ಟ್ರಂಪ್ ಗಂಭೀರ ಆರೋಪಕ್ಕೆ ಯಾವುದೇ ಪುರಾವೆ ಇಲ್ಲ: ರಿಪಬ್ಲಿಕನ್ ಸೆನೆಟರ್
ನ್ಯೂಯಾರ್ಕ್: ಡೆಮಾಕ್ರಟಿಕ್ ಪಕ್ಷದವರು ಚುನಾವಣೆಯನ್ನು ತನ್ನಿಂದ ಕಸಿದುಕೊಳ್ಳುತ್ತಿದ್ದಾರೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನುಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ. ಅಧ್ಯಕ್ಷರ ಮಾತು ತುಂಬಾ ಗೊಂದಲದಿಂದ ಕೂಡಿದೆ ಎಂದು ರಿಪಬ್ಲಿಕನ್ ಸೆನೆಟರ್ ಹೇಳಿದ್ದಾರೆ.
"ಯಾವುದೇ ವ್ಯಾಪಕ ಭ್ರಷ್ಟಾಚಾರ ಅಥವಾ ವಂಚನೆ ಆಗಿರುವ ಕುರಿತು ಯಾರೊಬ್ಬರೂ ನನಗೆ ಯಾವುದೇ ಪುರಾವೆಯನ್ನು ತೋರಿಸಿಲ್ಲ'' ಎಂದು ಪೆನ್ಸಿಲ್ವೇನಿಯಾದ ಸೆನೆಟರ್ ಪ್ಯಾಟ್ ಟೂಮಿ ಇಂದು ಬೆಳಗ್ಗೆ ಸಿಬಿಎಸ್ ಗೆ ತಿಳಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಪೆನ್ಸಿಲ್ವೇನಿಯಾ ಪ್ರಮುಖ ರಾಜ್ಯವಾಗಿದೆ.
“ಕಳೆದ ರಾತ್ರಿ ಅಧ್ಯಕ್ಷರ ಭಾಷಣ ನನಗೆ ತುಂಬಾ ಕಿರಿಕಿರಿ ಎನಿಸಿತು. ಅವರ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲದೆ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಾನು ಅಧ್ಯಕ್ಷ ಟ್ರಂಪ್ ಗೆ ಮತ ಹಾಕಿದ್ದೇನೆ. ಮುಂದಿನ ಅಧ್ಯಕ್ಷರು ಇಲೆಕ್ಟೋರಲ್ ಮತಗಳನ್ನು ನ್ಯಾಯ ಸಮ್ಮತವಾಗಿ ಗೆಲ್ಲುವ ವ್ಯಕ್ತಿಯಾಗಿರಬೇಕೆಂದು ನಾನು ಬಯಸುತ್ತೇನೆ. ಅದು ಯಾರೇ ಆಗಲಿ ನಾನು ಅವರನ್ನು ಒಪ್ಪಿಕೊಳ್ಳುತ್ತೇನೆ'' ಎಂದು ಅವರು ಹೇಳಿದರು.