ಕೇಂದ್ರ ವಿಭಾಗ ಪೊಲೀಸರ ಕಾರ್ಯಾಚರಣೆ: ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

Update: 2020-11-05 18:25 GMT

ಬೆಂಗಳೂರು, ನ.5: ನಗರದ ಕೇಂದ್ರ ವಿಭಾಗದ ಪೊಲೀಸರು ಕಳವು ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸಿದ್ದು, 3 ಕೋಟಿಗೂ ಹೆಚ್ಚು ಮೌಲ್ಯದ 5.5 ಕೆಜಿ ಚಿನ್ನಾಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ಕೇಂದ್ರ ವಿಭಾಗದ ಅಶೋಕ ನಗರ, ವಿವೇಕ್ ನಗರ, ಮತ್ತು ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಈ ಕಾರ್ಯಾಚರಣೆ ನಡೆಸಿ, ಪ್ರಕರಣಗಳನ್ನು ಬೇಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

ಪ್ರಮುಖವಾಗಿ ನವರತನ್ ಜ್ಯುವೆಲ್ಲರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಲಂಬೋಧರ್ ಎಂಬಾತ ಅಲ್ಲಿನ ದಾಖಲಾತಿಗಳನ್ನು ಬದಲಾವಣೆ ಮಾಡಿ ಒಟ್ಟು 2 ಕಿ.ಜಿ ಚಿನ್ನಾಭರಣ ಕಳವು ಪ್ರಕರಣವನ್ನು ಬೇಧಿಸಿರುವ ಕಬ್ಬನ್‍ಪಾರ್ಕ್ ಠಾಣಾ ಪೊಲೀಸರು, ಆತನಿಂದ 1 ಕೋಟಿ ಮೌಲ್ಯದ 1.5 ಕೆಜಿ ಆಭರಣ ವಶಪಡಿಸಿಕೊಂಡಿದ್ದಾರೆ.

ಅದೇ ರೀತಿ, ಅಶೋಕ ನಗರ ಠಾಣಾ ಪೊಲೀಸರು ತೌಸಿಫ್ ಎಂಬಾತನನ್ನು ಬಂಧಿಸಿ 2.5 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಇನ್ನು, ಬಾಬು ಮತ್ತು ಆತನ ಪತ್ನಿ ಜಯಂತಿ ಎಂಬಾಕೆಯನ್ನು ವಶಕ್ಕೆ ಪಡೆದು 2.1 ಕೋಟಿ ಮೌಲ್ಯದ 2.465 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಮತ್ತೊಂದು ಪ್ರಕರಣದಲ್ಲಿ ವಿವೇಕ್ ನಗರ ಠಾಣಾ ಪೊಲೀಸರು ಶೇಖ್ ಷಾ ಎಂಬಾತನನ್ನು ಕಳವು ಪ್ರಕರಣದಡಿ ಬಂಧಿಸಿ 12 ಲಕ್ಷ  ಮೌಲ್ಯದ 355 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಆಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News