ಅಮೆರಿಕ ಅಧ್ಯಕ್ಷೀಯ ಚುನಾವಣೆ : ಜಾರ್ಜಿಯಾ, ಮಿಚಿಗನ್ ಕಾನೂನು ಸಮರದಲ್ಲಿ ಟ್ರಂಪ್‌ಗೆ ಮುಖಭಂಗ

Update: 2020-11-06 03:39 GMT

ವಾಷಿಂಗ್ಟನ್ : ತುರುಸಿನ ಸ್ಪರ್ಧೆ ಏರ್ಪಟ್ಟಿದ್ದ ಜಾರ್ಜಿಯಾ ಮತ್ತು ಮಿಚಿಗನ್ ರಾಜ್ಯಗಳಲ್ಲಿ ಮತ ಎಣಿಕೆ ಸ್ಥಗಿತಗೊಳಿಸುವಂತೆ ಡೊನಾಲ್ಡ್ ಟ್ರಂಪ್ ಮಾಡಿಕೊಂಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದರೊಂದಿಗೆ ಅಮೆರಿಕದ ಅಧ್ಯಕ್ಷ ಗಾದಿಗೆ ಮರಳಲು ಹಾಲಿ ಅಧ್ಯಕ್ಷ ಟ್ರಂಪ್‌ಗೆ ಇದ್ದ ಕೊನೆಯ ಅವಕಾಶದ ಬಾಗಿಲು ಕೂಡಾ ಮುಚ್ಚಿದಂತಾಗಿದೆ. ಈ ಮಧ್ಯೆ ನೆವಾಡಾದಲ್ಲಿ ಕಾನೂನು ಸಮರಕ್ಕೆ ಟ್ರಂಪ್ ಬಣ ಧುಮುಕಿದೆ.

ಸದ್ಯಕ್ಕೆ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ 264 ಮತ ಪಡೆದಿದ್ದರೆ, ಟ್ರಂಪ್ ಬುಟ್ಟಿಯಲ್ಲಿ 214 ಮತಗಳಷ್ಟೇ ಇವೆ. ಬೈಡನ್ ಶೇಕಡ 50.5 ಮತ ಪಡೆದಿದ್ದರೆ, 47.9 ಮತಗಳನ್ನು ಪಡೆದಿರುವ ಟ್ರಂಪ್ ಹಿನ್ನಡೆಯಲ್ಲಿದ್ದಾರೆ.

ಜಾರ್ಜಿಯಾದಲ್ಲಿ ತಡವಾಗಿ ಬಂದ 53 ಬ್ಯಾಲೆಟ್‌ಗಳನ್ನು ಸಕಾಲಕ್ಕೆ ಬಂದ ಬ್ಯಾಲೆಟ್‌ಗಳ ಜತೆ ಮಿಶ್ರ ಮಾಡಲಾಗಿದೆ ಎಂದು ಟ್ರಂಪ್ ಬಣ ಆಪಾದಿಸಿತ್ತು. ಮಿಚಿಗನ್‌ನಲ್ಲಿ ಮತ ಎಣಿಕೆ ಸ್ಥಗಿತಗೊಳಿಸುವಂತೆ ಕೋರಿತ್ತು. ಆದರೆ ಗುರುವಾರ ಎರಡೂ ಮನವಿಗಳನ್ನು ರಾಜ್ಯ ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.

ಪ್ರಶ್ನಾರ್ಹವಾಗಿರುವ ಮತಗಳು ಅಸಿಂಧು ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ ಎಂದು ಜಾರ್ಜಿಯಾದ ಸುಪೀರಿಯರ್ ಕೋರ್ಟ್ ನ್ಯಾಯಾಧೀಶ ಜೇಮ್ಸ್ ಬಾಸ್ತೀರ್ಪು ನೀಡಿದ್ದಾರೆ. ಮಿಚಿಗನ್ ಪ್ರಕರಣದಲ್ಲಿ ಕೂಡಾ ನ್ಯಾಯಾಧೀಶರಾದ ಸಿಂಥಿಯಾ ಸ್ಟೆಫೆಲ್ಸ್ ಇಂಥದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೆವಾಡಾದ ಜನನಿಬಿಡ ಕ್ಲಾರ್ಕ್ ಕೌಂಟಿಯಲ್ಲಿ ಮತದಾನದ ವೇಳೆ ಅಕ್ರಮ ನಡೆದಿದೆ ಎಂದು ಟ್ರಂಪ್ ಬಣ ಆಪಾದಿಸಿದೆ. ಮಿಚಿಗನ್ ಹಾಗೂ ಜಾರ್ಜಿಯಾ ತೀರ್ಪಿನ ಬಗ್ಗೆ ಟ್ರಂಪ್ ವಕ್ತಾರರು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

ಮೂರೂ ಕಡೆಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿದ್ದು, ನೆವಾಡಾದಲ್ಲಿ ಬೈಡನ್ ಹಾಗೂ ಜಾರ್ಜಿಯಾದಲ್ಲಿ ಟ್ರಂಪ್ ಅಲ್ಪ ಮುನ್ನಡೆಯಲ್ಲಿದ್ದಾರೆ. ಮಿಚಿಗನ್‌ನಲ್ಲಿ ಬೈಡನ್ ಗೆಲುವು ಬಹುತೇಕ ಖಚಿತವಾಗಿದೆ. 15 ಅಧ್ಯಕ್ಷೀಯ ಮತಗಳಿರುವ ಉತ್ತರ ಕ್ಯಾಲಿಫೋರ್ನಿಯಾ ಮತ್ತು ಪೆನ್ಸಲ್ವೇನಿಯಾದಲ್ಲಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News