ಅಗಲಿದ ಪುತ್ರನ ಅಚ್ಚುಮೆಚ್ಚಿನ ಪ್ರಾರ್ಥನಾ ಗೀತೆಯನ್ನು ಹಾಡಿದ ಬೈಡನ್

Update: 2020-11-08 16:44 GMT

ವಾಶಿಂಗ್ಟನ್,ನ.8: ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ತನ್ನ ವಿಜಯೋತ್ಸವದ ಭಾಷಣದಲ್ಲಿ, ತನ್ನ ದಿವಂಗತ ಪುತ್ರ ಬ್ಯೂ ಅವರ ಅಚ್ಚುಮೆಚ್ಚಿನ ಕ್ರಿಶ್ಚಿಯನ್ ಪ್ರಾರ್ಥನಾ ಗೀತೆ ‘‘ ಆನ್ ಇಗಲ್ಸ್ ವಿಂಗ್ಸ್’’ ಹಾಡನ್ನು ಹಾಡಿದರು. ಈ ಸ್ತುತಿ ಗಾಯನವು ಕೋವಿಡ್-19 ಸಾಂಕ್ರಾಮಿಕದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಸಾವಿರಾರು ಅಮೆರಿಕನ್ನರಿಗೆ ಸಾಂತ್ವಾನ ನೀಡಲಿದೆಯೆಂಬ ಆಶಾವಾದವನ್ನು ವ್ಯಕ್ತಪಡಿಸಿದರು.

‘‘ನನ್ನ ಹೃದಯವು ನಿಮ್ಮಲ್ಲಿನ ಪ್ರತಿಯೊಬ್ಬರಿಗೂ ಮಿಡಿಯುತ್ತಿದೆ ಎಂದು ಕೊರೋನ ವೈರಸ್ ಸಂತ್ರಸ್ತರನ್ನು ಉದ್ದೇಶಿಸಿ ಬೈಡೆನ್ ಹೇಳಿದರು.

ತನ್ನ ಚುನಾವಣಾ ಪ್ರಚಾರದ ಕೊನೆಯ ದಿನಗಳುದ್ದಕ್ಕೂ ತಾನು ಈ ಪ್ರಾರ್ಥನಾ ಗೀತೆಯಿಂದ ಪ್ರೇರಿತನಾಗಿದ್ದಾಗಿ 77 ವರ್ಷದ ಬೈಡೆನ್ ಹೇಳಿದರು.

ಬೈಡೆನ್ ಪುತ್ರ ಬ್ಯೂ ಅವರು ಇರಾಕ್ ಯುದ್ಧದಲ್ಲಿ ಅಮೆರಿಕದ ಸೇನಾನಿಯಾಗಿ ಪಾಲ್ಗೊಂಡಿದ್ದರು.ಡೆಲಾವೆರ್ ರಾಜ್ಯದ ಅಟಾರ್ನಿ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದ ಅವರು ತನ್ನ 46ನೇ ವಯಸ್ಸಿನಲ್ಲಿ ಮೆದುಳು ಜ್ವರದಿಂದ ಸಾವನ್ನಪ್ಪಿದ್ದರು.

   ಅಮೆರಿಕವು ಕೊರೋನ ವೈರಸ್ ಸಾಂಕ್ರಾಮಿಕದಿಂದ ಅತ್ಯಂತ ಬಾಧಿತವಾದ ದೇಶವಾಗಿದ್ದು, ಅಲ್ಲಿ 98,49,000ಕ್ಕೂ ಅಧಿಕ ಕೋವಿಡ್-19 ಸೋಂಕಿನ ಪ್ರಕರಣಗಳು ವರದಿಯಾಗಿವೆ ಹಾಗೂ 2,37,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News