾಧಾನ್ಯತೆಯನ್ನು ನೀಡಬೇಕು. ನಾವಿಂದು ಕೊರೋನದಿಂದ ಸಂತ್ರಸ್ತರಾದವರ ಹೆಸರಲ್ಲಿ ಹಣತೆ ಹಚ್ಚಿ, ಅವರ ಮನೆ, ಮನದಲ್ಲಿ ಬೆಳಕಾಗಲಿ ಎಂದು ಹಾರೈಸಬೇಕು. ಪಟಾಕಿ ಕೊಳ್ಳುವುದಕ್ಕಾಗಿ ಉಪಯೋಗಿಸುವ ಹಣವನ್ನು ಲಾಕ್‌ಡೌನ್ ಸಂತ್ರಸ್ತರಿಗೆ ತಲುಪಿಸಿ ಅವರ ಕಣ್ಣಲ್ಲಿ ಬೆಳಕನ್ನು ಬಿತ್ತಬೇಕು. ಈ ಮೂಲಕ ದೀಪಾವಳಿಯನ್ನು ನಾವು ಅರ್ಥಪೂರ್ಣವಾಗಿ ಆಚರಿಸಬಹುದಾಗಿದೆ. ಈಗಾಗಲೇ ಹಲವು ರಾಜ್ಯಗಳು ದೀಪಾವಳಿಯ ಸಂದರ್ಭದಲ್ಲಿ ಪಟಾಕಿಯನ್ನು ನಿಷೇಧಿಸಲು ಮುಂದಾಗಿವೆೆೆ. ಕರ್ನಾಟಕ ಸರಕಾರವೂ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸುಡುವುದನ್ನು ನಿಷೇಧಿಸುವ ಇಂಗಿತವ್ಯಕ್ತಪಡಿಸಿದೆ. ಆದರೆ ಆರ್ಥಿಕತೆಯ ಮೇಲೆ ಬೀರುವ ಪರಿಣಾಮದ ಕುರಿತಂತೆ ಸರಕಾರ ಯೋಚಿಸುತ್ತಿದೆ.

ಪಟಾಕಿ ಆರ್ಥಿಕತೆಗೆ ನೀಡುವ ಕೊಡುಗೆ ತೀರಾ ಕಡಿಮೆ. ಅದು ಪರಿಸರಕ್ಕೆ, ಮನುಷ್ಯರಿಗೆ, ಕೊರೋನ ಪೀಡಿತರಿಗೆ ಮಾಡುವ ಹಾನಿಗೆ ಹೋಲಿಸಿದರೆ ಈ ಕೊಡುಗೆ ಏನೇನೂ ಅಲ್ಲ. ಪಟಾಕಿಯ ದೆಸೆಯಿಂದಾದ ನಷ್ಟವನ್ನೂ ಮತ್ತೆ ಸರಕಾರವೇ ತುಂಬಬೇಕಾಗುತ್ತದೆ. ಪಟಾಕಿಯ ಬದಲು ಹಣತೆ ಹಚ್ಚಲು ಪ್ರೋತ್ಸಾಹಿಸಿದರೆ ಗ್ರಾಮೀಣ ಪ್ರದೇಶದ ಆರ್ಥಿಕತೆ ಒಂದಿಷ್ಟು ಜೀವ ಪಡೆಯುತ್ತದೆ. ಮಣ್ಣಿನ ಹಣತೆಗಳನ್ನು ಅವಲಂಬಿಸಿದವರ ಬದುಕಿನಲ್ಲಿ ಬೆಳಕಾಗುತ್ತದೆ. ಪಟಾಕಿಯನ್ನು ನಿಷೇಧಿಸಲು ಸರಕಾರ ಯಾವ ಕಾರಣಕ್ಕೂ ಹಿಂದೇಟು ಹಾಕಬಾರದು. ಕೊರೋನ ಕಾರಣಕ್ಕಾಗಿ ಮಾತ್ರವಲ್ಲ, ದೀಪಾವಳಿಯು ತನ್ನ ಗರ್ಭದಲ್ಲಿ ಬಚ್ಚಿಟ್ಟುಕೊಂಡಿರುವ ವೌಲ್ಯಗಳನ್ನು, ಹಿರಿಮೆಗಳನ್ನು ಕಾಪಾಡುವ ಸಲುವಾಗಿ ಪಟಾಕಿಗೆ ಸಾರ್ವಜನಿಕವಾಗಿ ನಿಷೇಧ ಹೇರಬೇಕು. ವಯಸ್ಕರು, ರೋಗಿಗಳು, ಮಕ್ಕಳು, ಮಹಿಳೆಯರ ಪಾಲಿಗೆ ಈ ನಿಷೇಧ ಸರಕಾರ ನೀಡಬಹುದಾದ ದೀಪಾವಳಿ ಹಬ್ಬದ ‘ಅತ್ಯುತ್ತಮ ಕೊಡುಗೆ’ಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News