ಹೈಬ್ರಿಡ್ ಬೆದರಿಕೆಗಳಿಗೆ ಸಿದ್ಧರಾಗಿರಿ:ಸಶಸ್ತ್ರಪಡೆಗಳಿಗೆ ವಾಯುಪಡೆ ಮುಖ್ಯಸ್ಥ ಆರ್.ಕೆ.ಭದೌರಿಯಾ ಕರೆ
ಪುಣೆ,ನ.7: ಇಂದಿನ ಯುದ್ಧರಂಗವು ಅನಿರೀಕ್ಷಿತ ಭದ್ರತಾ ಸನ್ನಿವೇಶಗಳೊಂದಿಗೆ ಅತ್ಯಂತ ಸಂಕೀರ್ಣವಾಗಿದೆ ಮತ್ತು ಬಹು ಆಯಾಮಗಳಿಂದ ಕೂಡಿದೆ ಎಂದು ಶನಿವಾರ ಇಲ್ಲಿ ಹೇಳಿದ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್.ಕೆ.ಭದೌರಿಯಾ ಅವರು,ಬಹು ಮುಂಚೂಣಿ ರಂಗಗಳಿಂದ ಎದುರಾಗುವ ಹೈಬ್ರಿಡ್ ಬೆದರಿಕೆಗಳನ್ನು ಎದುರಿಸಲು ಸಿದ್ಧರಾಗಿರುವಂತೆ ಸಶಸ್ತ್ರ ಪಡೆಗಳಿಗೆ ಕರೆ ನೀಡಿದರು.
ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ (ಸಿಡಿಎಸ್)ರ ಹುದ್ದೆಯನ್ನು ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಯನ್ನು ಸೃಷ್ಟಿಸಿರುವುದನ್ನು ಪ್ರಶಂಸಿಸಿದ ಅವರು,ಇದು ದೇಶದಲ್ಲಿ ಹೆಚ್ಚಿನ ರಕ್ಷಣಾ ಸುಧಾರಣೆಗಳ ಅತ್ಯಂತ ಐತಿಹಾಸಿಕ ಹಂತದ ಆರಂಭವಾಗಿದೆ ಎಂದರು.
ರಾಷ್ಟ್ರೀಯ ರಕ್ಷಣಾ ಅಕಾಡಮಿ (ಎನ್‌ಡಿಎ)ಯ 139ನೇ ಘಟಿಕೋತ್ಸವದಲ್ಲಿ ಮಾತನಾಡುತ್ತಿದ್ದ ಅವರು,ಎನ್‌ಡಿಎ ಕೇವಲ ನಾಯಕತ್ವವನ್ನು ಬೆಳೆಸುವ ತಾಣವಲ್ಲ,ಅದು ಜಂಟಿ ಕಾರ್ಯನಿರ್ವಹಣೆಯನ್ನು ಬೆಳೆಸುವ ನಿಜವಾದ ತಾಣವೂ ಆಗಿದೆ. ಎನ್‌ಡಿಎಯಲ್ಲಿ ದೊರೆಯುವ ಜಂಟಿ ತರಬೇತಿಯ ಅಗಾಧ ಅನುಭವವನ್ನು ಆಯಾ ಅಕಾಡಮಿಗಳಿಗೆ ಲಭ್ಯವಾಗಿಸಬೇಕಿದೆ. ಉದಯೋನ್ಮುಖ ಮಿಲಿಟರಿ ವೃತ್ತಿಪರರಾಗಿ ನೀವು ವಿಶ್ವಾದ್ಯಂತ ಭೂರಾಜಕೀಯ ಮಂಥನಗಳು ನಮ್ಮ ನೆರೆಹೊರೆಯ ಭದ್ರತಾ ವಾತಾವರಣದ ಮೇಲೆ ನೇರ ಪರಿಣಾಮವನ್ನು ಹೊಂದಿರುತ್ತದೆ ಎನ್ನುವುದನ್ನು ನೀವು ಅರಿಯಲಾರಂಭಿಸಬೇಕು ಎಂದರು.
ವಿವಿಧ ರಂಗಗಳಿಂದ ಎದುರಾಗುವ ಹೈಬ್ರಿಡ್ ಬೆದರಿಕೆಗಳನ್ನು ಎದುರಿಸಲು ನಮ್ಮ ಸಶಸ್ತ್ರ ಪಡೆಗಳು ಸಿದ್ಧವಾಗಿರಬೇಕು. ಇದಕ್ಕೆ ಸದಾ ಕಾಲ ಎಲ್ಲ ಹಂತಗಳಲ್ಲಿ ಅತ್ಯುನ್ನತ ಮಟ್ಟದ ಜ್ಞಾನ,ಅರ್ಪಣೆ,ಬದ್ಧತೆ,ತ್ಯಾಗ ಮತ್ತು ನಾಯಕತ್ವ ಇವು ಕಡ್ಡಾಯವಾಗಿವೆ. ಪ್ರತಿಯೊಂದು ಸೇವೆ ಮತ್ತು ರಾಷ್ಟ್ರ ನಿಮ್ಮಿಂದ ಇದನ್ನೇ ನಿರೀಕ್ಷಿಸುತ್ತದೆ ಎಂದು ಭದೌರಿಯಾ ಹೇಳಿದರು.