ಕ್ಯಾನ್ಸರ್ ಮತ್ತು ಹತ್ತು ಪ್ರಶ್ನೆಗಳು

Update: 2020-11-07 05:44 GMT

ಡಾ. ಮುರಲೀ ಮೋಹನ ಚೂಂತಾರು

ಕ್ಯಾನ್ಸರ್ ಬಗ್ಗೆ ಜನರಲ್ಲಿ ಭಯದ ಜೊತೆಗೆ ಹತ್ತು ಹಲವು ಸಂದೇಹಗಳು ಮತ್ತು ಕುತೂಹಲ ಇದ್ದೆ ಇವೆ. ಎಲ್ಲಾ ಕ್ಯಾನ್ಸರನ್ನು ಗುಣಪಡಿಸುವ ಔಷಧಿ ಇಲ್ಲದ ಕಾರಣ ಜನರು ತಲೆಗೊಂದರಂತೆ ಮಾತನಾಡುತ್ತಾರೆ. ಕ್ಯಾನ್ಸರ್‌ಗಳಲ್ಲಿ ನೂರು ವಿಧದ ಕ್ಯಾನ್ಸರ್‌ಗಳು ಇದೆ. ಕೆಲವೊಂದು ಕ್ಯಾನ್ಸರ್‌ಗಳಿಗೆ ಬರೀ ಸರ್ಜರಿಯ ಅವಶ್ಯಕತೆ ಇದ್ದಲ್ಲಿ, ಕೆಲವೊಂದು ಕ್ಯಾನ್ಸರ್‌ಗಳು ಬರೀ ಕಿಮೋಥೆರಪಿಯಿಂದಲೇ ಗುಣಮುಖವಾಗುವ ಸಾಧ್ಯತೆಯೂ ಇವೆ. ಉದಾಹರಣೆಗೆ ಲಿಂಪೋಮಾ ಎಂಬ ಕ್ಯಾನ್ಸರಿಗೆ ಸರ್ಜರಿಯ ಅವಶ್ಯಕತೆ ಇಲ್ಲ. ಬರೀ ಕಿಮೋಥೆರಪಿ ನೀಡಿ ರೋಗವನ್ನು ಗುಣಪಡಿಸಲಾಗುತ್ತದೆ. ಅದೇ ರೀತಿ ಬರ್ಕಿಟ್ಸ್ ಲಿಂಪೋಮಾ ಎಂಬ ರೋಗಕ್ಕೂ ಬರೀ ಕಿಮೋಥೆರಪಿ ಮಾತ್ರ ನೀಡಲಾಗುತ್ತದೆ. ಕ್ಯಾನ್ಸರ್ ಬರಲು ನಿರ್ದಿಷ್ಟವಾದ ಒಂದು ಕಾರಣ ಇಲ್ಲ. ಹತ್ತು ಹಲವು ಕಾರಣಗಳು ಸೇರಿ ಕ್ಯಾನ್ಸರ್ ಬರುವುದರಿಂದ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡಲು ವೈದ್ಯರಿಗೂ ಬಹಳ ಕಷ್ಟವಾಗುತ್ತದೆ.

1. ನನ್ನ ಅಜ್ಜ ಕಳೆದ 40 ವರ್ಷಗಳಿಂದ ಎಲೆಅಡಿಕೆ, ಹೊಗೆಸೊಪ್ಪುತಿನ್ನುತ್ತಿದ್ದಾರೆ ಆದರೂ ಅವರಿಗೆ ಕ್ಯಾನ್ಸರ್ ಬಂದಿಲ್ಲ ಯಾಕೆ?

* ಇದೊಂದು ಉತ್ತರ ನೀಡಲು ಬಹಳ ಕಷ್ಟಕರವಾದ ಪ್ರಶ್ನೆ. ಸಾಮಾನ್ಯವಾಗಿ ಎಲೆಅಡಿಕೆ, ತಂಬಾಕು ಸೇವಿಸುವವರಲ್ಲಿ 90 ಶೇಕಡಾ ಮಂದಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಹಾಗೆಂದ ಮಾತ್ರಕ್ಕೆ ತಂಬಾಕು ಸೇವಿಸಿದ ಎಲ್ಲರಿಗೂ ಬಾಯಿ ಕ್ಯಾನ್ಸರ್ ಬರಲೇಬೇಕೆಂದಿಲ್ಲ.

2. ನನ್ನ ತಂದೆಗೆ ಬೀಡಿ, ಸಿಗರೇಟು, ನಶ್ಯ, ತಂಬಾಕು ಅಥವಾ ಮದ್ಯಪಾನ ಮುಂತಾದ ಯಾವುದೇ ಚಟಗಳಿಲ್ಲ ಬರೀ ಶಾಖಾಹಾರಿ ಮತ್ತು ನಿರಂತರ ಯೋಗ, ಧ್ಯಾನ, ಪ್ರಾಣಾಯಾಮ ಮಾಡುತ್ತಾರೆ. ಆದರೂ ಅವರಿಗೆ ಬಾಯಿ ಕ್ಯಾನ್ಸರ್ ಬಂದಿದೆ ಯಾಕೆ?

* ಈ ಪ್ರಶ್ನೆಗೂ ವೈದ್ಯರ ಬಳಿ ಉತ್ತರ ಸಿಗಲಿಕ್ಕಿಲ್ಲ. ಕ್ಯಾನ್ಸರ್ ಬಂದಿರುವ ಎಲ್ಲಾ ರೋಗಿಗಳಿಗೂ ಚಟಗಳು ಇರಲೇಬೇಕೆಂದಿಲ್ಲ. ಕೆಲವೊಮ್ಮೆ ವಿರಳ ಸಂದರ್ಭಗಳಲ್ಲಿ ಯಾವುದೇ ದುರಭ್ಯಾಸವಿಲ್ಲದಿದ್ದರೂ ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಕೆಲವೊಂದು ಕ್ಯಾನ್ಸರ್‌ಗಳು ವಂಶಪಾರಂಪರ್ಯವಾಗಿ ಬರಬಹುದು. ಆದರೆ ಬಾಯಿ ಕ್ಯಾನ್ಸರ್ ವಂಶಪಾರಂಪರ್ಯವಾಗಿ ಬರುವ ಸಾಧ್ಯತೆ ಕಡಿಮೆ.

3. ವಿಕಿರಣದ ಕಾರಣದಿಂದ ಕ್ಯಾನ್ಸರ್ ಬರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ. ಆದರೆ ವಿಕಿರಣ ಚಿಕಿತ್ಸೆಯನ್ನೇ ಕ್ಯಾನ್ಸರಿಗೆ ನೀಡುತ್ತಾರೆ ಯಾಕೆ?

* ಸಣ್ಣ ಪ್ರಮಾಣದ ವಿಕಿರಣಕ್ಕೆ ದೇಹವನ್ನು ಪದೇ ಪದೇ ಒಡ್ಡುವುದರಿಂದ ದೇಹದಲ್ಲಿನ ಜೀವಕೋಶಗಳ ಒಳಗಿನ ವರ್ಣತಂತುವಿನ ರಚನೆಯಲ್ಲಿ ವ್ಯತ್ಯಾಸವಾಗಿ ಜೀವಕೋಶಗಳ ರೂಪಾಂತರ ಹೊಂದಿ, ತನ್ನ ವಿಭಜನೆಯ ಮೇಲಿನ ನಿಯಂತ್ರಣತಪ್ಪಿಹೋಗಿ ಕ್ಯಾನ್ಸರ್ ಜೀವಕೋಶಗಳಾಗಿ ಪರಿವರ್ತನೆ ಹೊಂದುತ್ತದೆ. ಆದರೆ ವಿಕಿರಣ ಚಿಕಿತ್ಸೆಯಲ್ಲಿ ಕ್ಯಾನ್ಸರ್ ಹೊಂದಿರುವ ಜೀವಕೋಶಗಳ ಮೇಲೆ ನಿರಂತರವಾಗಿ ವಿಕಿರಣ ನೀಡಿ, ಜೀವಕೋಶಗಳನ್ನು ನಾಶಪಡಿಸಲಾಗುತ್ತದೆ. ಇಲ್ಲಿ ಹೆಚ್ಚಿನ ವಿಕಿರಣವನ್ನು ತುಂಬ ಕಡಿಮೆ ಸಮಯದಲ್ಲಿ ಜೀವಕೋಶಗಳಿಗೆ ತಾಗುವಂತೆ ಮಾಡಿ ಕ್ಯಾನ್ಸರ್ ಜೀವಕೋಶಗಳನ್ನು ಸಾಯಿಸಲಾಗುತ್ತದೆ.

4. ನಾನು ಬರೀ ಎಲೆಅಡಿಕೆ ಮಾತ್ರ ತಿನ್ನುತ್ತೇನೆ. ಆದರೆ ತಂಬಾಕು (ಹೊಗೆಸೊಪ್ಪು) ಬಳಸುವುದಿಲ್ಲ. ಹಾಗಾಗಿ ನನಗೆ ಕ್ಯಾನ್ಸರ್ ಬರಲಿಕ್ಕಿಲ್ಲವಲ್ಲವೇ?

* ಇದೊಂದು ಯಕ್ಷ ಪ್ರಶ್ನೆ ಎಂದರೂ ತಪ್ಪಲ್ಲ. ಯಾಕೆಂದರೆ ಎಲೆಅಡಿಕೆ ಕೂಡಾ ಹೊಗೆ ಸೊಪ್ಪಿನಷ್ಟೇ ಅಪಾಯಕಾರಿ. ಬಾಯಿಯೊಳಗಿನ ನುಣುಪಾದ ವಸಡು, ನಾಲಿಗೆ ಮತ್ತು ಬಾಯಿ ಮೇಲ್ಪದರಕ್ಕೆ ನಿರಂತರವಾಗಿ ದಾಳಿಯಾದಾಗ, ಜೀವಕೋಶಗಳು ಮಾರ್ಪಾಡು ಹೊಂದಿ ಕ್ಯಾನ್ಸರ್ ಆಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ನಾನು ಬರೀ ಹೊಗೆಸೊಪ್ಪುಇಲ್ಲದ ಎಲೆಅಡಿಕೆ ತಿನ್ನುತ್ತೇನೆ. ನನಗೆ ಕ್ಯಾನ್ಸರ್ ಬರುವುದಿಲ್ಲ ಎನ್ನುವುದು ಮೂರ್ಖತನದ ಪರಮಾವಧಿ. ಅತಿಯಾದರೆ ಅಮೃತವೂ ವಿಷ ಎಂಬಂತೆ ಎಲ್ಲವನ್ನು ಹಿತಮಿತವಾಗಿ ಉಪಯೋಗಿಸಬೇಕು ಎಂಬ ಸತ್ಯವನ್ನು ಎಲ್ಲಾ ಮನುಷ್ಯರು ಮನಗಾಣಲೇಬೇಕು.

5. ಆಹಾರ ಪದ್ಧತಿಗೂ ಬಾಯಿ ಕ್ಯಾನ್ಸರ್‌ಗೂ ನೇರವಾದ ಸಂಬಂಧವಿದೆಯೇ?

* ನಮ್ಮ ಆಹಾರ ಪದ್ಧತಿಗೂ, ನಮ ್ಮಜೀವನ ಶೈಲಿಗೂ ಮತ್ತು ಬಾಯಿ ಕ್ಯಾನ್ಸರ್‌ಗೂ ನೇರವಾದ ಸಂಬಂಧವಿದೆ. ನಾವು ತಿನ್ನುವ ಆಹಾರದಲ್ಲಿ ವಿಟಮಿನ್ ಎ, ಬಿ, ಸಿ, ಇ ಮತ್ತು ಡಿ ಇದ್ದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಹಸಿ ತರಕಾರಿ, ಸೊಪ್ಪು, ಕಾಯಿಪಲ್ಲೆಗಳು, ಕ್ಯಾರೆಟ್, ಮೂಲಂಗಿ ಮುಂತಾದ ತರಕಾರಿಗಳಲ್ಲಿ ಕ್ಯಾನ್ಸರ್ ನಿರೋಧಕ ಶಕ್ತಿ ಇರುವ ಆ್ಯಂಟಿಆ್ಯಕ್ಸಿಡೆಂಟ್ ಎಂಬ ರಾಸಾಯನಿಕ ಇರುತ್ತದೆ. ಈ ಕಾರಣದಿಂದಲೇ ಹಸಿ ತರಕಾರಿ, ಹಣ್ಣು, ಸೊಪ್ಪು, ಕಾಯಿಪಲ್ಯೆಗಳನ್ನು ಹೆಚ್ಚು ಸೇವಿಸಬೇಕು. ಆಹಾರ ಕೆಡದಂತೆ ಬಳಸುವ ರಾಸಾಯನಿಕಗಳು ಮತ್ತು ಬಣ್ಣ ಮಿಶ್ರಿತ ಸಿದ್ಧ ಆಹಾರಗಳು ಜೀವಕೋಶಗಳ ಮೇಲೆ ದುಷ್ಪರಿಣಾಮ ಬೀರಿ, ಜೀವಕೋಶಗಳು ರೂಪಾಂತರ ಹೊಂದುವಂತೆ ಪ್ರಚೋದಿಸಬಹುದು.

6. ಬಾಯಿಯ ಸ್ವಚ್ಛತೆಗೂ, ಬಾಯಿಯ ಕ್ಯಾನ್ಸರ್‌ಗೂ ಸಂಬಂಧ ಇದೆಯೇ?

* ಖಂಡಿತವಾಗಿಯೂ ಇದೆ. ಬಾಯಿಯನ್ನು ಯಾವಾಗಲೂ ಸ್ವಚ್ಛವಾಗಿ ಇಡತಕ್ಕದ್ದು, ಬಾಯಿ ಸ್ವಚ್ಛವಾಗಿರದಿದ್ದಲ್ಲಿ ಬಾಯಿಯಲ್ಲಿ ವೈರಾಣುಗಳು ವಿಜೃಂಬಿಸಿ, ಕ್ಯಾನ್ಸರ್ ಬೆಳೆಯಲು ಪೂರಕವಾದ ವಾತಾವರಣ ಕಲ್ಪಿಸಿಕೊಡಬಹುದು. ಹ್ಯೂಮನ್ ಪಾಪಿಲೋಮ ಎಂಬ ವೈರಾಣು ಕ್ಯಾನ್ಸರ್‌ಕಾರಕ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.

7. ಬಾಯಿ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚು ಬರುತ್ತದೆ, ಮಹಿಳೆಯರಿಗೆ ಕಡಿಮೆ ಬರುತ್ತದೆ ಯಾಕೆ?

* ನಮ್ಮ ಭಾರತದೇಶದಲ್ಲಿ ಪುರುಷರು ಜಾಸ್ತಿ ತಂಬಾಕು ಮತ್ತು ಧೂಮಪಾನ ಮಾಡುವ ಕಾರಣದಿಂದ ಪುರುಷರಿಗೆ ಹೆಚ್ಚು ಬಾಯಿ ಕ್ಯಾನ್ಸರ್ ಬರುತ್ತದೆ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಹೆಂಗಸರೂ ಗಂಡಸರಷ್ಟೆ ಧೂಮಪಾನ, ತಂಬಾಕು ಬಳಕೆ ಮಾಡುವುದರಿಂದ ಇಬ್ಬರಿಗೂ ಬಾಯಿ ಕ್ಯಾನ್ಸರ್ ಬರುವ ಸಮಾನ ಸಾಧ್ಯತೆ ಇದೆ.

8. ಗೋಮೂತ್ರ ಕುಡಿಯುವುದರಿಂದ ಬಾಯಿ ಕ್ಯಾನ್ಸರ್ ಸಂಪೂರ್ಣವಾಗಿ ಗುಣವಾಗುತ್ತದೆ, ಸರ್ಜರಿ ಅಗತ್ಯವಿಲ್ಲ ಎನ್ನುತ್ತಾರೆ. ಇದು ನಿಜವೇ?

* ಗೋಮೂತ್ರ ಕ್ಯಾನ್ಸರ್ ಗುಣಪಡಿಸುತ್ತದೆ ಎಂಬುದರ ಬಗ್ಗೆ ಯಾವುದೇ ಪುರಾವೆ ಇಲ್ಲ ಮತ್ತು ದೀರ್ಘಕಾಲಿಕ ಸಂಶೋಧನೆ ನಡೆದಿಲ್ಲ. ಸರ್ಜರಿ ಬಾಯಿ ಕ್ಯಾನ್ಸರಿಗೆ ಸರಿಯಾದ ಚಿಕಿತ್ಸೆ ಎಂದು ಅಂಕಿ-ಅಂಶಗಳಿಂದ ಮತ್ತು ಚರಿತ್ರೆೆಯಿಂದ ಸಾಬೀತಾಗಿದೆ.

9. ಮೊಬೈಲ್ ಫೋನ್ ಜಾಸ್ತಿ ಬಳಸುವುದರಿಂದ ಕ್ಯಾನ್ಸರ್ ಬರಲು ಸಾಧ್ಯತೆ ಇದೆಯಾ?

* ಈ ವಿಚಾರದ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆಯುತ್ತಿವೆೆ. ದಿನವೊಂದರಲ್ಲಿ 6ರಿಂದ 10 ಗಂಟೆಗಳ ಕಾಲ ಮೊಬೈಲ್ ಬಳಸಿದಲ್ಲಿ, ಬಹಳಷ್ಟು ವಿಕಿರಣ ದೇಹಕ್ಕೆ ಮತ್ತು ಮೆದುಳಿಗೆ ಸೇರಿ ಜೀವಕೋಶಗಳಿಗೆ ಹಾನಿ ಮಾಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಬಹುದು.

10. ನಿರಂತರವಾಗಿ ಆಯಿಲ್ ಪುಲ್ಲಿಂಗ್ ಮಾಡುವುದ ರಿಂದ ಬಾಯಿ ಕ್ಯಾನ್ಸರ್ ಬರುವುದಿಲ್ಲ ಎನ್ನುತ್ತಾರೆ. ಇದು ನಿಜವೇ?

* ಆಯಿಲ್ ಪುಲ್ಲಿಂಗ್ ಮತ್ತು ಬಾಯಿ ಕ್ಯಾನ್ಸರ್ ಬರದಿರುವುದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಯಾವುದೇ ಒಂದು ವಿಚಾರದ ಬಗ್ಗೆ ಸ್ಪಷ್ಟತೆ ಮತ್ತು ಸತ್ಯ ವಿಚಾರ ತಿಳಿಯಬೇಕಾದಲ್ಲಿ, ನಿರಂತರ ಸಂಶೋಧನೆ ನಡೆದು, ಪರಿಪೂರ್ಣ ಮಾಹಿತಿ ದೊರಕಿದ ಬಳಿಕವೇ ಸತ್ಯ ಹೊರ ಬರುತ್ತದೆ. ಆಯಿಲ್ ಪುಲ್ಲಿಂಗ್ ಮಾಡಿದರೆ ಬಾಯಿ ಕ್ಯಾನ್ಸರ್ ಬರುವುದಿಲ್ಲ ಎಂಬ ವಿಚಾರಕ್ಕೆ ಯಾವುದೇ ಪುರಾವೆ ಇರುವುದಿಲ್ಲ.

ಕೊನೆಮಾತು

ಕ್ಯಾನ್ಸರ್ ಅಥವಾ ಅರ್ಬುದ ರೋಗ ಮಾರಣಾಂತಿಕ ರೋಗವಾಗಿದ್ದರೂ ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಖಂಡಿತವಾಗಿಯೂ ಗುಣಪಡಿಸಬಹುದು. ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಖಂಡಿತವಾಗಿಯೂ ಕ್ಯಾನ್ಸರ್ ರೋಗವನ್ನು ಜಯಿಸಬಹುದು. ಕ್ಯಾನ್ಸರ್ ರೋಗ ಬಂದಿದೆ ಎಂದಾದ ಕೂಡಲೇ ಮಾನಸಿಕವಾಗಿ ಕುಗ್ಗಿ ಹೋಗಿ ತನ್ನ ದಿನ ಮುಗಿಯಿತು ಎನ್ನುವ ಮನೋಭಾವ ಖಂಡಿತಾ ಸಲ್ಲದು. ಬಡತನ, ಅನಕ್ಷರತೆ, ಅಜ್ಞಾನ, ಮೂಢ ನಂಬಿಕೆಗಳಿಂದ ತುಂಬಿರುವ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್ ರೋಗ ಎರಡನೇ ಅತಿ ದೊಡ್ಡ ರೋಗವಾಗಿ ಹೊರಹೊಮ್ಮಿರುವುದಂತೂ ಸತ್ಯ. (ಹೃದಯಾಘಾತ ಮಾರಣಾಂತಿಕ ಕಾಯಿಲೆಗಳಲ್ಲಿ ಜಾಗತಿಕವಾಗಿ ಮೊದಲನೇ ಸ್ಥಾನದಲ್ಲಿದೆ) ಕ್ಯಾನ್ಸರ್ ಸಾಂಕ್ರಾಮಿಕ ರೋಗವಲ್ಲದಿದ್ದರೂ, ಅನಾರೋಗ್ಯಕರ ಜೀವನ ಶೈಲಿ. ಒತ್ತಡದ ಬದುಕು, ವಿಪರೀತ ಪೈಪೋಟಿಯ ಜೀವನ ಪದ್ಧತಿ, ಬಿಡುವಿಲ್ಲದ ಅನಿಯಂತ್ರಿತ ಯಾಂತ್ರಿಕ ಬದುಕು, ತಂಬಾಕು ಉತ್ಪನ್ನಗಳ ದುರ್ಬಳಕೆಯಿಂದಾಗಿ ಅರ್ಬುದ ರೋಗ ಮನುಷ್ಯಕುಲದ ಮೇಲೆ ಮರಣಮೃದಂಗ ಬಾರಿಸುತ್ತಿರುವುದಂತೂ ಸತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವೈದ್ಯ ಮತ್ತು ಪ್ರಜೆಯೂ ತನ್ನ ಹೊಣೆಗಾರಿಕೆ ಅರಿತು ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಬೇಕು. ಕ್ಯಾನ್ಸರ್ ಪೀಡಿತರಿಗೆ ಸಕಾಲದಲ್ಲಿ ಚಿಕಿತ್ಸೆ, ಸಾಂತ್ವನ ದೊರಕಿದಲ್ಲಿ ಅರ್ಬುದ ರೋಗವನ್ನು ಖಂಡಿತ ಜಯಿಸಬಹುದು.

Writer - ಡಾ. ಮುರಲೀ ಮೋಹನ ಚೂಂತಾರು

contributor

Editor - ಡಾ. ಮುರಲೀ ಮೋಹನ ಚೂಂತಾರು

contributor

Similar News

ಜಗದಗಲ
ಜಗ ದಗಲ