ಕೇಂದ್ರ ಮಾಹಿತಿ ಆಯೋಗದ ಎಲ್ಲ ಹುದ್ದೆಗಳನ್ನು ಯಾಕೆ ಭರ್ತಿ ಮಾಡಿಲ್ಲ ?: ಆರ್‌ಟಿಐ ಕಾರ್ಯಕರ್ತರ ಪ್ರಶ್ನೆ

Update: 2020-11-08 18:21 GMT

ಹೊಸದಿಲ್ಲಿ, ನ. 7: ಕೇಂದ್ರ ಮಾಹಿತಿ ಆಯೋಗ (ಸಿಐಸಿ)ಕ್ಕೆ ಮುಖ್ಯ ಮಾಹಿತಿ ಆಯುಕ್ತರನ್ನು ನೇಮಕ ಮಾಡುತ್ತಿರುವ  ಮಾಹಿತಿ ಆಯುಕ್ತರ ನೇಮಕಾತಿ ವಿಳಂಬದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ ಇಬ್ಬರು ದೂರುದಾರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸಿಐಸಿಗೆ ಮುಖ್ಯಸ್ಥರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ಸಿನ್ಹಾ ನೇಮಕಾತಿ ಹಾಗೂ ಇತರ ಮೂವರು ಮಾಹಿತಿ ಆಯುಕ್ತರ ನೇಮಕಾತಿ ಶ್ಲಾಘನೀಯ ನಡೆ. ಈ ಹಿಂದೆ ಆಯೋಗಕ್ಕೆ ಮುಖ್ಯಸ್ಥರೇ ಇರಲಿಲ್ಲ. ಅಲ್ಲದೆ, ಶೇ. 50ಕ್ಕಿಂತ ಕಡಿಮೆ ಅಧಿಕಾರಿಗಳನ್ನು ಹೊಂದಿತ್ತು ಎಂದು  ದೂರುದಾರರಾಗಿರುವ  ಸತಾರ್ಕ್ ನಾಗರಿಕ ಸಂಘಟನೆಯ ಅಂಜಲಿ ಭಾರಧ್ವಾಜ್ ಹಾಗೂ ಅಮೃತಾ ಜೊಹ್ರಿ ಹೇಳಿದ್ದಾರೆ.

ಸಿನ್ಹಾ ಪ್ರಮಾಣ ವಚನ ಸ್ವೀಕರಿಸಿದ್ದರೆ, ನೂತನ ಮಾಹಿತಿ ಆಯುಕ್ತರಾದ ಪತ್ರಕರ್ತ ಉದಯ್ ಮಹುರ್ಕಾರ್, ಮಾಜಿ ಕಾರ್ಮಿಕ ಕಾರ್ಯದರ್ಶಿ ಹೀರಾ ಲಾಲ್ ಸಮರಿಯಾ ಹಾಗೂ ಮಾಜಿ ಉಪ ಮಹಾಲೇಖಪಾಲ ಸರೋಜ್ ಪುನ್ಹಾನಿ ಅವರು ಇನ್ನಷ್ಟೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಕೇಂದ್ರ ಮಾಹಿತಿ ಆಯೋಗ (ಸಿಐಸಿ)ದ ಎಲ್ಲ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರ ಬಗ್ಗೆ ತಮಗೆ ಅಸಮಾಧಾನವಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರರು ಹೇಳಿದ್ದಾರೆ.

ಸಿಐಸಿಯ ಮುಖ್ಯಸ್ಥ ಬಿಮಲ್ ಜುಲ್ಕಾ 2020 ಆಗಸ್ಟ್ 26ರಂದು ನಿವೃತ್ತರಾದರು ಹಾಗೂ ಇನ್ನೋರ್ವ ಆಯುಕ್ತರು 2020 ಸೆಪ್ಟಂಬರ್ ಅಂತ್ಯದಲ್ಲಿ ಪದವಿ ತ್ಯಜಿಸಿರುವುದರಿಂದ ಮುಖ್ಯಸ್ಥರ ಸಹಿತ 6 ಹುದ್ದೆಗಳು ಖಾಲಿ ಇವೆ. ಆಯೋಗದಲ್ಲಿ ಈ ಹಿಂದೆ ಸಿನ್ಹಾ ಅವರು ಮಾಹಿತಿ ಆಯುಕ್ತರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದುದರಿಂದ ಈಗ ನಾಲ್ಕು ಹುದ್ದೆಗಳು ಭರ್ತಿ ಆಗಿದ್ದರೂ ಇನ್ನೂ ಮೂರು ಹುದ್ದೆಗಳು ಬಾಕಿ ಇವೆ.

ಈಗಿರುವ ಆಯುಕ್ತರ ನಿರಂತರ ನಿವೃತ್ತಿಯಿಂದ ಹುದ್ದೆಗಳು ಖಾಲಿಯಾಗುತ್ತಿರುವ ಹೊರತಾಗಿಯೂ ಆಯುಕ್ತರನ್ನು ಸಮಯೋಚಿತವಾಗಿ ನೇಮಕ ಮಾಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿರುವುದು ದುರದೃಷ್ಟಕರ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಿಐಸಿಯ ಮುಂದೆ  ಸದ್ಯ  37,000 ಮನವಿ ಹಾಗೂ ದೂರುಗಳು ಬಾಕಿ ಇವೆ. ತುರ್ತು ವಿಚಾರಣೆಯ ಅಗತ್ಯ ಇರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಬಳಿಕ ಈ ನೇಮಕಾತಿ ಮಾಡಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವ ಸಲುವಾಗಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಕೂಡ ಉಲ್ಲಂಘಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ನ ಮುಂದೆ ಅರ್ಜಿದಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News