ಬಿಜೆಪಿ ಬತ್ತಳಿಕೆಯ ಹೊಸ ಅಸ್ತ್ರ 'ಲವ್ ಜಿಹಾದ್'

Update: 2020-11-09 07:51 GMT

‘ಲವ್ ಜಿಹಾದ್’ ಎಂಬುದು ಸಂಘ ಪರಿವಾರ ತನ್ನ ಹಿಡನ್ ಅಜೆಂಡಾ ಜಾರಿಗೆ ತರಲು ಸೃಷ್ಟಿಸಿದ ಕಟ್ಟು ಕತೆ. ಹಿಂದೂ,ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ, ಸಿಖ್ ಯುವಕ-ಯುವತಿಯರು ಪರಸ್ಪರ ಇಷ್ಟಪಟ್ಟು ಮದುವೆಯಾದರೆ ಅದು ಪ್ರೀತಿ ವಿವಾಹ. ಅದಕ್ಕೆ ‘ಲವ್ ಜಿಹಾದ್’ ಎಂದು ಬಣ್ಣ ಬಳಿಯುವುದು ರಾಜಕೀಯ ಹುನ್ನಾರ ಮಾತ್ರವಲ್ಲದೆ ಬೇರೇನೂ ಅಲ್ಲ. ಈ ದೇಶದ ಬಹುತ್ವವನ್ನು ನಾಶ ಮಾಡಿ ಬಾಬಾಸಾಹೇಬರು ರೂಪಿಸಿದ ಸರ್ವರ ಏಳಿಗೆಯ ಸಂವಿಧಾನವನ್ನು ಸಮಾಧಿ ಮಾಡಲು ಕೋಮುವಾದಿ ಶಕ್ತಿಗಳು ಇಂತಹ ಹುಯಿಲೆಬ್ಬಿಸುತ್ತಿವೆ.


ಕೊರೋನ ನಂತರ ತಲ್ಲಣಗೊಂಡಿರುವ ಭಾರತದ ಸಾಮಾಜಿಕ ಬದುಕು ಇನ್ನೂ ಸಹಜತೆಗೆ ಮರಳಿಲ್ಲ.ಇದರ ಪರಿಣಾಮವಾಗಿ ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಂತಹ ಆತಂಕದ ಸನ್ನಿವೇಶದಲ್ಲಿ ಚುನಾಯಿತ ಸರಕಾರವೊಂದು ಭೀತಿಗೊಳಗಾದ, ಸಂಕಷ್ಟದ ಸುಳಿಗೆ ಸಿಲುಕಿರುವ ಜನರ ನೆರವಿಗೆ ಬರಬೇಕು. ಆದರೆ ನೆರವಿಗೆ ಬರುವುದು ಒತ್ತಟ್ಟಿಗಿರಲಿ ಈ ಸರಕಾರದ ಮೊದಲ ಆದ್ಯತೆ ಕೊರೋನ ನಿಯಂತ್ರಣವಲ್ಲ, ಅದರ ಬದಲಿಗೆ ಲವ್ ಜಿಹಾದ್ ತಡೆಯಲು ತುರ್ತು ಕಾನೂನು ತರಲು ಹೊರಟಿದೆ. ಸಚಿವರಾದ ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ಮಾತ್ರವಲ್ಲ ಮುಖ್ಯಮಂತ್ರಿ ಯಡಿಯೂರಪ್ಪನವರೇ ಇಂತಹ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ನಡೆದ ಯಾವುದೇ ವರದಿಗಳು ಬಂದಿಲ್ಲ ಎಂದು ಕೇಂದ್ರ ಸರಕಾರವೇ ಈ ವರ್ಷದ ಆರಂಭದಲ್ಲಿ ಸಂಸತ್ತಿನಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿತ್ತು. ಆದರೂ ಬಿಜೆಪಿ ನಾಯಕರು ಲವ್ ಜಿಹಾದ್ ಎಂಬ ಅಂತೆ ಕಂತೆಯ ಕತೆ ಕಟ್ಟಿ ಯಾಕೆ ಹೇಳಿಕೆಗಳನ್ನು ನೀಡುತ್ತಾರೋ ಅರ್ಥ ವಾಗುತ್ತಿಲ್ಲ.
ಬಿಜೆಪಿ ನಾಯಕರ ಪಡಿಪಾಟಲು ಅರ್ಥವಾಗುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿದೆ. ನಿರುದ್ಯೋಗ ತಾಂಡವವಾಡುತ್ತಿದೆ, ಬೆಲೆ ಏರಿಕೆ ಮಿತಿ ಮೀರಿದೆ. ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಇಂತಹ ಸನ್ನಿವೇಶದಲ್ಲಿ ಬಿಜೆಪಿ ಅಥವಾ ಅದನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸುವ ನಾಗಪುರದ ಶಕ್ತಿ ಕೇಂದ್ರ ಅತ್ಯಂತ ಜಾಣತನದಿಂದ ಇಂತಹ ದಾಳಗಳನ್ನು ಉರುಳಿಸುತ್ತದೆ.

ಸಂಕಟ ಬಂದಾಗ ವೆಂಕಟರಮಣ ಎಂಬಂತೆ ನಿಜವಾದ ಸಮಸ್ಯೆಗಳಿಂದ ಜನರನ್ನು ವಿಮುಖರನ್ನಾಗಿ ಮಾಡಲು ಮತಾಂತರ, ಗೋ ರಕ್ಷಣೆ, ಮಂದಿರ ನಿರ್ಮಾಣ ಇತ್ಯಾದಿಗಳ ಜೊತೆಗೆ ಈಗ ಹೊಸದಾಗಿ ‘ಲವ್ ಜಿಹಾದ್’ ಎಂಬ ಅಸ್ತ್ರವನ್ನು ಬಿಜೆಪಿ ಪ್ರಯೋಗಿಸುತ್ತಿದೆ.

ಇದು ಸಮಸ್ಯೆಗಳ ಸುಳಿಯಿಂದ ಪಾರಾಗಲು ಬಳಸುವ ತಾತ್ಕಾಲಿಕ ಗುರಾಣಿಯಾಗಿದ್ದರೆ ಅಷ್ಟು ತೆಲೆ ಕೆಡಿಸಿಕೊಳ್ಳಬೇಕಾಗಿರಲಿಲ್ಲ. ಇದರಲ್ಲಿ ಬರೀ ರಾಜಕೀಯ ತಂತ್ರಗಾರಿಕೆ ಮಾತ್ರ ಅಡಗಿಲ್ಲ. ಆರೆಸ್ಸೆಸ್‌ನ ಅಂತಿಮ ಗುರಿಯಾದ ಮನುವಾದಿ ಹಿಂದೂರಾಷ್ಟ್ರ ನಿರ್ಮಾಣದ ದೂರಗಾಮಿ ಕಾರ್ಯಸೂಚಿ ಇದರ ಹಿಂದಿದೆ. ಅದಕ್ಕಾಗಿ ಹಿಂದೂ, ಮುಸ್ಲಿಮ್ ಮತ್ತು ಕ್ರೈಸ್ತರನ್ನು ವಿಭಜಿಸುವ ಇಂತಹ ತಂತ್ರಗಳನ್ನು ಅದು ಪ್ರಯೋಗಿಸುತ್ತಲೇ ಇರುತ್ತದೆ.

ಈಗ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಾದ ಉತ್ತರ ಪ್ರದೇಶ, ಹರ್ಯಾಣ, ಮಧ್ಯಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳು ‘ಲವ್ ಜಿಹಾದ್’ ತಡೆಗಾಗಿ ಇನ್ನಷ್ಟು ಕಟ್ಟುನಿಟ್ಟಿನ ಕಾನೂನು ತರಲು ಹೊರಟಿವೆ. ಹಿಂದೂ ಮಹಿಳೆಯರ ರಕ್ಷಣೆಗಾಗಿ ಇಂತಹ ಕಾನೂನು ತರುತ್ತಿರುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.ಮತಾಂತರ ಮಾಡಲು ಮುಸ್ಲಿಮ್ ಯುವಕರು ಹಿಂದೂ ಯುವತಿಯರನ್ನು ಮದುವೆಯಾಗುತ್ತಿರುವುದರಿಂದ ಇಂತಹ ಕಾನೂನು ತರುತ್ತಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿದ್ದಾರೆ.

‘ಲವ್ ಜಿಹಾದ್’ ತಡೆಗೆ ಇಂತಹ ಕಾನೂನು ತರುವುದು ಅಗತ್ಯವಿಲ್ಲ ಎಂದು ಯಡಿಯೂರಪ್ಪ ನವರಿಗೂ ಗೊತ್ತಿದೆ. ಆದರೆ ನಾಗಪುರದ ಲಕ್ಷ್ಮಣ ರೇಖೆ ದಾಟಿದರೆ ಕುರ್ಚಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರೂ ಗೋಣು ಅಲ್ಲಾಡಿಸಿದ್ದಾರೆ.

ಮಹಿಳೆಯರ ಬಗ್ಗೆ ಅದರಲ್ಲೂ ಹಿಂದೂ ಮಹಿಳೆಯರ ಬಗ್ಗೆ ಬಿಜೆಪಿ ನಾಯಕರಲ್ಲಿ ದಿಢೀರ್ ಹುಟ್ಟಿದ ಕಾಳಜಿ ಎಲ್ಲ ಹಿಂದೂ ಮಹಿಳೆಯರಿಗೂ ಅನ್ವಯವಾಗುವುದಿಲ್ಲ. ಅದು ಮುಸ್ಲಿಮ್ ಹುಡುಗರನ್ನು ಮದುವೆಯಾದ ಹುಡುಗಿಯರಿಗೆ ಮಾತ್ರ ಅನ್ವಯವಾಗುತ್ತದೆ. ಉದಾಹರಣೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥರ ಕಾಳಜಿ ಎಲ್ಲರಿಗೂ ಗೊತ್ತಿದೆ. ಹಾಥರಸ್‌ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಾಗ, ಆಕೆಯ ನಾಲಿಗೆ ಕತ್ತರಿಸಿ ಹಾಕಿದಾಗ ಇವರು ಅತ್ಯಾಚಾರ ಮಾಡಿದ ಮೇಲ್ಜಾತಿಯ ಠಾಕೂರ್ ಪುಂಡರ ರಕ್ಷಣೆಗೆ ಯಾವ ಪರಿ ಓಡಾಡಿದ್ದರು, ಹೇಗೆ ಈ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರು ಎಂದು ಎಲ್ಲರಿಗೂ ಗೊತ್ತಿದೆ.ಇನ್ನು ಉತ್ತರ ಭಾರತ ಮಾತ್ರವಲ್ಲ ಕರ್ನಾಟಕದಂತಹ ರಾಜ್ಯದಲ್ಲೂ ನಡೆಯುವ ಮರ್ಯಾದೆ ಗೇಡು ಹತ್ಯೆಗಳ ಬಗ್ಗೆ ಬಿಜೆಪಿ ನಾಯಕರಾಗಲಿ ಸಂಘಪರಿವಾರದ ಕಟ್ಟಾಳುಗಳಾಗಲಿ ಎಂದೂ ಖಂಡಿಸಿ ಮಾತಾಡಿಲ್ಲ. ಮರ್ಯಾದೆಗೇಡು ಹತ್ಯೆ ತಡೆಯಲು ಉಗ್ರ ಕಾನೂನು ಬೇಕೆಂದು ಇವರಿಗೆ ಎಂದೂ ಅನಿಸಿಲ್ಲ.
ಅದು ಹೋಗಲಿ ಪ್ರೀತಿ ಪ್ರೇಮದ ಆಸೆಯೊಡ್ಡಿ ‘ಲವ್ ಜಿಹಾದ್’ ಹೆಸರಲ್ಲಿ ಮತಾಂತರ ಮಾಡಿದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪಹೇಳಿದ್ದಾರಲ್ಲವೆ, ಹಾಗಿದ್ದರೆ ಇಂತಹ ಎಷ್ಟು ಪ್ರಕರಣಗಳು ನಡೆದಿವೆ? ಎಷ್ಟು ಮತಾಂತರಗಳಾಗಿವೆ? ಎಂಬ ಬಗ್ಗೆ ಸರಕಾರದ ಬಳಿ ಅಂಕಿ ಸಂಖ್ಯೆಗಳಿವೆಯೇ! ಅಧಿಕೃತ ಅಂಕಿ ಅಂಶಗಳಿಲ್ಲದೆ ಇಂತಹ ಉಗ್ರ ಕಾನೂನನ್ನು ಇವರು ಹೇಗೆ ತರುತ್ತಾರೆ?

ಅಂತರ್ಜಾತಿ ಮತ್ತು ಅಂತರ್‌ಧರ್ಮೀಯ ಮದುವೆಗಳು ಈ ದೇಶಕ್ಕೆ ಹೊಸದಲ್ಲ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರೇ ಜಾತಿ ರಹಿತ ಮದುವೆ ಮಾಡಲು ಹೋಗಿ ಕಲ್ಯಾಣದಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು. ಆನಂತರವೂ ಇಂತಹ ಲಕ್ಷಾಂತರ ಮದುವೆಗಳು ನಡೆದಿವೆ. ಉತ್ತರ ಕರ್ನಾಟಕದಲ್ಲಿ ಇಂಚಗೇರಿ ಮಠದ ಮುರಗೋಡ ಮಹಾದೇವರು ಸಾವಿರಾರು ಅಂತರ್ಜಾತೀಯ, ಅಂತರ್‌ಧರ್ಮೀಯ ಮದುವೆಗಳನ್ನು ಮಾಡಿಸಿದ್ದಾರೆ. ಹೀಗೆ ಮದುವೆಯಾದ ಜೋಡಿಗಳು ಇಂದಿಗೂ ಮಕ್ಕಳು, ಮೊಮ್ಮಕ್ಕಳನ್ನು ಕಂಡು ಸುಖವಾಗಿ ಜೀವಿಸುತ್ತಿವೆೆ. ಇವರಲ್ಲಿ ಯಾರೂ ಮತಾಂತರವಾಗಿಲ್ಲ.

ಸ್ವತಃ ನಾನು ಕೂಡ ಜಾತಿ ರಹಿತ ಮದುವೆಯಾದವನು, ನಾನಷ್ಟೇ ಅಲ್ಲ ಹೀಗೆ ಮದುವೆಯಾದ ಅನೇಕ ಜೋಡಿಗಳನ್ನು ನಾನು ನೋಡಿದ್ದೇನೆ. ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತರಾಗಿದ್ದ ನಿಝಾಮುದ್ದೀನ್ ಅವರು ಲಕ್ಷ್ಮೀ ಎಂಬ ಹಿಂದೂ ಮಹಿಳೆಯನ್ನು ಮದುವೆಯಾಗಿ ಸುಖವಾದ ಜೀವನ ನಡೆಸಿದರು. ಅಂಗವಿಕಲೆಯಾದ ಲಕ್ಷ್ಮೀ ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸ್ವತಃ ಹೊತ್ತುಕೊಂಡು ಬರುತ್ತಿದ್ದರು. ನಾನೊಮ್ಮೆ ಲಕ್ಷ್ಮೀ ಅವರಿಗೆ ‘‘ನಿಮ್ಮ ದಾಂಪತ್ಯ ಹೇಗಿದೆ, ಮತಾಂತರವಾಗಿದ್ದೀರಾ’’ ಎಂದು ಕೇಳಿದ್ದೆ. ಆಗ ಅವರು ‘‘ನಮ್ಮದು ಪ್ರೀತಿ ವಿವಾಹ, ಇಷ್ಟಪಟ್ಟು ಮದುವೆಯಾಗಿದ್ದೇವೆ, ಮತಾಂತರ ಪ್ರಶ್ನೆ ಇಲ್ಲಿ ಬರುವುದಿಲ್ಲ. ನಮ್ಮ ನಮ್ಮ ನಂಬಿಕೆ ನಮಗೆ. ಅವರು ನಮಾಝ್ ಮಾಡುತ್ತಾರೆ. ನಾನು ಕೃಷ್ಣನ ಫೋಟೊಗೆ ಪೂಜೆ ಮಾಡುತ್ತೇನೆ’’ ಎಂದು ಉತ್ತರಿಸಿದ್ದರು.

 ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಗಿದ್ದ ಎಡಪಂಥೀಯ ಒಲುವಿನ ನಗರಿ ಬಾಬಯ್ಯನವರು ಮುಸ್ಲಿಮ್ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಸುಖವಾದ ದಾಂಪತ್ಯ ನಡೆಸಿದರು. ಇಲ್ಲೂ ಮತಾಂತರ ಪ್ರಶ್ನೆ ಬರಲಿಲ್ಲ. ಪ್ರೊ. ಭೂಮಿಗೌಡ ಮತ್ತು ಸಬಿಹಾ ಇಷ್ಟಪಟ್ಟು ಮದುವೆಯಾಗಿ ನೆಮ್ಮದಿಯ ಬದುಕನ್ನು ಕಟ್ಟಿಕೊಂಡರು. ತುಂಬಾ ಹಿಂದೆ ಕಳೆದ ಶತಮಾನದ ನಲವತ್ತರ ದಶಕದಲ್ಲಿ ಹಿರಿಯ ಕಮ್ಯುನಿಸ್ಟ್ ನಾಯಕ ಎಂ.ಫಾರೂಕಿ ಮತ್ತು ಪಕ್ಷದ ಇನ್ನೊಬ್ಬ ಕಾರ್ಯಕರ್ತೆ ವಿಮಲಾ ಪರಸ್ಪರ ಪ್ರೀತಿಸಿ ಮದುವೆಯಾಗಿ ಬದುಕಿನ ಕೊನೆಯುಸಿರು ಇರುವವರೆಗೆ ಖುಷಿ ಖುಷಿಯಾಗಿದ್ದು ತಾವು ನಂಬಿದ ಕಮ್ಯುನಿಸ್ಟ್ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು.ಈಗಲೂ ಕ್ರಿಯಾಶೀಲವಾಗಿರುವ ಸಿಂಧನೂರಿನ ಕಮ್ಯುನಿಸ್ಟ್ ನಾಯಕ ಶೇಖ್ ಶಹಾ ಖಾದ್ರಿ ಅವರು ಸ್ನೇಹಾ ಅವರನ್ನು ಪ್ರೀತಿಸಿ ಮದುವೆಯಾದರು. ಅವರಿಬ್ಬರಲ್ಲಿ ಯಾರೂ ಮತಾಂತರವಾಗಿಲ್ಲ. ಇಂತಹ ಒಂದಲ್ಲ ಎರಡಲ್ಲ ಸಾವಿರಾರು ಉದಾಹರಣೆಗಳನ್ನು ಕೊಡಬಹುದು. ಇದೆಲ್ಲ ನಿಜವೆಂದು ಬಿಜೆಪಿ ನಾಯಕರಿಗೂ ಗೊತ್ತಿದೆ.

ಉಳಿದವರು ಹೋಗಲಿ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾಗಿದ್ದ ಅಶೋಕ ಸಿಂಘಾಲ್ ಅವರ ಮಗಳು ಸೀಮಾ ಮದುವೆಯಾಗಿದ್ದು ಈಗ ಕೇಂದ್ರ ಸಚಿವರಾಗಿರುವ ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನು. ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿಯವರ ಮಗಳು ರೇಣು ಮದುವೆಯಾಗಿದ್ದು ಬಿಜೆಪಿ ನಾಯಕರಾದ ಶಹನವಾಝ್ ಹುಸೇನ್ ಅವರನ್ನು, ಅಡ್ವಾಣಿ ಅವರ ಪುತ್ರಿ ಪ್ರತಿಭಾ ಮದುವೆಯಾಗಿದ್ದು ಅಲ್ತಾಫ್ ಹುಸೈನ್ ಅವರನ್ನು, ಸುಬ್ರಹ್ಮಣ್ಯ ಸ್ವಾಮಿ ಅವರ ಮಗಳು ಮದುವೆಯಾಗಿದ್ದು ನದೀಮ್ ಹೈದರ್ ಅವರನು,್ನ ಬಾಳಾ ಠಾಕ್ರೆ ಮೊಮ್ಮಗಳು ಮದುವೆಯಾಗಿದ್ದು ಅಶ್ಫಾಕ್ ಎಂಬ ಯುವಕನೊಂದಿಗೆ. ಇವರಿಗೆ ನಿಮ್ಮ ಕಾನೂನು ಅನ್ವಯವಾಗುವುದಿಲ್ಲವೇ?

‘ಲವ್ ಜಿಹಾದ್’ ಎಂಬುದು ಸಂಘ ಪರಿವಾರ ತನ್ನ ಹಿಡನ್ ಅಜೆಂಡಾ ಜಾರಿಗೆ ತರಲು ಸೃಷ್ಟಿಸಿದ ಕಟ್ಟು ಕತೆ. ಹಿಂದೂ,ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ, ಸಿಖ್ ಯುವಕ-ಯುವತಿಯರು ಪರಸ್ಪರ ಇಷ್ಟಪಟ್ಟು ಮದುವೆಯಾದರೆ ಅದು ಪ್ರೀತಿ ವಿವಾಹ. ಅದಕ್ಕೆ ‘ಲವ್ ಜಿಹಾದ್’ ಎಂದು ಬಣ್ಣ ಬಳಿಯುವುದು ರಾಜಕೀಯ ಹುನ್ನಾರ ಮಾತ್ರವಲ್ಲದೆ ಬೇರೇನೂ ಅಲ್ಲ. ಈ ದೇಶದ ಬಹುತ್ವವನ್ನು ನಾಶ ಮಾಡಿ ಬಾಬಾಸಾಹೇಬರು ರೂಪಿಸಿದ ಸರ್ವರ ಏಳಿಗೆಯ ಸಂವಿಧಾನವನ್ನು ಸಮಾಧಿ ಮಾಡಲು ಕೋಮುವಾದಿ ಶಕ್ತಿಗಳು ಇಂತಹ ಹುಯಿಲೆಬ್ಬಿಸುತ್ತಿವೆೆ. ಅದು ಹೋಗಲಿ ಕಳೆದ ಜನವರಿಯಲ್ಲಿ ಕೇಂದ್ರ ಸರಕಾರವೇ ‘‘ಸಂಸತ್ತಿನಲ್ಲಿ ಲವ್ ಜಿಹಾದ್ ಪ್ರಕರಣಗಳು ವರದಿಯಾಗಿಲ್ಲ’’ ಎಂದು ಹೇಳಿತ್ತು.

ಮದುವೆ ಎಂಬುದು ಇಬ್ಬರ ನಡುವಿನ ಖಾಸಗಿ ವಿಷಯ. ಅಲ್ಲಿ ಜಾತಿ ಮತಕ್ಕೆ ಜಾಗವಿಲ್ಲ. ಪರಸ್ಪರ ಇಷ್ಟಪಟ್ಟ ಯಾರಾದರೂ ಮದುವೆಯಾಗಬಹುದು. ನಮ್ಮ ಸಂವಿಧಾನವೂ ಅದಕ್ಕೆ ಸಮ್ಮತಿ ನೀಡಿದೆ.ಸಂವಿಧಾನಕ್ಕಿಂತ ಈಗ ‘ಲವ್ ಜಿಹಾದ್’ ಎಂದು ಅರಚಾಡುವವರೆಲ್ಲ ದೊಡ್ಡವರಲ್ಲ.

ಯಾವುದೇ ಜಾತಿ ಇಲ್ಲವೇ ಮತಕ್ಕೆ ಸೇರಿದ ಯುವಕ ಮತ್ತು ಯುವತಿ ಪರಸ್ಪರ ಇಷ್ಟಪಟ್ಟು ಮದುವೆಯಾಗಲು ಯಾವ ದೊಣ್ಣೆ ನಾಯಕರ ಅಪ್ಪಣೆಯೂ ಬೇಕಾಗಿಲ್ಲ. ಇದಕ್ಕಾಗಿಯೇ ವಿಶೇಷ ಕಾನೂನು ಇದೆ(Special Marriage Act) ಆ ಕಾನೂನಿನ ಪ್ರಕಾರ ಮದುವೆಯಾದರೆ ಯಾರೂ ಅಪಸ್ವರ ತೆಗೆಯುವಂತಿಲ್ಲ. ಬಹಳವೆಂದರೆ ಅಂತಹ ಯುವಕ ಯುವತಿಯರ ತಂದೆ ತಾಯಿ ಆಕ್ಷೇಪಿಸಬಹುದು. ಆದರೆ ಇದನ್ನೊಂದು ರಾಜಕೀಯ ಅಸ್ತ್ರ ಮಾಡಿಕೊಂಡು ಹಿಂದೂ ವೋಟ್ ಬ್ಯಾಂಕ್ ನಿರ್ಮಿಸಿಕೊಂಡು ಚುನಾವಣೆ ಗೆಲ್ಲಲು ಹೊರಟವರಿಗೆ, ಸ್ವಯಂ ಘೋಷಿತ ಜಾತಿ ಮತ ರಕ್ಷಕರಿಗೆ ಪ್ರೀತಿ ವಿವಾಹಗಳನ್ನು ತಡೆಯುವ ಹಕ್ಕಿಲ್ಲ.ಮದುವೆಯಾಗುವುದು ಜಾತಿ, ಮತಗಳಲ್ಲ ಹುಡುಗ -ಹುಡುಗಿ ಎಂಬ ಅರಿವು ಇದನ್ನು ವಿರೋಧಿಸುವವರಿಗೆ ಇರಬೇಕು.

ಇಂತಹ ಪ್ರಚೋದನಕಾರಿ ವಿಷಯಗಳಿಂದಲೇ ತನ್ನ ರಾಜಕೀಯ ಬದುಕನ್ನು ಕಟ್ಟಿಕೊಂಡಿರುವ ಕಾನೂನು ಪಂಡಿತ ಸಿ.ಟಿ.ರವಿ ಅವರು ‘ಲವ್ ಜಿಹಾದ್’ ಕುರಿತು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ ‘‘ಕೇವಲ ಮದುವೆಗಾಗಿ ಮತಾಂತರ ಆಗುವಂತಿಲ್ಲ’’ ಎಂದು ಆ ನ್ಯಾಯಾಲಯ ಹೇಳಿದೆ ಎಂದು ತಿಳಿಸಿ, ‘‘ಕರ್ನಾಟಕದಲ್ಲೂ ಹರ್ಯಾಣ, ಉತ್ತರ ಪ್ರದೇಶ ಮಾದರಿ ಕಾನೂನು ತರುವ ಬಗ್ಗೆ ಯೋಚಿಸಲಾಗುತ್ತದೆ’’ ಎಂದಿದ್ದಾರೆ. ‘‘ಜಿಹಾದಿಗಳಿಂದ ನಮ್ಮ ಸಹೋದರಿಯರ ಘನತೆ ಗೌರವ ಹರಣವಾಗುತ್ತಿರುವುದನ್ನು ಸುಮ್ಮನೆ ನೋಡುತ್ತಾ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ’’ ಎಂದಿದ್ದಾರೆ. ರವಿ ಮಾತಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸೋದರಿಯರ ಬಗ್ಗೆ ಇವರ ಕಾಳಜಿ ಶ್ಲಾಘನೀಯ. ಆದರೆ ಪ್ರೀತಿಸಿ ಸ್ವಧರ್ಮ (ಹಿಂದೂ) ವಿವಾಹವಾದ ಹಿಂದೂ ಯುವತಿಯರ ಮರ್ಯಾದೆಗೇಡು ಹತ್ಯೆಯ ಬಗ್ಗೆ ಇವರೇಕೆ ಮಾತಾಡುವುದಿಲ್ಲ. ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಯಾಕೆ ಮೌನ ತಾಳುತ್ತಾರೆ? ಈ ಪ್ರಶ್ನೆಗೆ ಇವರ ಬಳಿಯಾಗಲಿ, ಇವರಿಂದ ಹೇಳಿಸುವ ನಾಗಪುರದ ಗುರುಗಳ ಬಳಿಯಾಗಲಿ ಉತ್ತರವಿಲ್ಲ.

ಕೊನೆಯದಾಗಿ ಯಾವ ಕಾನೂನಿನ ಅಡಿಯಲ್ಲಿ ಇಂತಹ ಮದುವೆಗಳನ್ನು ಇವರು ತಡೆಯಲು ಕಾನೂನು ರೂಪಿಸುತ್ತಾರೆ ಎಂಬುದರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಾಗಲಿ, ಸಿ. ಟಿ. ರವಿ, ಬೊಮ್ಮಾಯಿ ಅವರಾಗಲಿ ಸ್ಪಷ್ಟೀಕರಣ ನೀಡಿಲ್ಲ. ‘ಲವ್ ಜಿಹಾದ್’ ಎನ್ನುವ ಶಬ್ದ ಇಸ್ಲಾಮ್ ಧರ್ಮಗ್ರಂಥಗಳಲ್ಲಾಗಲಿ, ನಮ್ಮ ನೆಲದ ಕಾನೂನಿನ ಪುಸ್ತಕಗಳಲ್ಲಾಗಲಿ ಎಲ್ಲೂ ಇಲ್ಲ. ಇದರ ಬಗ್ಗೆ ವ್ಯಾಖ್ಯಾನವೂ ಇಲ್ಲ. ಯಾವ ಕಾನೂನು ಕೂಡ ‘ಲವ್ ಜಿಹಾದ್’ ಬಗ್ಗೆ ವ್ಯಾಖ್ಯಾನಿಸಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವೇ ಹೇಳಿದೆ. ಹೀಗಿರುವಾಗ ಯಾವ ಆಧಾರದಲ್ಲಿ ಕರ್ನಾಟಕದ ಬಿಜೆಪಿ ಸರಕಾರ ಕಾನೂನು ರೂಪಿಸಲು ಹೊರಟಿದೆ? ಇವರು ಉಲ್ಲೇಖಿಸುವ ಅಲಹಾಬಾದ್ ಹೈಕೋರ್ಟ್ ತೀರ್ಪಿನಲ್ಲಿ ಕೂಡ ‘‘ಮತಾಂತರ ಎನ್ನುವುದು ಅಂತರ್ ಧರ್ಮೀಯ ವಿವಾಹಗಳಿಗೆ ಅಸ್ತ್ರವಾಗಬಾರದು’’ ಎಂದಿದೆಯೇ ಹೊರತು ಅಂತರ್ ಧರ್ಮೀಯ ಮದುವೆ ಅಕ್ರಮ ಎಂದು ಹೇಳಿಲ್ಲ. ವಾಸ್ತವಾಂಶ ಹೀಗಿರುವಾಗ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ನ್ಯಾಯಾಲಯದ ತೀರ್ಪನ್ನು ತಿರುಚುವುದು ಸರಿಯಲ್ಲ.

ಇಂದು ‘ಲವ್ ಜಿಹಾದ್’ ನೆಪ ಮಾಡಿಕೊಂಡು ಹಿಂದೂ, ಮುಸ್ಲಿಮ್ ಯುವಕ, ಯುವತಿಯರು ಪ್ರೀತಿಸಿ ವಿವಾಹವಾಗುವುದನ್ನು ವಿರೋಧಿಸಿ ತಡೆಯಲು ಹೊರಟ ಇವರು ನಾಳೆ ಬ್ರಾಹ್ಮಣ-ದಲಿತ, ವೀರಶೈವ -ಕುರುಬ, ಒಕ್ಕಲಿಗ-ಲಂಬಾಣಿ ಹೀಗೆ ಅಂತರ್ಜಾತಿ ಮದುವೆಗಳನ್ನು ತಡೆಯುವುದಿಲ್ಲ ಎನ್ನಲು ಏನು ಗ್ಯಾರಂಟಿ?

 ಸಂವಿಧಾನದಲ್ಲಿ ವಯಸ್ಕ ಯುವಕ-ಯುವತಿ ಮದುವೆಗೆ ಯಾವುದೇ ಕಾನೂನಿನ ಅಡ್ಡಿಯಿಲ್ಲ.ಸಂವಿಧಾನಕ್ಕೆ ವ್ಯತಿರಿಕ್ತವಾದ ಮನುವಿನ ಕಾನೂನನ್ನು ದೇಶದ ಮೇಲೆ ಹೇರಲು ಹೊರಟರೆ ಭಾರೀ ಬೆಲೆ ತೆರಬೇಕಾಗುತ್ತದೆ. ಪ್ರೀತಿ ಪ್ರೇಮ, ಮಮತೆಯಿಂದ ಮನುಷ್ಯನ ಮನಸ್ಸನ್ನು ಅರಳಿಸಿ ಆರೋಗ್ಯಕರ ಸೌಹಾರ್ದ ಸಮಾಜ ಕಟ್ಟಬೇಕು. ಬರೀ ದ್ವೇಷ, ಆಕ್ರೋಶಗಳಿಂದ ಒಂದು ಸಮಾಜವನ್ನಾಗಲಿ ದೇಶವನ್ನಾಗಲಿ ಕಟ್ಟಲು ಆಗುವುದಿಲ್ಲ. ವೋಟಿಗಾಗಿ ಸೀಟಿಗಾಗಿ ಮನಸ್ಸುಗಳ ನಡುವೆ ಬೆಂಕಿ ಹಚ್ಚುವ ಹೊಲಸು ರಾಜಕೀಯಕ್ಕೆ ಬಸವಣ್ಣ, ಕುವೆಂಪು, ಕನಕದಾಸ, ಶಿಶುನಾಳ ಶರೀಫ ಸಾಹೇಬರ ನೆಲದಲ್ಲಿ ಅವಕಾಶವಿಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News