ಶ್ವೇತಭವನ ಪ್ರವೇಶಕ್ಕೆ ಮೊದಲ ಹೆಜ್ಜೆಯಿಟ್ಟ ಬೈಡನ್

Update: 2020-11-09 17:01 GMT

ವಾಶಿಂಗ್ಟನ್, ನ. 9: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋಸೆಫ್ ಬೈಡನ್ ಇನ್ನು 73 ದಿನಗಳಲ್ಲಿ ಶ್ವೇತಭವನವನ್ನು ಪ್ರವೇಶಿಸುವುದಕ್ಕೆ ಪೂರಕವಾಗಿ ರವಿವಾರ ಮೊದಲ ಹೆಜ್ಜೆಗಳನ್ನು ಇಟ್ಟಿದ್ದಾರೆ. ಅದೇ ವೇಳೆ, ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಸೋಲನ್ನು ಒಪ್ಪಿಕೊಳ್ಳಲು ಮತ್ತೊಮ್ಮೆ ನಿರಾಕರಿಸಿದ್ದಾರೆ ಹಾಗೂ ಚುನಾವಣಾ ಫಲಿತಾಂಶದ ಬಗ್ಗೆ ಸಂಶಯಗಳನ್ನು ಬಿತ್ತುವ ಪ್ರಯತ್ನಗಳನ್ನು ಮತ್ತೊಮ್ಮೆ ಮಾಡಿದ್ದಾರೆ.

ಡೆಲಾವೆರ್ ನಗರದ ವಿಲ್ಮಿಂಗ್ಟನ್‌ನಲ್ಲಿ ಸೋಮವಾರ, ತಾವು ಸ್ಥಾಪಿಸಿರುವ ಕೋವಿಡ್-19 ಸಲಹಾ ತಂಡದಿಂದ ಜಂಟಿಯಾಗಿ ವಿವರಣೆಯನ್ನು ಪಡೆದುಕೊಳ್ಳುವುದಾಗಿ ಬೈಡನ್ ಮತ್ತು ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರವಿವಾರ ಘೋಷಿಸಿದರು.

 ಬಳಿಕ ಬೈಡನ್ ಕೊರೋನ ವೈರಸ್ ಮತ್ತು ಆರ್ಥಿಕ ಚೇತರಿಕೆಗೆ ಸಂಬಂಧಿಸಿ ತನ್ನ ಅಭಿಪ್ರಾಯಗಳನ್ನು ಹೇಳಲಿದ್ದಾರೆ.

ಈ ನಡುವೆ, ವಾಶಿಂಗ್ಟನ್ ಸಮೀಪದ ತನ್ನ ಗಾಲ್ಫ್ ಕೋರ್ಸ್‌ನಲ್ಲಿ ಟ್ರಂಪ್ ರವಿವಾರ ಗಾಲ್ಫ್ ಆಡಿದರು. ಶನಿವಾರ ಬೈಡನ್ ಅಧ್ಯಕ್ಷರಾಗಿ ಆಯ್ಕೆಯಾದ ಸುದ್ದಿ ಹೊರಬಿದ್ದಾಗಲೂ ಅವರು ಇದೇ ಗಾಲ್ಫ್ ಕೋರ್ಸ್‌ನಲ್ಲಿ ಗಾಲ್ಫ್ ಆಡುತ್ತಿದ್ದರು.

ಚುನಾವಣಾ ಫಲಿತಾಂಶದ ಬಗ್ಗೆ ಟ್ರಂಪ್ ಈ ವಾರ ಹಲವಾರು ಮೊಕದ್ದಮೆಗಳನ್ನು ಸಲ್ಲಿಸಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎಂದು ಅವರ ವಕೀಲ ರೂಡಿ ಗಿಯುಲಿಯಾನಿ ಹೇಳಿದ್ದಾರೆ. ಮತ ಎಣಿಕೆಯಲ್ಲಿ ವಂಚನೆ ನಡೆದಿದೆ ಎಂಬುದನ್ನು ಸಾಬೀತುಪಡಿಸಲು ತನ್ನ ಬಳಿ ‘ಸಾಕಷ್ಟು ಪುರಾವೆಯಿದೆ’ ಎಂದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News