ತಮಿಳುನಾಡು: ಕಸ್ಟಡಿಯಲ್ಲಿ ಕೈದಿಯ ಸಾವಿಗೆ ಪೊಲೀಸರ ಚಿತ್ರಹಿಂಸೆ ಕಾರಣವೆಂದು ಕುಟುಂಬದ ಆರೋಪ

Update: 2020-11-07 17:42 GMT

ಚೆನ್ನೈ,ನ.7: ನೈವೇಲಿ ಟೌನ್‌ಷಿಪ್ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ವ್ಯಕ್ತಿಯ ಸಾವಿಗೆ ಚಿತ್ರಹಿಂಸೆ ಕಾರಣವೆಂದು ಆತನ ಕುಟುಂಬವು ಆರೋಪಿಸಿದೆ.

ಕುಡಲೂರಿನ ಕದಂಪುಲಿಯೂರು ನಿವಾಸಿ ಸೆಲ್ವಂ (40) ಎಂಬಾತನನ್ನು ಅ.28ರಂದು ಕಳ್ಳತನದ ಆರೋಪದಲ್ಲಿ ನೈವೇಲಿ ಟೌನ್‌ಷಿಪ್ ಪೊಲೀಸರು ಬಂಧಿಸಿದ್ದು,ಬಳಿಕ ವಿರುಧಾಚಲಂ ಉಪ ಕಾರಾಗೃಹದಲ್ಲಿ ಇರಿಸಲಾಗಿತ್ತು.

ತನ್ನ ವಿರುದ್ಧ ಐದು ಪ್ರಕರಣಗಳನ್ನು ಹೊಂದಿದ್ದ ಸೆಲ್ವಂ ಜೈಲಿನ ಕೋಣೆಯಲ್ಲಿದ್ದಾಗ ಫಿಟ್ಸ್ ಉಲ್ಬಣಗೊಂಡಿದ್ದರಿಂದ ಆತನನ್ನು ವಿರುಧಾಚಲಂ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಜೈಲು ಅಧಿಕಾರಿ ಶಶಿಕುಮಾರ್ ಹೇಳಿದ್ದಾರೆ. ಆದರೆ ಪೊಲೀಸರು ಜೈಲಿನಲ್ಲಿ ತನ್ನ ಪತಿಯನ್ನು ಬರ್ಬರವಾಗಿ ಥಳಿಸಿದ್ದರು ಎಂದು ಸೆಲ್ವಂ ಪತ್ನಿ ಪ್ರಭಾ ಆರೋಪಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿರುವ ಪ್ರಭಾ,ಸೆಲ್ವಂ ಗೋಡಂಬಿ ಕಾರ್ಮಿಕನಾಗಿದ್ದ ಮತ್ತು ವ್ಯವಹಾರ ನಿಮಿತ್ತ ವಡಲೂರಿಗೆ ತೆರಳಿದ್ದಾಗ ಸುಳ್ಳು ಆರೋಪಕ್ಕೆ ಬಂಧಿಸಲ್ಪಟ್ಟಿದ್ದ ಎಂದು ತಿಳಿಸಿದ್ದಾರೆ.

ಅ.29ರಂದು ತಾನು ನೈವೇಲಿ ಠಾಣೆಗೆ ತೆರಳಿದ್ದು,10 ಪವನ್ ತೂಕದ ಚಿನ್ನದ ಸರವನ್ನು ನೀಡಿದರೆ ಸೆಲ್ವಂ ವಿರುದ್ಧ ಆರೋಪಗಳನ್ನು ಕೈಬಿಡುವುದಾಗಿ ಪೊಲೀಸರು ಹೇಳಿದ್ದರು. ತಾನು ನಿರಾಕರಿಸಿದಾಗ ಪೊಲೀಸರು ತನ್ನನ್ನು ಮತ್ತು ತನ್ನ ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ತಮ್ಮ ಚಿತ್ರಗಳನ್ನು ತೆಗೆದುಕೊಂಡಿದ್ದರು ಮತ್ತು ಖಾಲಿ ಕಾಗದದ ಮೇಲೆ ಬಲವಂತದಿಂದ ತನ್ನ ಸಹಿಯನ್ನು ತೆಗೆದುಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿರುವ ಪ್ರಭಾ,ನ.2ರಂದು ವಿರುಧಾಚಲಂ ಜೈಲಿನಲ್ಲಿ ತಾನು ಪತಿಯನ್ನು ಭೇಟಿಯಾದಾಗ ಆತ ನಿಶ್ಶಕ್ತನಾಗಿದ್ದ ಮತ್ತು ಆತನ ಕುತ್ತಿಗೆ ಊದಿಕೊಂಡಿತ್ತು. ಆತನಿಗೆ ಆಹಾರ ಸೇವಿಸಲೂ ಸಾಧ್ಯವಾಗುತ್ತಿರಲಿಲ್ಲ. ಇದರ ಹಿಂದೆ ಪೊಲೀಸರಿದ್ದಾರೆ,ಅವರು ತನ್ನ ಪತಿಯನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

 ಮೃತನ ಬಂಧುಗಳು ಆಸ್ಪತ್ರೆಗೆ ಬರಲು ನಿರಾಕರಿಸಿದ್ದರಿಂದ ಸೆಲ್ವಂ ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಿಲ್ಲ ಎಂದು ಬಲ್ಲ ಮೂಲಗಳು ಹೇಳಿರುವುದನ್ನು ವರದಿಗಳು ಉಲ್ಲೇಖಿಸಿವೆ.

ಕೈದಿಗಳಿಗೆ ಚಿತ್ರಹಿಂಸೆ ನೀಡುವುದರಲ್ಲಿ ತಮಿಳುನಾಡು ಪೊಲೀಸರು ಕುಖ್ಯಾತಿಯನ್ನು ಹೊಂದಿದ್ದಾರೆ. ಕಸ್ಟಡಿ ಸಾವಿನ ಹಲವಾರು ಘಟನೆಗಳು ಅಲ್ಲಿ ನಡೆಯುತ್ತಲೇ ಇರುತ್ತವೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News